ಕೊಲ್ಹಾರದಲ್ಲಿ ನವರಾತ್ರಿ ವೈಭವ | ಭಕ್ತಿ ಸಂಭ್ರಮಕ್ಕೆ ಮೆರಗು ನೀಡಿದ ಕಲಾ ತಂಡಗಳು
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ನಾಡಿನಾದ್ಯಂತ ಶಕ್ತಿ ಆರಾಧನೆಯ ಪವಿತ್ರ ಹಬ್ಬ ನವರಾತ್ರಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದ್ದು, ಕೊಲ್ಹಾರ ಪಟ್ಟಣದಲ್ಲಿಯೂ ಆದಿಶಕ್ತಿ ಯುವಕ ಮಂಡಳದ ವತಿಯಿಂದ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮೈಸೂರು ದಸರೆಯ ವೈಭವವನ್ನು ಉತ್ತರ ಕರ್ನಾಟಕದ ಕೆನೆಮೊಸರಿನ ನಾಡು ಕೊಲ್ಹಾರದಲ್ಲಿಯೂ ಕಣ್ತುಂಬಿಕೊಳ್ಳುವಂತೆ ದೇವಿಯ ಪ್ರತಿಷ್ಠಾಪನೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ವಿವಿಧ ಕಲಾ ತಂಡಗಳ ಪ್ರದರ್ಶನಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿವೆ.
ನವರಾತ್ರಿಯ ಮೊದಲ ದಿನವಾದ ಶನಿವಾರ, ಪಟ್ಟಣದ ಅಗಸಿ ಸಮೀಪದ ದ್ಯಾಮವ್ವ ದೇವಿ ದೇವಸ್ಥಾನದ ಮುಂಭಾಗದಲ್ಲಿ ಶಕ್ತಿ ದೇವತೆಯ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಮನಗೂಳಿಯ ವೇದಮೂರ್ತಿ ಶಾಂತಯ್ಯ ಲಟಕಿಮಠ ಅವರ ತಂಡದವರಿಂದ ವೇದಮಂತ್ರಗಳ ಪಠಣದೊಂದಿಗೆ ಸರ್ವಧರ್ಮೀಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ದೇವಿಯ ಮೊದಲ ದಿನದ ಶೈಲಪುತ್ರಿ ಅವತಾರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ದಿಗಂಬರೇಶ್ವರ ಮಠದಿಂದ ಆರಂಭವಾದ ದೇವಿಯ ಮೆರವಣಿಗೆಯಲ್ಲಿ ಪಟ್ಟಣದ ರಾಜಕೀಯ ಮುಖಂಡರು, ಗಣ್ಯರು, ವಿವಿಧ ಸಮಾಜಗಳ ಮುಖಂಡರು, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಹಿಳೆಯರು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಂಗಳೂರಿನ ಚಂಡಿವಾದ್ಯ ಮೇಳ, ರನ್ನ ಬೆಳಗಲಿಯ ಝಾಂಜ್ ತಂಡ, ಅಥಣಿ ಪಟ್ಟಣದ ಕರಬಲ್, ಟಕ್ಕಳಕಿ ಗ್ರಾಮದ ಡೊಳ್ಳಿನ ತಂಡ ಸೇರಿದಂತೆ ವಿವಿಧ ಕಲಾ ತಂಡಗಳ ನೃತ್ಯ ಮತ್ತು ವಾದ್ಯ ಪ್ರದರ್ಶನಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು. ಕಲಾವಿದರ ಲಯಬದ್ಧ ಪ್ರದರ್ಶನಕ್ಕೆ ಜನರು ಮನಸೋತರು. ಭಕ್ತಿಯ ಘೋಷಣೆಗಳು ಹಾಗೂ ವಾದ್ಯಗಳ ನಾದದ ನಡುವೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ನವರಾತ್ರಿ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ನವದುರ್ಗೆಯ ಆರಾಧನೆ: ನವರಾತ್ರಿಯ ಒಂಬತ್ತು ದಿನಗಳಲ್ಲಿ ಕ್ರಮವಾಗಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತೆ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ಧಿಧಾತ್ರಿ ಅವತಾರಗಳಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ಉತ್ಸವದ ಅಂಗವಾಗಿ ಬೆಳಗ್ಗೆ ಮತ್ತು ರಾತ್ರಿ ವಿಶೇಷ ಪೂಜೆಗಳು ನಡೆಯಲಿವೆ. ದೇವಿಯ ಒಂಬತ್ತು ಅವತಾರಗಳ ಚಿತ್ರಗಳು, ಝಗಮಗಿಸುವ ವಿದ್ಯುತ್ ಅಲಂಕಾರ ಹಾಗೂ ಮಧ್ಯಭಾಗದಲ್ಲಿ ಅಲಂಕರಿಸಿರುವ ಕಂಚು ಮತ್ತು ಬೆಳ್ಳಿಯ ದೇವಿಯ ಮೂರ್ತಿ ಭಕ್ತರನ್ನು ಆಕರ್ಷಿಸುತ್ತಿವೆ. ಭಕ್ತರ ಸಂಕಲ್ಪದೊಂದಿಗೆ ದೇವಿಯ ಆರಾಧನೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ಒಂಬತ್ತು ದಿನಗಳ ಕಾಲ ನಡೆಯಲಿವೆ.
ಆದಿಶಕ್ತಿ ಯುವಕ ಮಂಡಳದ ಅಧ್ಯಕ್ಷ ಶಶಿಧರ ದೇಸಾಯಿ ಮಾತನಾಡಿ, “ಕಳೆದ 36 ವರ್ಷಗಳಿಂದ ಪಟ್ಟಣದಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದೇವೆ. ಸ್ಥಳೀಯ ನಾಗರಿಕರ ಸಹಕಾರ, ಗಣ್ಯರ ನೆರವು ಹಾಗೂ ಮಠಾಧೀಶರ ಪ್ರೇರಣೆಯಿಂದ ಪ್ರತಿವರ್ಷ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕೊಲ್ಹಾರ ಸೇರಿದಂತೆ ನಾಡಿನ ಜನರ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸಿ, ಬರದ ಭೀತಿ ದೂರವಾಗಿ ಕೃಷ್ಣಾ ನದಿ ಸದಾ ತುಂಬಿ ಹರಿಯುವಂತಾಗಲಿ. ದೇವಿಯು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಸರ್ವರಿಗೂ ಅನುಗ್ರಹಿಸಲಿ ಎಂಬುದು ನಮ್ಮ ಪ್ರಾರ್ಥನೆ,” ಎಂದು ಹೇಳಿದರು.

