ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ನಾಗೂರ ಕಾಲೇಜ್ ಬಳಿ ಇರುವ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ೨೫ ವರ್ಷಗಳ ಸಾರ್ವಜನಿಕ ಸೇವೆಯನ್ನು ಅಭಿನಂದಿಸುವ ನಿಟ್ಟಿನಲ್ಲಿ ಸಂಘಟಿಸಲಾಗಿದ್ದ ಸೇವಾ ಸಂಕಲ್ಪ ಅಭಿಯಾನ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆ ಯಶಸ್ವಿಯಾಗಿ ನಡೆಯಿತು.
ಭಾರತೀಯ ಜನತಾ ಪಕ್ಷದ ಕಟ್ಟಾ ಕಾರ್ಯಕರ್ತರಾಗಿ ಕೆಲವು ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ ಬಸವರಾಜ ಕುಂಬಾರ ಅವರ ಹೆಸರನ್ನು ವೇದಿಕೆಗೆ ಇರಿಸಿ ಗೌರವಿಸಲಾಯಿತು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನೀತಿನ್ ನಬೀನ್ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ವಿಡಿಯೋಗಳನ್ನು ಬೃಹತ್ ಎಲ್‌ಇಡಿ ಪರದೆಯ ಮೂಲಕ ಪ್ರದರ್ಶಿಸಲಾಯಿತು.
ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಭಾರತದ ಸಮಕಾಲೀನ ರಾಜಕೀಯದಲ್ಲಿ ದೀರ್ಘಕಾಲದ ಸಾರ್ವಜನಿಕ ಸೇವೆ ಮತ್ತು ಸಂಘಟನಾ ಅನುಭವದ ಮೂಲಕ ರಾಷ್ಟ್ರಮಟ್ಟದ ನಾಯಕತ್ವಕ್ಕೆ ಬೆಳೆದ ಪ್ರಮುಖ ನಾಯಕರಲ್ಲಿ ನರೇಂದ್ರ ಮೋದಿ ಅವರು ಒಬ್ಬರು, ಸಮರ್ಥ ಹಾಗೂ ಪಾರದರ್ಶಕ, ಪರಿಶುದ್ಧ ಆಡಳಿತಕ್ಕೆ ಇನ್ನೊಂದು ಹೆಸರಾಗಿರುವ ಮೋದಿಜಿ ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದರು.
ವೇದಿಕೆ ಸ್ಥಳದಿಂದ ಸೇವಾ ಜ್ಯೋತಿ ಯಾತ್ರೆಗೆ ಚಾಲನೆ ದೊರಕಿತು. ನಂತರ ಜ್ಯೋತಿ ಯಾತ್ರೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ವಿವಿಧ ಭಾಗಗಳ ಮೂಲಕ ಸಾಗಿತು. ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ಈ ಯಾತ್ರೆ ತಲುಪಿದಾಗ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯಾತ್ರೆಯು ಗಾಂಧಿ ಚೌಕಗೆ ತಲುಪಿ ಸಂಪನ್ನಗೊಂಡಿತು. ದಲ್ಲಿ ಸಮಾಪ್ತಿಗೊಂಡಿತು.
ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಸಂಜೀವ ಐಹೊಳಿ, ಮುಖಂಡರಾದ ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಉಮೇಶ ಕೋಳಕೂರ, ವಿವೇಕಾನಂದ ಡಬ್ಬಿ, ಮೇಯರ್ ಎಂ.ಎಸ್. ಕರಡಿ, ಉಪಮೇಯರ್ ಸುಮಿತ್ರಾ ಜಾಧವ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಕೃಷ್ಣಾ ಗುನ್ನಾಳಕರ ಸ್ವಾಗತಿಸಿದರು. ಈರಣ್ಣ ರಾವೂರ ಕಾರ್ಯಕ್ರಮ ನಿರೂಪಿಸಿದರು.

