ಬರ ಘೋಷಣೆ, ಕೆರೆ ಭರ್ತಿ, ಏತ ನೀರಾವರಿ ಸರಿಪಡಿಸಿ | ಚಡಚಣ ರೈತರ ಪಟ್ಟು | ಅಧಿಕಾರಿಗಳು ಬರುವವರೆಗೂ ಕದಲಲ್ಲ | ತಡರಾತ್ರಿವರೆಗೂ ಚಡಚಣ ರೈತರ ಧರಣಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು, ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಬೇಕು, ಚಡಚಣ ಬೋರಿ ಹಳ್ಳಕ್ಕೆ ನೀರು ಹರಿಸಬೇಕು, ಏತ ನೀರಾವರಿ ವ್ಯವಸ್ಥೆ ಸಮರ್ಪಕಗೊಳಿಸಬೇಕು ಹಾಗೂ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ, ರೈತೋದಯ ಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಚಡಚಣ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಮಾಡುತ್ತ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶಿರಾಡೋಣ–ಲಿಂಗಸಗೂರು ರಾಜ್ಯ ಹೆದ್ದಾರಿಯನ್ನು ಕೆಲಕಾಲ ಸಾಂಕೇತಿಕವಾಗಿ ತಡೆದು ಪ್ರತಿಭಟನೆ ನಡೆಸಿದ ರೈತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರತಿಭಟನಾ ಮೆರವಣಿಗೆಯ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಸಿರು ಸೇನೆ ತಾಲೂಕಾಧ್ಯಕ್ಷ ವಸಂತ ಭೈರಾಮಡಿ ಮಾತನಾಡಿ, ಈಗಾಗಲೇ ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ 117 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದ್ದು, ಚಡಚಣ ತಾಲೂಕನ್ನು ಕೂಡಲೆ ಬರಗಾಲ ಪೀಡಿತ ತಾಲೂಕಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಏತ ನೀರಾವರಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸುಮಾರು 461 ಕೋಟಿ ಕಾಮಗಾರಿಯ ದುಡ್ಡು ಕಾಂಟ್ರ್ಯಾಕ್ಟರ್ ಹಾಗೂ ಅಧಿಕಾರಿಗಳು ಕೂಡಿ ಅರ್ಧಮರ್ಧ ಕೆಲಸ ಮಾಡಿ ಹಣ ಲಪಟಾಯಿಸಿದ್ದಾರೆ ಅದರ ಸಂಪೂರ್ಣ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿ ಹಾಗೂ ಕಾಂಟ್ರ್ಯಾಕ್ಟರ್ ಗೆ ಶಿಕ್ಷೆ ವಿಧಿಸಬೇಕು ಮತ್ತು ಕಾಮಗಾರಿಯನ್ನು ತುರ್ತಾಗಿ ಸರಿಪಡಿಸಿ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುವಂತೆ ಮಾಡಬೇಕು. ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಮೂಲಕ ಜಾನುವಾರು ಹಾಗೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹಾಗೂ ರೈತ ಮುಖಂಡ ಮಹಾದೇವ ಬನಸೋಡೆ ಮಾತನಾಡಿ, ತಾಲೂಕಿನ ಕೆಲ ಕಾಲುವೆಗಳಿಗೆ ಮಾತ್ರ ನೀರು ಹರಿಸಲಾಗುತ್ತಿದ್ದು, ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ತಾಲೂಕಿನ ಕಟ್ಟಕಡೆಯ ಜಮೀನಿನವರೆಗೂ ನೀರು ಹರಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ವಿದ್ಯುತ್ ಪೂರೈಕೆಯೂ ಸಮರ್ಪಕವಾಗಿಲ್ಲ. ಕೆಲ ದಿನಗಳಲ್ಲಿ ನಾಲ್ಕು ಗಂಟೆ, ಕೆಲವೊಮ್ಮೆ ಐದು–ಆರು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ಸಮಯದ ನಿಗದಿತ ವೇಳಾಪಟ್ಟಿಯಿಲ್ಲದೆ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ನಸುಕಿನ ವೇಳೆಯಲ್ಲಿ ವಿದ್ಯುತ್ ನೀಡುವುದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಚಡಚಣ ತಾಲೂಕು ಮೊದಲಿನಿಂದಲೂ ಮಳೆ ಆಶ್ರಿತ ಪ್ರದೇಶವಾಗಿದ್ದು, ಜೂನ್‌ನಿಂದ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ಕೈಗೆ ಬರುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಕೂಡಲೇ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರೈತೋದಯ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ, ಕರವೇ ವಲಯಾಧ್ಯಕ್ಷ ಸೋಮಶೇಖರ ಕಂಬಾರ, ಭೀಮ ಸೇನೆ ತಾಲೂಕಾಧ್ಯಕ್ಷ ರುದ್ರೇಶ ಬನಸೋಡೆ, ಕೆಆರ್‌ಎಸ್ ಪಕ್ಷದ ಸೈನಿಕರಾದ ಶಿವಾನಂದ ಯಡಳ್ಳಿ, ಶಕ್ತಿಕುಮಾರ, ಸ್ಥಳೀಯ ವಿರಕ್ತ ಮಠದ ಷಡಕ್ಷರಿ ಮಹಾಸ್ವಾಮಿಗಳು,ಮಹಾದೇವ ಕರ್ಲಮಳ, ಮಹಾದೇವ ಹಿರೇಕುರುಬರ, ರೈತ ಮುಖಂಡರಾದ ಸಂತೋಷ ಭೈರಗೊಂಡ, ಘೇನಪ್ಪ ಬಿರಾದಾರ, ಉತ್ತಮ ಕಾರಬಾರಿ, ಹಣಮಂತ ಪೀರಗೊಂಡ, ಅಜೀತ ವಾಲಿ, ರಮೇಶ ಬಬಲಾದಿ, ಆಕಾಶ ಪಾಟೀಲ ಸೇರಿದಂತೆ ನೂರಾರು ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

*ಅಧಿಕಾರಿಗಳಿಗಾಗಿ ತಡರಾತ್ರಿವರೆಗೂ ಕಾದ ರೈತರು
ಪ್ರತಿಭಟನೆ ವೇಳೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಬರುವವರೆಗೆ ತಹಶೀಲ್ದಾರ್ ಕಚೇರಿಯಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದು, ಕಚೇರಿ ಆವರಣದಲ್ಲೇ ಧರಣಿ ಮುಂದುವರಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಡರಾತ್ರಿ 10 ಗಂಟೆಯವರೆಗೂ ಅಧಿಕಾರಿಗಳಿಗಾಗಿ ಕಾದು ಪ್ರತಿಭಟನೆ ಮುಂದುವರೆಸಿದರು.

