ಡಾ.ಮಹಾಂತೇಶ ಬಿರಾದಾರ ಗೆ ಅಪ್ಪ ಪ್ರಶಸ್ತಿ ಪ್ರದಾನ | ನಬಿರೋಶನ್ ಪ್ರಕಾಶನ ಸಂಸ್ಥೆಗೆ ವೈಯಕ್ತಿಕ ರೂ.ಐದು ಲಕ್ಷ ಕೊಡುಗೆ ಘೋಷಿಸಿದ ಡಾ.ಮಹಾಂತೇಶ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಕುಟುಂಬದ ಉನ್ನತಿಗೆ ತನ್ನೆಲ್ಲಾ ಆಸೆ, ಆಕಾಂಕ್ಷೆ, ಸುಖ, ಸಂತೋಷ ಮೀಸಲಿರಿಸಿ ತ್ಯಾಗ ಮತ್ತು ನಿಸ್ವಾರ್ಥದ ಪ್ರತೀಕ ಅಪ್ಪ ಎಂದು ಎಂದು ಹಿರಿಯ ನಟ ಅಶೋಕ ಹೇಳಿದರು.
ನಬಿರೋಶನ್ ಪ್ರಕಾಶನ ಬೋರಗಿ, ಕೃಷ್ಣರಾಜ ಪರಿಷತ್ಮಂದಿರದಲ್ಲಿ ಹಮ್ಮಿಕೊಂಡ ಪೊಲೀಸ್ ಕಲಾಸಂಗಮ ಹಾಗೂ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಬದುಕಿಗೆ ದಿನಪೂರ್ತಿ ಶ್ರಮಿಸುವ ಶ್ರಮಿಕ. ಅಪ್ಪ ತನ್ನ ಪರಿವಾರದ ಸರ್ವರಿಗೂ ನೆರಳು ನೀಡುವ ಆಲದಂತೆ ಎಂದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿಯೂ ಸಾಕಷ್ಟು ಪ್ರತಿಭಾನ್ವಿತ ಕಲಾವಿದರಿದ್ದು ಅವರಿಗೆ ಸೂಕ್ತ ವೇದಿಕೆ ಬೇಕಿದೆ, ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರೆ ಆರಕ್ಷಕರಿಗೂ ಸೂಕ್ತ ವೇದಿಕೆ ನೀಡುವೆ ಎಂದರು.
ಅಪ್ಪ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಮಹಾಂತೇಶ ಬಿರಾದಾರ ತಂದೆಯ ಹೆಸರಿನಲ್ಲಿ ನನಗೆ ಪ್ರಶಸ್ತಿ ನೀಡಿ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಸಾಧಕರಿಗೆ ಪುರಸ್ಕಾರದೊಂದಿಗೆ ಗೌರವಿಸಿರುವ ಆರಕ್ಷಕ ಮೌಲಾಲಿಯ ನಿಸ್ವಾರ್ಥ ಸಾಮಾಜಿಕ ಸೇವೆ ಅಭಿನಂದನಾರ್ಹ. ಪ್ರಶಸ್ತಿ ಜೊತೆಗೆ ನನಗೆ ನೀಡಿರುವ ಐದು ಸಾವಿರ ನಗದು ಮೌಲಾಲಿ ಬೇವರಿನ ಹಣ. ಇದನ್ನು ಸಾಮಾಜದ ಸತ್ಕಾರ್ಯಕ್ಕಾಗಿ ಬಳಸಿಕೊಳ್ಳುತ್ತೆನೆ. ನಬಿರೋಶನ್ ಪ್ರಕಾಶನ ಸಂಸ್ಥೆ ಹೆಸರಿನಲ್ಲಿ ನಾನು ವೈಯಕ್ತಿಕವಾಗಿ ಐದು ಲಕ್ಷ ಠೇವಣಿ ನೀಡುತ್ತೆನೆ. ಬಂದ ಬಡ್ಡಿಯ ಹಣದಲ್ಲಿ ಸಂಸ್ಥೆಯು ಪ್ರತಿವರ್ಷ ಸಾಮಾಜಿಕ ಕೆಲಸಕ್ಕೆ ಬಳಸಿಕೊಳ್ಳಲಿ ಎಂದರು.
ಚಿತ್ರ ಸಾಹಿತ್ಯ ಡಾ.ವಿ.ನಾಗೇಂದ್ರ ಪ್ರಸಾದ್, ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ.ನಾರಾಯಣ, ವಿವಿಐಪಿ ಭದ್ರತೆ ಡಿಸಿಪಿ ಡಾ.ಹೆಚ್ ಮಂಜುನಾಥ ಬಾಬು ಮಾತನಾಡಿ, ಆರಕ್ಷಕ ಮೌಲಾಲಿ ಆಲಗೂರ ತನ್ನ ತಂದೆಯ ಹೆಸರಿನಲ್ಲಿ ಪ್ರಶಸ್ತಿ ನೀಡಿ ಆರಕ್ಷಕರನ್ನು ಗೌರವಿಸುವ ಕಾರ್ಯ ಶ್ಲಾಘನೀಯ ಮತ್ತು ಅಭಿನಂದನಾರ್ಹ ಎಂದರು.
ಕನ್ನಡ ಸಾಹಿತ್ಯ ಗೆಳೆಯರ ಬಳಗ ಅಧ್ಯಕ್ಷ ರಾಜಶೇಖರ ಕೂಚಬಾಳ, ಎಸ್ ಬಿ ವಿಸ್ಡಮ್ ಕೆರಿಯರ್ ಅಕಾಡೆಮಿಯ ಶರಣಯ್ಯ ಭಂಡಾರಿಮಠ, ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪೊಲೀಸ್ ಕಲಾವಿದರಿಂದ ಭರತನಾಟ್ಯ, ಯಕ್ಷಗಾನ, ಸಮೂಹ ಗಾಯನ ಜರುಗಿದವು. ವೇದಿಕೆ ಮೇಲೆ ಸಿದ್ಧಲಿಂಗ ಚೌಧರಿ, ಆಯೋಜಕ ಮೌಲಾಲಿ ಆಲಗೂರ, ಆರಕ್ಷಕ ತುಕಾರಾಂ ಬಾಲವ್ವಗೋಳ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

