ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅ.೨೭ರಂದು ಅಂತಿಮ ಪಟ್ಟಿ ಪ್ರಕಟ | ಜಿಲ್ಲಾ ಚುನಾವಣಾಧಿಕಾರಿ ಡಾ.ಆನಂದ ಕೆ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ಮಾಹಿತಿ ನೀಡಲಾಯಿತು.
ಭಾರತ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಆಗಸ್ಟ್ ೨೪ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ ೨೩ರವರೆಗೆ ಅವಕಾಶವಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ಹಾಗೂ ಅಕ್ಟೋಬರ್ ೧, ೨೦೨೬ಕ್ಕೆ ೧೮ ವರ್ಷ ಪೂರ್ಣಗೊಳ್ಳುವ ಯುವ ಮತದಾರರು ನಮೂನೆ-೬ರ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಆನಂದ ಕೆ. ತಿಳಿಸಿದರು.
ಅರ್ಹ ಮತದಾರರು ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ವಿಳಾಸ ಬದಲಾವಣೆಗೆ ಸಂಬಂಧಿಸಿದಂತೆ ನಮೂನೆ-೬, ೬ಎ, ೭ ಮತ್ತು ೮ನ್ನು ಸಲ್ಲಿಸಬಹುದಾಗಿದೆ. ಸಂಬಂಧಿಸಿದ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಅಥವಾ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಭಾರತ ಚುನಾವಣಾ ಆಯೋಗದ ವೋಟರ್ ಸರ್ವಿಸ್ ಫೊರ್ಟಲ್ ಮೂಲಕವೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ನಮೂನೆ-೬, ೬ಎ, ೭ ಮತ್ತು ೮ರಡಿ ಸ್ವೀಕರಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿಗಳು ನಮೂನೆ-೯, ೧೦, ೧೧, ೧೧ಎ ಹಾಗೂ ೧೧ಬಿಗಳಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳ ಪಟ್ಟಿಗಳನ್ನು ಈಗಾಗಲೇ ಸಿದ್ಧಪಡಿಸಿಪೂರೈಸಲಾಗಿದೆ. ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಪಟ್ಟಿಗಳನ್ನು ಜಿಲ್ಲಾ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ. ಆಗಸ್ಟ್ ೨೪ರಿಂದ ಸೆಪ್ಟೆಂಬರ್ ೨೧ರವರೆಗೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೧೨,೭೫೭ ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ ಹೆಸರು ಸೇರ್ಪಡೆಗಾಗಿ ನಮೂನೆ-೬ರಲ್ಲಿ ೭,೪೦೨, ನಮೂನೆ-೬ಎರಲ್ಲಿ ಯಾವುದೇ ಅರ್ಜಿ ಸ್ವೀಕೃತವಾಗಿಲ್ಲ, ಹೆಸರು ಕೈಬಿಡುವಿಕೆ ಕುರಿತ ನಮೂನೆ-೭ರಲ್ಲಿ ೨೧೦ ಹಾಗೂ ತಿದ್ದುಪಡಿಗಾಗಿ ನಮೂನೆ-೮ರಲ್ಲಿ ೫,೧೪೫ ಅರ್ಜಿಗಳು ಸ್ವೀಕೃತವಾಗಿವೆ.
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧,೩೯೪, ದೇವರಹಿಪ್ಪಗಿ ಕ್ಷೇತ್ರದಲ್ಲಿ ೧,೪೪೧, ಬಸವನಬಾಗೇವಾಡಿ ಕ್ಷೇತ್ರದಲ್ಲಿ ೧,೫೧೫, ಬಬಲೇಶ್ವರ ಕ್ಷೇತ್ರದಲ್ಲಿ ೧,೪೨೧, ಬಿಜಾಪುರ ನಗರ ಕ್ಷೇತ್ರದಲ್ಲಿ ೧,೯೭೫, ನಾಗಠಾಣ ಕ್ಷೇತ್ರದಲ್ಲಿ ೨,೧೮೦, ಇಂಡಿ ಕ್ಷೇತ್ರದಲ್ಲಿ ೧,೩೯೭ ಹಾಗೂ ಸಿಂದಗಿ ಕ್ಷೇತ್ರದಲ್ಲಿ ೧,೪೩೪ ಅರ್ಜಿಗಳು ಸ್ವೀಕೃತವಾಗಿವೆ.ಗಣತಿ ಫಾರ್ಮ್ಗಳು ಹಾಗೂ ಮತದಾರರ ಪಟ್ಟಿಯಲ್ಲಿನ ಮಾಹಿತಿಯಲ್ಲಿ ಹೊಂದಾಣಿಕೆಯಾಗದಿರುವುದು, ಕಾಗುಣಿತ ದೋಷಗಳು ಅಥವಾ ಮ್ಯಾಪಿಂಗ್ ಆಗದಿರುವ ಪ್ರಕರಣಗಳಿಗೆ ಸಂಬಂಧಿಸಿದ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಈ ವಿಚಾರಣೆ ಪ್ರಕ್ರಿಯೆಯನ್ನು ಅಕ್ಟೋಬರ್ ೨೨ರೊಳಗೆ ಪೂರ್ಣಗೊಳಿಸಲಾಗುವುದು. ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ ೨೭ರಂದು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಆನಂದ ಕೆ. ಸ್ಪಷ್ಟಪಡಿಸಿದರು.
ಎಎಸ್ ಡಿಡಿಒ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ ದಾಖಲೆ ಸಲ್ಲಿಸಿ ಅರ್ಹ ಮತದಾರರು ತಮ್ಮ ಹೆಸರನ್ನು ಮತಗಟ್ಟೆಯಲ್ಲಿ ಸೇರ್ಪಡೆಗೊಳಿಸಿಕೊಳ್ಳಬಹುದಾಗಿದೆ.
ಸಭೆಯಲ್ಲಿ ಚುನಾವಣಾ ತಹಶೀಲ್ದಾರರಾದ ಪ್ರೇಮ ಸಿಂಗ್ ಪವಾರ, ಚುನಾವಣಾ ವಿಭಾಗದ ಸಚ್ಚಿದಾನಂದ ತೇರದಾಳ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಉಮೇಶ ಕಾರಜೋಳ, ಹಮೀದ್ ಮುಶ್ರೀಫ್, ಎಸ್ ಎಸ್ ಖಾದ್ರಿ, ಈರಣ್ಣ ಎನ್ ರಾವೂರ್, ಪ್ರಕಾಶ ಸಬರದ ಮತ್ತಿತರರು ಉಪಸ್ಥಿತರಿದ್ದರು.

