ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಷನಲ್ ಶಾಲೆ ಹಾಗೂ ತಾಲೂಕು ಪ್ರಾದೇಶಿಕ ಅರಣ್ಯ ವಲಯದ ಸಂಯುಕ್ತ ಆಶ್ರಯದಲ್ಲಿ ೭೨ನೇ ವನ್ಯಜೀವಿ ಸಪ್ತಾಹ–೨೦೨೬ ರ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಕ್ರಮ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿವನಗೌಡ ಬಿರಾದಾರ ಮಾತನಾಡಿ, ವನ್ಯಜೀವಿಗಳೊಂದಿಗೆ ಸಹಬಾಳ್ವೆ ಎಂಬ ಉದಾತ್ತ ಆಶಯದೊಂದಿಗೆ ಆಯೋಜಿಸಲಾದ ಈ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಅತ್ಯಂತ ಸಹಕಾರಿಯಾಗಿವೆ. ಭೂಮಿಯ ಸಮತೋಲನ ಕಾಯ್ದುಕೊಳ್ಳಲು ಮತ್ತು ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ಶ್ಲಾಘನೀಯ, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಲ್ವಕುಮಾರ್ ಮಾತನಾಡಿ, ವನ್ಯಜೀವಿ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ನಿರ್ಣಾಯಕ. ೭ ಮತ್ತು ೮ನೇ ತರಗತಿಯ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ವನ್ಯಜೀವಿ ಸಂರಕ್ಷಣೆ, ಕಾಡಿನ ಮಹತ್ವ ಮತ್ತು ಮಾನವ–ವನ್ಯಜೀವಿ ಸಹಬಾಳ್ವೆಯ ಕುರಿತು ತಮ್ಮ ಪ್ರತಿಭೆಯನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲೇ ಇಂತಹ ಮೌಲ್ಯಗಳನ್ನು ಬಿತ್ತುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು, ಎಂದರು.
ವಲಯ ಅರಣ್ಯಾಧಿಕಾರಿ ಬಿ. ಐ. ಬಿರಾದಾರ ಮಾತನಾಡಿ, ವನ್ಯಪ್ರಾಣಿಗಳ ಆವಾಸಸ್ಥಾನವಾದ ಕಾಡುಗಳನ್ನು ನಾಶಪಡಿಸಬಾರದು. ಕಾಡು ಕಣ್ಮರೆಯಾದರೆ ಪ್ರಾಣಿಗಳು ನಾಡಿಗೆ ಬಂದು ಮಾನವ–ಪ್ರಾಣಿ ಸಂಘರ್ಷ ಉಂಟಾಗುತ್ತದೆ. ಈ ಭೂಮಿಯ ಮೇಲೆ ಮನುಷ್ಯರಷ್ಟೇ ಸಮಾನವಾಗಿ ಬದುಕುವ ಹಕ್ಕು ಮೂಕ ಪ್ರಾಣಿಗಳಿಗೂ ಇದೆ. ಆದ್ದರಿಂದ ಕಾಡು ಮತ್ತು ವನ್ಯಜೀವಿಗಳ ಉಳಿವಿಗಾಗಿ ಪ್ರತಿಯೊಬ್ಬ ನಾಗರಿಕನೂ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೀಟ್ ಫಾರೆಸ್ಟರ್ ಶಿವಾನಂದ ಮೇತ್ರಿ, ರವಿ ತುಂಬಾ, ಎನ್‌ಎಸ್‌ಎಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪರಶುರಾಮ ಎಂ. ದೇವಿ, ಬಿಎಎಸ್ ಶಾಲೆಯ ಪ್ರಾಚಾರ್ಯ ಅಶೋಕ ತುಪ್ಪದ, ಸತೀಶ್ ವಾಲಿಕಾರ ಸೇರಿದಂತೆ ಶಿಕ್ಷಕ ವೃಂದ, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

