ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಹೊಸನಗರ ಹಳ್ಳದ ಸೇತುವೆ ತಗ್ಗು ದಿನ್ನೆಗಳ ಸಹಿತ ಮಳೆ ನೀರಿನಿಂದ ಆವೃತ್ತವಾಗಿದ್ದು ಸಂಚಾರಕ್ಕೆ ತೊಂದರೆಯುಂಟಾಗಿದೆ. ಆದ್ದರಿಂದ ಸುಗಮ ಸಂಚಾರಕ್ಕೆ ಕೂಡಲೇ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೊಸನಗರದ ಸೇತುವೆ ಸಾಕಷ್ಟು ದಿನಗಳಿಂದ ರಿಪೇರಿಗಾಗಿ ಕಾಯುತ್ತಿದೆ, ಆದರೆ ರಿಪೇರಿ ಮಾತ್ರ ತಾತ್ಕಾಲಿಕ. ಈ ಕುರಿತು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹಸನ್ ನಧಾಫ್ ಮಾತನಾಡಿ, ತಗ್ಗು ದಿನ್ನೆಗಳಿಂದ ಕೂಡಿದ ಸೇತುವೆಯ ಮೇಲೆ ಈಗ ಮಳೆಯ ನೀರು ಸೇರಿ ಸಂಚಾರಕ್ಕೆ ಸಂಚಕಾರ ತಂದಿದ್ದು ವಾಹನ ಸವಾರರು ಆತಂಕದಿಂದಲೇ ಸವಾರಿ ಮಾಡುವಂತಾಗಿದೆ. ಆದ್ದರಿಂದ ಸ್ಥಳೀಯ ಆಡಳಿತ ಸೇತುವೆ ರಿಪೇರಿಗೆ ತಾತ್ಕಾಲಿಕ ತೇಪೆ ಕಾರ್ಯ ಮಾಡದೇ ಅಗತ್ಯ ಕ್ರಮ ವಹಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದರು.
ಸೇತುವೆ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಹೊಸನಗರದ ಧುರೀಣ ಕಾಶೀನಾಥ ವಡ್ಡೋಡಗಿ ಚಿದಾನಂದ ಬಜಂತ್ರಿ, ದಾದಾ ಬೇಪಾರಿ, ಸಂಜೀವ ರಾಠೋಡ, ರಫೀಕ್ ಮಂಡೆ, ಭೀಮಾಶಂಕರ ಪಾಟೀಲ ಒತ್ತಾಯಿಸಿದ್ದಾರೆ.

