ಅಧಿಕಾರಿಗಳು, ರೈತ ಮುಖಂಡರು, ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ 2026-27 ನೇ ಸಾಲಿನ ಕಬ್ಬು ಅರೆಯುವ ಹಂಗಾಮು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳು ರೈತರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಆಯಾ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ನಿಗದಿತ ಅವಧಿಯಲ್ಲಿ ಹಣ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಸೂಚಿಸಿದರು.
2026-27ನೇ ಸಾಲಿನ ಕಬ್ಬು ಅರೆಯುವ ಹಂಗಾಮಿಗೆ ಪೂರ್ವ ಸಿದ್ಧತೆ ಅಂಗವಾಗಿ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರು,ವ್ಯವಸ್ಥಾಪಕ ನಿರ್ದೇಶಕರು ಹಾಗೂ ರೈತ ಮುಖಂಡರುಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯೋಚಿತ ದರ, ತೂಕದಲ್ಲಿ ಪಾರದರ್ಶಕತೆ, ಕಬ್ಬು ಸಾಗಣೆ ವ್ಯವಸ್ಥೆ ಹಾಗೂ ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ ನೀರಿನ ಸಮರ್ಪಕ ನಿರ್ವಹಣೆ ಕುರಿತು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಯಿತು.
ಜಿಲ್ಲೆಯ ಯಾವುದೇ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾದ ಕಬ್ಬಿನ ನ್ಯಾಯಸಮ್ಮತ ಮತ್ತು ನಿಗದಿತ ದರವನ್ನು ಅಧಿಕೃತವಾಗಿ ಪ್ರಕಟಿಸದೇ ಕಬ್ಬು ಅರೆಯುವ ಕಾರ್ಯ ಆರಂಭಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಸ್ಪಷ್ಟಪಡಿಸಿದರು.
ಪ್ರತಿಯೊಂದು ಕಾರ್ಖಾನೆಯು ತನ್ನ ಅಧಿಕೃತ ಲೆಟರ್ ಹೆಡ್‌ನಲ್ಲಿ ರೈತರ ಖಾತೆಗೆ ಜಮೆಯಾಗುವ ನಿವ್ವಳ ಮೊತ್ತವನ್ನು ಸ್ಪಷ್ಟವಾಗಿ ಪ್ರಕಟಿಸಬೇಕು. ಕಾರ್ಖಾನೆಗಳಲ್ಲಿ ಲೈವ್ ಫೀಡಿಂಗ್ ವ್ಯವಸ್ಥೆ ಕಲ್ಪಿಸಬೇಕು. ಕಬ್ಬಿನ ತೂಕದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಅಥವಾ ವಂಚನೆ ನಡೆಯದಂತೆ ಎಪಿಎಂಸಿ ಸೇರಿದಂತೆ ಅಲ್ಲಲ್ಲಿರುವ ಸರ್ಕಾರಿ ವೇ-ಬ್ರಿಡ್ಜ್ ಗಳ ಮೂಲಕ ನಿಯಮಿತ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ನಿಯಮ ಉಲ್ಲಂಘಿಸಿ ಕಲುಷಿತ ನೀರನ್ನು ಜಲಮೂಲಗಳಿಗೆ ಹರಿಸುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ್ ಮಾತನಾಡಿ, ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಕಬ್ಬಿನ ಇಳುವರಿ ಆಧಾರದ ಮೇಲೆ ಪ್ರಸಕ್ತ ಸಾಲಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ದರ ಮಾಹಿತಿ,
ಬಾಕಿ ಮೊತ್ತವನ್ನು ರೈತರಿಗೆ ಶೀಘ್ರವಾಗಿ ಪಾವತಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ ಎಂದು ಸಭೆಗೆ ವಿವರಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ, ಎಸ್. ನಿಜಲಿಂಗಪ್ಪ ಶುಗರ್ ಇನ್‌ಸ್ಟಿಟ್ಯೂಟ್‌ನ ತಾಂತ್ರಿಕ ಸಲಹೆಗಾರರಾದ ಸಿ.ಬಿ. ಪಾಟೀಲ, ಇಂಡಿ ಉಪವಿಭಾಗದ ಡಿವೈಎಸ್ಪಿ, ಪರಿಸರ ಇಲಾಖೆಯ ಅಧಿಕಾರಿಗಳು, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು, ವಿವಿಧ ತಾಲೂಕುಗಳ ತಹಸೀಲ್ದಾರರು, ಪೊಲೀಸ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು,
ಪದಾಧಿಕಾರಿಗಳು ಭಾಗವಹಿಸಿದ್ದರು.

