ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಪಾಪದ ಹೊರೆ ಕಡಿಮೆಯಾಗಿ ಪುಣ್ಯದ ಫಲ ಪ್ರಾಪ್ತಿಯಾಗುತ್ತದೆ. ಅಲ್ಲದೇ ಮಠಮಾನ್ಯಗಳಲ್ಲಿ ನಡೆಯುವ ಪುರಾಣ ಪುಣ್ಯಕಥೆಗಳನ್ನು ಆಲಿಸುವುದರಿಂದ ಮತ್ತು ವಿಭೂತಿಯನ್ನು ಹಣೆಗೆ ಧರಿಸುವುದರಿಂದ ಮನುಷ್ಯನ ಆರೋಗ್ಯ ಮತ್ತು ಆಯಸ್ಸು ಹೆಚ್ಚುತ್ತದೆ ಎಂದು ಮಾಗಣಗೇರಿಯ ಡಾ.ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ಕಲಕೇರಿ ಗ್ರಾಮದ ಭವಾನಿ ದೇವಸ್ಥಾನದಲ್ಲಿ ಶರನ್ ನವರಾತ್ರಿಯ ದಸರೆಯ ಪ್ರಯುಕ್ತ ರವಿವಾರ ಸಂಜೆ ಹಮ್ಮಿಕೊಂಡ ೩೩ನೇ ವರ್ಷದ ಪರಮೇಶ್ವರಿ ದೇವಿಯ ಪುರಾಣ ಪ್ರಾರಂಬೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಷ್ಟರ ರಕ್ಷಣೆ ಮತ್ತು ದುಷ್ಠರ ದಮನ ದೇವಿ ಪುರಾಣದ ಮೂಲ ಉದ್ದೇಶವಾಗಿದೆ. ಆಧುನಿಕ ಜೀವನದ ಜಂಜಾಟಗಳಿಂದ ಹೊರ ಬರಲು ಮನಸ್ಸಿನ ಸಂತೃಪ್ತಿಗಾಗಿ ಮಾನಸಿಕ ನೆಮ್ಮದಿ ಹೊಂದಲು ಪುರಾಣ ಪ್ರವಚನ ಆಲಿಸುವದು ಅತ್ಯವಶ್ಯವಾಗಿದೆ ಎಂದರು.
ಕಲಕೇರಿಯ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಮಾತನಾಡಿ, ಜೀವನದಲ್ಲಿ ಸಾಕಷ್ಟು ಸೌಕರ್ಯಗಳಿದ್ದರೂ ಯುವ ಪೀಳಿಗೆಯಲ್ಲಿ ಮಾನಸಿಕ ನೆಮ್ಮದಿಯ ಕೊರತೆ ಎದ್ದು ಕಾಣುತ್ತಿದೆ, ಅವರಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರದ ಅವಶ್ಯಕತೆಯಿದ್ದು, ನಮ್ಮಲ್ಲಿರುವ ದುರ್ಗುಣಗಳನ್ನು ದೂರ ಮಾಡಿ ಉತ್ತಮ ಸಂಸ್ಕಾರ ನೀಡುವ ಶಕ್ತಿ ದೇವಿ ಪುರಾಣಕ್ಕಿದೆ. ಧರ್ಮದ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಹಿರೂರಿನ ಜಯಸಿದ್ದೇಶ್ವರ ಶಿವಾಚಾರ್ಯರು ಪುರಾಣವನ್ನು ನಡೆಸಿಕೊಟ್ಟರು, ಗದ್ದುಗೆಮಠದ ಗುರುಮಡಿವಾಳೇಶ್ವರ ಶಿವಾಚಾರ್ಯರು, ಜಾಲಹಳ್ಳಿಮಠದ ಡಾ.ವ್ಹಿ ಕೆ ಜಾಲಹಳ್ಳಿಮಠ, ಕುಮಾರಸ್ವಾಮಿ ಜಾಲಹಳ್ಳಿಮಠ ಅಧ್ಯಕ್ಷತೆಯನ್ನು ವಹಿಸಿದ್ದರು, ವೇ.ಮೂ. ಸದಾನಂದ ಹಿರೇಮಠ ನೇತ್ರತ್ವ ವಹಿಸಿದ್ದರು, ಮೃತ್ಯುಂಜಯ ಮಠಪತಿ ಪೂಜಾ ಕೈಂಕರ್ಯ ನೆರವೇರಿಸಿದರು. ಕಡಕೋಳ ಮನೆತನದ ಸುಮಂಗಲೆಯರು ಆರತಿ ಸೇವೆಯನ್ನು ಸಲ್ಲಿಸಿದರು. ದೇವಿ ಉಪಾಸಕ ಮೋತಿಲಾಲ್ ಕುಲಕರ್ಣಿ ಅವರ ನೇತ್ರತ್ವದಲ್ಲಿ ಘಟಸ್ಥಾಪನೆ ಮಾಡಲಾಯಿತು.
ಸಂಗಾರಡ್ಡಿ ದೇಸಾಯಿ, ವಿರೇಶ ನಾಡಗೌಡ, ಮಲಕಾಜಪ್ಪಗೌಡ ಬಿರಾದಾರ, ಮಲ್ಲಿನಾಥ ದೇಸಾಯಿ, ಶಾಂತಪ್ಪ ಪಟ್ಟಣಶೆಟ್ಟಿ, ಶಿವಾನಂದ ಸಾತಿಹಾಳ, ರಾಮರಾವ ನಾಡಗೌಡ, ದೇವಿಂದ್ರ ಜಂಬಗಿ, ಕುಮಾರ ದೇಸಾಯಿ, ಅರವಿಂದ ಬೇನಾಳ, ದೇವಿಂದ್ರ ಕಡಕೋಳ, ನಿಂಗನಗೌಡ ಗುಂಡಕನಾಳ, ಶ್ರೀಶೈಲ ಬಡಗೇರ ಸೇರಿದಂತೆ ಇತರರು ಇದ್ದರು.

