ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜೀವನದುದ್ದಕ್ಕೂ ಸರಳತೆ, ಶಿಸ್ತು, ಸೌಜನ್ಯ, ಸುಸಂಸ್ಕೃತ ನಡುವಳಿಕೆಯ ಆತ್ಮೀಯತೆ ಭಾವದಿಂದ ಎಲ್ಲರೊಂದಿಗೆ ಅನ್ಯೋನ್ಯವಾಗಿ ಬೆರತು ಮೆಚ್ಚುಗೆಗೆ ಪಾತ್ರವಾಗಿರುವ ವಿಶ್ರಾಂತ ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ ಅವರು ಅಪಾರ ವಿದ್ಯಾರ್ಥಿಗಳ ಪ್ರೀತಿ, ಸಹೋದ್ಯೋಗಿಗಳ ವಿಶ್ವಾಸ, ಪಾಲಕ ಜನತೆಯ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅವರು ಉಪನ್ಯಾಸ ವೃತ್ತಿಯಲ್ಲಿ ತೋರಿದ ದಕ್ಷತೆಯ ಸೇವೆಯೇ ಸಮಾಜದಲ್ಲಿಂದು ಗೌರವಕ್ಕೆ ಪಾತ್ರವಾಗಿದೆ ಎಂದು ನಮ್ಮೂರ ನಕ್ಷತ್ರ ಜಿಲ್ಲಾ ಮಾದ್ಯಮ ಪ್ರಶಸ್ತಿ ಪುರಸ್ಕೃತ ಗುಲಾಬಚಂದ ಜಾಧವ ಹೇಳಿದರು.
ಜಿಲ್ಲೆಯ ಆಲಮಟ್ಟಿ ಎಂಎಚ್ಎಂ ಪಪೂ ಕಾಲೇಜಿನಲ್ಲಿ ಮೂರು ದಶಕಗಳವರೆಗೆ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಅಮೋಘ ಸೇವೆ ಸಲ್ಲಿಸಿ ಈಚೆಗೆ ವಯೋಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಹೇಮಗಿರಿಮಠ ಅವರ ಆಲಮಟ್ಟಿ ನಿವಾಸಕ್ಕೆ ತೆರಳಿ ದಂಪತಿಗಳಿಗೆ ಗೌರವಾರ್ಪಣೆ ಸಲ್ಲಿಸುವ ಮೂಲಕ ಸನ್ಮಾನಿಸಿ ಅವರು ಮಾತನಾಡಿದರು.
ಶುದ್ಧತೆ ದೈವತ್ವದೊಂದಿಗೆ ಹೇಮಗಿರಿಮಠ ಅವರು ಎತ್ತರಕ್ಕೆ ಬೆಳೆದರೂ ಶೈಕ್ಷಣಿಕ ಪ್ರಗತಿ, ಶಿಕ್ಷಣ ಸಂಸ್ಥೆಯ ಏಳಿಗೆ ಪಯಣದ ಜೊತೆಗೆ ಸಾಮಾಜಿಕ ರಂಗದಲ್ಲೂ ತಮ್ಮದೇ ವಿಶೇಷ ಛಾಪು ಮೂಡಿಸಿದ್ದಾರೆ. ನಿಷ್ಟೆಯಿಂದ ಅಚ್ಚುಕಟ್ಟಾಗಿ ಕಾರ್ಯಗಳನ್ನು ನಿಭಾಯಿಸಿ ವಿಶ್ವಾಸಾರ್ಹ ಪ್ರೀತಿ ಸಂಪಾದಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾಲೇಜು ಸುವ್ಯವಸ್ಥಿತವಾಗಿ ನಡೆಸಿ ತಮ್ಮ ವ್ಯಕ್ತಿತ್ವದ ಘನತೆ, ಗೌರವ ಕಾಯ್ದುಕೊಳ್ಳುವದರ ಜೊತೆಗೆ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ ಧಾರೆ ಎರೆದು ಭವಿಷ್ಯತ್ತಿನಲ್ಲಿ ಮುನ್ನಡೆಯುವ ಧೈರ್ಯ ತುಂಬಿದ್ದಾರೆ. ಮಕ್ಕಳ ಆಶಯಗಳಿಗೆ ಸ್ಪಂದಿಸಿದ್ದಾರೆ. ಧಾಮಿ೯ಕ ಕೈಂಕರ್ಯದಲ್ಲೂ ತನ್ಮಯರಾಗಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಸಹೃದಯಿಗಳನ್ನು ಸಮಾನ ಭಾವದಿಂದ ಕಂಡು ಗೌರವಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಅಧಿಕಾರ ಹಾಗೂ ಸ್ಥಾನಮಾನಗಳು ಶಾಶ್ವತವಲ್ಲ.ಸಾಮರಸ್ಯದ ಒಡನಾಟವೇ ಚಿರಸ್ಥಾಯಿಯಾಗಿ ಉಳಿಯಬಲ್ಲವು ಎಂಬುದು ಪ್ರಭುಸ್ವಾಮಿ ಹೇಮಗಿರಿಮಠ ಅವರ ಎತ್ತಿ ತೋರಿಸಿದ್ದಾರೆ ಎಂದರು.
ಅನುಪಮ ಸೇವಾಭಾವದೊಂದಿಗೆ ವೃತ್ತಿಪರ ಕಾಯಕ ಪೂರೈಸಿ ವಿಶ್ರಾಂತ ಜೀವನಕ್ಕೆ ಕಾಲಿಟ್ಟಿರುವ ಪ್ರಭುಸ್ವಾಮಿ ಹೇಮಗಿರಿಮಠ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶ್ವೇತಾ ಹೇಮಗಿರಿಮಠ ದಂಪತಿಗಳಿಗೆ ಬರಹಗಾರ ಗುಲಾಬಚಂದ ಜಾಧವ ಹಾಗೂ ಶ್ರೀಮತಿ ಸುನೀತಾ ಜಾಧವ ದಂಪತಿಗಳು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಈ ಸರಳ ಸಂಪ್ರೀತಿಯ ಸಂಮಾನ ಕಾರ್ಯಕ್ಕೆ ಪ್ರಭುಸ್ವಾಮಿ ಹೇಮಗಿರಿಮಠ ಅವರ 80 ರ ಇಳಿವಯಸ್ಸಿನ ತಾಯಿ ಶ್ರೀಮತಿ ಮುತ್ತವ್ವ ಅಜ್ಜಯ್ಯ ಹೇಮಗಿರಿಮಠ ಅವರು ಖುಷಿಯಿಂದ ಸಮ್ಮುಖ ವಹಿಸಿ ಸಂತಸ ಹಂಚಿಕೊಂಡಿದ್ದು ಸ್ಮರಣೀಯ.
ಹೇಮಗಿರಿಮಠ ಅವರ ಸುಪುತ್ರ ಭವನಕುಮಾರ, ಸುಪುತ್ರಿ ಭೂವಿುಕಾ ಹಾಗೂ ಜಾಧವ ಪರಿವಾರದ ಪ್ರಜ್ವಲ ಜಾಧವ ಸನ್ಮಾನ ಸಾಕ್ಷೀಕರಿಸಿದರು.

