ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜೀವನಾಧಾರಿತ ನಾಟಕಕ್ಕೆ ಸಿದ್ಧತೆ | ಶಾಸಕ ಶಿವಾನಂದ ಪಾಟೀಲರಿಂದ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಮುಳವಾಡ ಗ್ರಾಮದಲ್ಲಿ ಶ್ರೀ ಸತ್ಯಸಾಯಿಬಾಬಾ ಯುವಕ ಸೇವಾ ಸಂಘದ ವತಿಯಿಂದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜೀವನಾಧಾರಿತ ‘ಬಯಲು ಬಯಲಾಯಿತ್ತು’ ನಾಟಕ ಪ್ರದರ್ಶನವನ್ನು ಅಕ್ಟೋಬರ್ 16ರಂದು ಶುಕ್ರವಾರ ಸಂಜೆ 7.45ಕ್ಕೆ ಗ್ರಾಮದ ಶ್ರೀ ಸತ್ಯಸಾಯಿಬಾಬಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸರಳತೆ, ವೈರಾಗ್ಯ, ಮಾನವೀಯ ಮೌಲ್ಯಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಬದುಕು ಮತ್ತು ಸಂದೇಶವನ್ನು ರಂಗಭೂಮಿಯ ಮೂಲಕ ಪರಿಚಯಿಸುವ ಉದ್ದೇಶದಿಂದ ನಾಟಕ ಆಯೋಜಿಸಲಾಗಿದೆ.
ಬನಹಟ್ಟಿಯ ವಾತ್ಸಲ್ಯ ವಿಚಾರ ವೇದಿಕೆ ನಾಟಕವನ್ನು ಪ್ರಸ್ತುತಪಡಿಸಲಿದ್ದು, ಪ್ರೊ. ಬಿ.ಆರ್. ಪೋಲಿಸ್ ಪಾಟೀಲ ರಚಿಸಿದ್ದಾರೆ. ವೈ.ಡಿ. ಬಾದಾಮಿ ನಿರ್ದೇಶನದ ಜವಾಬ್ದಾರಿ ವಹಿಸಿದ್ದು, ಸಾಣೇಹಳ್ಳಿಯ ಮಂಜುಳಾ ಅವರೂ ನಾಟಕ ಪ್ರಸ್ತುತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದು, ಎಸ್.ಆರ್. ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕ ಶಿವಾನಂದ ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಜ್ಯೋತಿ ಬೆಳಗಿಸುವರು. ಈರಣ್ಣ ಪಟ್ಟಣಶೆಟ್ಟಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು.
ಮುಖ್ಯ ಅತಿಥಿಗಳಾಗಿ ಕೆ.ಎಸ್. ದೇಸಾಯಿ, ಯಂಕನಗೌಡ ಎಂ. ಪಾಟೀಲ, ಬಸವರಾಜ ಪಿ. ಕೆಂಗನಾಳ, ಬಸವರಾಜ ಕೆ. ಪಾಟೀಲ, ಅಶೋಕ ಗು. ಕಳಸಗೊಂಡ, ಬಾಬು ನಿಂ. ಕಾರಜೋಳ, ಬಸಲಿಂಗಪ್ಪ ಗೊಳಸಂಗಿ, ಅಣ್ಣಪ್ಪ ಐಹೊಳ್ಳಿ, ಬಸವರಾಜ ಕಲ್ಯಾಣಶೆಟ್ಟಿ, ಮಹಾದೇವ ಮಮದಾಪೂರ, ಸಂಗಮೇಶ ಹಂಚಿನಾಳ ಹಾಗೂ ಮಹಾಂತೇಶ ಹೂಗೋಡಿ ಭಾಗವಹಿಸಲಿದ್ದಾರೆ.
ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜೀವನದ ಆದರ್ಶಗಳು ಹಾಗೂ ತಾತ್ವಿಕ ಸಂದೇಶಗಳನ್ನು ಸಾರುವ ಈ ನಾಟಕ ಪ್ರದರ್ಶನಕ್ಕೆ ಮುಳವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಶ್ರೀ ಸತ್ಯಸಾಯಿಬಾಬಾ ಯುವಕ ಸೇವಾ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.

