ವಿಜಯಪುರ-ಕಲಬುರಗಿ ಹೆದ್ದಾರಿ ಬಂದ್ ಮಾಡಿ ರೈತರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು ಅವರ ಸಂಕಷ್ಟಗಳಿಗೆ ಸ್ಪಂದಿಸಿ ಪರಿಹಾರ ನೀಡದಿರುವುದು ವಿಷಾದನೀಯ ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಬೇಸರ ವ್ಯಕ್ತಪಡಿಸಿದರು.
ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ನಡೆಸಿದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಕೇಳುತ್ತಿದ್ದಾರೆಯೇ ಹೊರತು, ಹೆಚ್ಚಿನ ಬೇಡಿಕೆಗಳನ್ನು ಮುಂದಿಡುತ್ತಿಲ್ಲ. ಹೀಗಾಗಿ ಸರ್ಕಾರಗಳು ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದರು.
ಈ ವೇಳೆ ರೈತ ಮುಖಂಡರಾದ ಪೀರು ಕೇರೂರ, ಸಿದ್ದಣ್ಣ ಹೆಗ್ಗನದೊಡ್ಡಿ ಹಾಗೂ ಬಂಗಾರಪ್ಪಗೌಡ ಬಿರಾದಾರ ಮಾತನಾಡಿ, ರೈತರ ಸಾಲ ಮನ್ನಾ ಮಾಡಬೇಕು, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೃಷಿ ಕ್ಷೇತ್ರದ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಯುವ ರೈತ ಸಂಗಮೇಶ ಡಿಗ್ಗಿ ಮಾತನಾಡಿ, ತಮ್ಮ ಕಾಮಗಾರಿಗಳಿಗೆ ಅನುದಾನ ಪಡೆಯಲು ಸಭೆ ನಡೆಸುವ ರಾಜಕಾರಣಿಗಳು ರೈತರ ಸಮಸ್ಯೆಗಳು ಎದುರಾದಾಗ ಸಭೆ ನಡೆಸಿ ಪರಿಹಾರ ಕಲ್ಪಿಸಲು ಮುಂದಾಗುತ್ತಿಲ್ಲ. ರೈತರ ಹೋರಾಟಗಳು ಪಕ್ಷಾತೀತವಾಗಿರಬೇಕು. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ರೈತರ ಪರವಾಗಿ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು. ವಿದೇಶಿ ವಸ್ತುಗಳ ಆಮದಿಗೆ ಬದಲಾಗಿ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಿದಾಗ ದೇಶದ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯಲು ಸಾಧ್ಯ ಎಂದರು.
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದ ಬಳಿ ರೈತಪರ ಸಂಘಟನೆಗಳ ನೇತೃತ್ವದಲ್ಲಿ ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಶಂಕರಗೌಡ ಹಿರೇಗೌಡರ, ರೈತ ಸಂಘದ ಉಪಾಧ್ಯಕ್ಷ ಮಲ್ಲಣ್ಣ ಬೊಮ್ಮನಹಳ್ಳಿ, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಹೂಗಾರ, ತಾಲೂಕಾಧ್ಯಕ್ಷ ಬಸವರಾಜ ರಂಜುಣಗಿ, ಸುನೀಲ ಜಾಬಾನೂರ, ಮಲ್ಲಿಕಾರ್ಜುನ ಪೂಜಾರಿ, ಮಲ್ಲನಗೌಡ ಹಡಗಲಗೇರಿ, ಗಂಗಣ್ಣ ಕಡಗಂಚಿ, ಗುರುರಾಜ ಪಡಶೇಟ್ಟಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

