ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಧರ್ಮವೆಂದರೆ ಕೇವಲ ಮಾತಲ್ಲ. ಆಡಿದಂತೆ ನಡೆದು ತೋರಿಸುವುದೇ ನಿಜವಾದ ಧರ್ಮ. ಅಸಹಾಯಕರ ಕಷ್ಟಕ್ಕೆ ಸ್ಪಂದಿಸುವುದೇ ಧರ್ಮದ ಜೀವಾಳ. ಧರ್ಮವು ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಬೇಕೇ ಹೊರತು ವಿಭಜಿಸುವ ಸಾಧನವಾಗಬಾರದೆಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರಶ್ರೀಗಳು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಸೋಮವಾರ ಶ್ರೀಗುರು ಮಹಾಂತೇಶ್ವರ ಹಿರೇಮಠದ ಶ್ರಾವಣ ಪುರಾಣ ಮಂಗಲ ಮತ್ತು ನೂತನ ಕಲ್ಯಾಣ ಮಂಟಪ ಉದ್ಘಾಟನೆ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಯುವ ಜನರು ಆಧುನಿಕತೆ ಶಿಕ್ಷಣ ಮತ್ತು ತಂತ್ರಜ್ಞಾನದ ಅರಿವಿನೊಂದಿಗೆ ನಮ್ಮ ಸಂಸ್ಕೃತಿ ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಮರೆಯಬಾರದು. ಆಧುನಿಕತೆ ಬೇಕು. ಆದರೆ ಮೂಲ ಸಂಸ್ಕೃತಿ ಬೇರುಗಳೊಂದಿಗೆ ಬದುಕನ್ನು ಕಟ್ಟಿಕೊಳ್ಳಬೇಕಾದ ಅವಶ್ಯಕತೆಯಿದೆ. ಶ್ರೀಜಗದ್ಗುರು ರೇಣುಕಾಚಾರ್ಯರ ಅತ್ಯಮೂಲ್ಯವಾದ ಜೀವನ ದರ್ಶನದ ಸಂದೇಶಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿದೀಪ. ಮಠಾಧ್ಯಕ್ಷ ಬಸವಲಿಂಗಶ್ರೀಗಳ ನೂತನ ಕಲ್ಯಾಣ ಮಂಟಪದ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿ. ಶ್ರೀಗಳವರ ಕ್ರಿಯಾಶೀಲ ಬದುಕು ಇನ್ನಿತರರಿಗೆ ಮಾದರಿಯಾಗಿದೆ. ನೂತನ ಕಲ್ಯಾಣ ಮಂಟಪದ ಮೂಲಕ ಸಾಮಾಜಿಕ ಸೇವೆ ನಡೆಯಲಿ. ವಿವಾಹಗಳ ಜೊತೆಗೆ ಧಾರ್ಮಿಕ ಉಪನ್ಯಾಸ, ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ, ಬಡಕುಟುಂಬಗಳಿಗೆ ನೆರವು, ಆರೋಗ್ಯಶಿಬಿರ, ರಕ್ತದಾನ ಮೊದಲಾದ ಕಾರ್ಯಕ್ರಮಗಳಿಗೂ ಈ ಕಲ್ಯಾಣಮಂಟಪ ಬಳಕೆಯಾಗುವಂತಾಗಲೆಂದು ಶುಭ ಹಾರೈಸಿದರು.
ಆಲಮೇಲ ಹಿರೇಮಠದ ಚಂದ್ರಶೇಖರ ಶ್ರೀ ಮಾತನಾಡಿ, ಈ ಮಂಟಪ ಕೇವಲ ಇಟ್ಟಿಗೆ ಸಿಮೆಂಟಿನ ಕಟ್ಟಡವಾಗದೇ ಧರ್ಮ, ಸಂಸ್ಕೃತಿ, ಮಾನವೀಯತೆಯ ಕಲ್ಯಾಣ ಕೇಂದ್ರವಾಗಿ ರೂಪುಗೊಳ್ಳಲೆಂದು ಆಶಿಸಿದರು.
ನೇತೃತ್ವ ವಹಿಸಿದ ಕೋರವಾರ ಶ್ರೀಗುರು ಮಹಾಂತೇಶ್ವರಮಠದ ಬಸವವಲಿಂಗ ಸ್ವಾಮೀಜಿ ಮಾತನಾಡಿ, ಕೋರವಾರ ಗ್ರಾಮದ ಜನತೆಯ ಬಹು ದಿನಗಳ ಕನಸು ನನಸಾಗಿದೆ. ಜಗದ್ಗುರುಗಳ ಶುಭಾಗಮನ ನಮ್ಮೆಲ್ಲರ ಬಾಳಿಗೆ ಹೊಸ ಸ್ಫೂರ್ತಿಯನ್ನು ತಂದು ಕೊಟ್ಟಿದೆ. ವಿವಾಹಗಳನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮನೋಭಾವ ಬೆಳೆಯಬೇಕು. ಸಂಪತ್ತನ್ನು ಶಿಕ್ಷಣ,ಆರೋಗ್ಯ ಮತ್ತು ಸಮಾಜಸೇವೆಗೆ ಬಳಸುವ ಚಿಂತನೆ ಬೆಳೆಯಬೇಕು ಎಂದರು.
ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.
ಗಿರಿಸಾಗರದ ರುದ್ರಮುನಿ ಶ್ರೀ, ಬಿಲ್‌ಕೆರೂರು ಸಿದ್ಧಲಿಂಗ ಶ್ರೀ, ಮುಖೇಡ ವಿರೂಪಾಕ್ಷ ಶ್ರೀ, ಬರ್ದಾಪುರ ಚನ್ನಬಸವ ಶ್ರೀ, ಸಗರ ಮರುಳಮಹಾಂತ ಶ್ರೀ, ಯಂಕಂಚಿ ಅಭಿನವ ರುದ್ರಮುನಿ ಶ್ರೀ, ಕೋರವಾರ ಚೌಕಿಮಠದ ಮುರಘೇಂದ್ರ ಸ್ವಾಮೀಜಿ. ಕೋರವಾರ ವೈದ್ಯ ಡಾ||ಎಸ್.ಎ.ಹಿರೇಮಠ ಖ್ಯಾತ ನೇತ್ರತಜ್ಞ ಡಾ|| ಪ್ರಭುಗೌಡ ಪಾಟೀಲ ಇದ್ದರು.

