ನಿಷ್ಠಾವಂತ ಕಾರ್ಯಕರ್ತರ ಪರ ಮುಖಂಡರ ಒಕ್ಕೊರಲ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಚುನಾವಣೆ ಬಂದಾಗ ಮಾತ್ರ ಪಕ್ಷ ನೆನಪಾಗುವವರಿಗಲ್ಲ, ಪಕ್ಷಕ್ಕಾಗಿ ಹಗಲಿರುಳು ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿ..! ಪಕ್ಷದ ಸಂಘಟನೆಗಾಗಿ ಶ್ರಮಿಸಿದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿ..! ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರಿಗೆ ಆದ್ಯತೆ ನೀಡಿ..!
ಹೌದು, ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದ ಬಿಜೆಪಿ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂಬ ಒಕ್ಕೊರಲ ಆಗ್ರಹ ಕೇಳಿಬಂದಿತು.
ಮಂಗಳವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಿಪಂ ಹಾಗೂ ತಾಪಂ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು, ಪಕ್ಷಕ್ಕಾಗಿ ನಿರಂತರವಾಗಿ ದುಡಿದವರನ್ನು ಗುರುತಿಸಿ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಮಾತನಾಡಿ, ಇಂಡಿ ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು. ಶಾಸಕರ ಜನಸೇವಾ ಸಭೆಗಳ ಕುರಿತು ಟೀಕಿಸಿದ ಅವರು, ಅವು ಕಾಂಗ್ರೆಸ್ ಸಭೆಗಳಾಗಿವೆ ಎಂದು ಆರೋಪಿಸಿದರು. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು. 2028ರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಲ್ಲಿ ಬಿಜೆಪಿ ಅರಳುವುದು ಶತಸಿದ್ಧ ಎಂದು ಅವರು ಹೇಳಿದರು.
ಮುಖಂಡರಾದ ಕಾಸುಗೌಡ ಬಿರಾದಾರ, ಅನೀಲ ಜಮಾದಾರ, ಭೀಮಸಿಂಗ್ ರಾಠೋಡ, ಮಲ್ಲಿಕಾರ್ಜುನ ಕಿವುಡೆ, ಅಣ್ಣಪ್ಪ ಖೈನೂರ ಹಾಗೂ ಎಸ್.ಎ. ಪಾಟೀಲ ಮಾತನಾಡಿ, ಪಕ್ಷದ ಬಲವರ್ಧನೆಗೆ ಶ್ರಮಿಸಿದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ಚುನಾವಣಾ ಯಶಸ್ಸಿಗೆ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಸಿದ್ದಲಿಂಗ ಹಂಜಗಿ, ರಾಜಕುಮಾರ ಸಗಾಯಿ, ಶಿಲವಂತ ಉಮಾರಾಣಿ, ಬಿ.ಎಸ್. ಪಾಟೀಲ ಹಿರೇಬೇವನೂರ, ರವಿ ವಗ್ಗೆ, ದೇವೇಂದ್ರ ಕುಂಬಾರ ಹಾಗೂ ಬಸಮ್ಮ ವರಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಆದೃಶಪ್ಪ ವಾಲಿ ಸ್ವಾಗತಿಸಿದರು. ಶಾಂತು ಕಂಬಾರ ನಿರೂಪಿಸಿ, ವಂದಿಸಿದರು.

