ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಶಾಲೆಗಳಲ್ಲಿ ಎಲ್‌ಬಿಎ, ಕಾಮ್ಸ್ ಹಾಗೂ ನಿರಂತರ ಹಾಜರಾತಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಕ್ಕಳ ಕಲಿಕಾ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.
ಪಟ್ಟಣದ ಎಂಪಿಎಸ್ ಶಾಲೆಯಲ್ಲಿ ಮಂಗಳವಾರ ನಡೆದ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ತವ್ಯ’ ಆ್ಯಪ್‌ನಲ್ಲಿ 223 ಶಾಲೆಗಳ ಅಕ್ಷಾಂಶ–ರೇಖಾಂಶದ ಸಮಸ್ಯೆಗಳನ್ನು ಸರಿಪಡಿಸಲಾಗಿದ್ದು, 63 ಶಿಕ್ಷಕರ ಮಿಸ್‌ಮ್ಯಾಚ್ ಸಮಸ್ಯೆಯನ್ನೂ ಪರಿಹರಿಸಲಾಗಿದೆ. ವಿಜಯಪುರ ಗ್ರಾಮೀಣ ವಲಯದ 1ರಿಂದ 10ನೇ ತರಗತಿಯ ಸುಮಾರು 42 ಸಾವಿರ ಮಕ್ಕಳು ನಿರಂತರ ಆ್ಯಪ್‌ನಲ್ಲಿ ದಾಖಲಾಗಬೇಕಿದ್ದು, ಈ ಪೈಕಿ 38,500 ಮಕ್ಕಳ ನೋಂದಣಿ ಪೂರ್ಣಗೊಂಡಿದೆ. ಸುಮಾರು 3,500 ಡುಪ್ಲಿಕೇಟ್ ದಾಖಲೆಗಳಿದ್ದರೆ ಪರಿಶೀಲಿಸಿ ಡಿಲೀಟ್ ಮಾಡಬೇಕು ಎಂದು ಸೂಚಿಸಿದರು.
ಶಾಲೆಗಳಲ್ಲಿ ಪ್ರತಿದಿನ ಶೇ.50ರಷ್ಟು ಹಾಜರಾತಿಯನ್ನೂ ದಾಟದಿರುವುದು ಗಮನಕ್ಕೆ ಬಂದಿದೆ. ತಾಂತ್ರಿಕ ದೋಷದಿಂದ ಹಾಜರಾತಿ ದಾಖಲಿಸಲು ಸಾಧ್ಯವಾಗದಿದ್ದರೆ ಅದನ್ನು ಪರಿಹರಿಸಲಾಗುವುದು. ಆದರೆ ತಾಂತ್ರಿಕ ಸಮಸ್ಯೆ ಹೊರತುಪಡಿಸಿ ಯಾವುದೇ ಕಾರಣಕ್ಕೂ ಮಕ್ಕಳ ಹಾಜರಾತಿ ದಾಖಲಿಸುವುದನ್ನು ತಪ್ಪಿಸಬಾರದು. ಪ್ರತಿ ದಿನ ಪ್ರತಿಯೊಬ್ಬ ಮಗುವಿನ ಹಾಜರಾತಿಯನ್ನು ನಿರಂತರ ಆ್ಯಪ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಶಿಕ್ಷಣ ಸಂಯೋಜಕ ಜಿ.ಟಿ.ಕಾಗವಾಡ, ಡಿ.ಜಿ.ಸಜ್ಜನ, ಆರ್.ಬಿ.ಪಾಟೀಲ ಎಂ.ಎಸ್.ಟಕ್ಕಳಕಿ, ಸಾಬು ಗಗನಮಾಲಿ, ಮಹಾಂತೇಶ ರಾಠೋಡ, ಎಂ.ಎಂ.ಮಕಾನದಾರ, ಬಿ.ಸಿ.ನಾವಿ, ಬಿ.ವೈ.ಮೇಡೆಗಾರ, ಎಲ್ಲ ಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

