ಸುದ್ದಿ ಮಾಡಿದ ಬೆನ್ನಲ್ಲೇ ತಾರಾತುರಿಯಲ್ಲಿ ರಸ್ತೆ ನಿರ್ಮಾಣ | ಡಾಂಬರ್ ಹಾಕಿದ ಮರುದಿನವೇ ಕಿತ್ತುಹೋದ ಕಲ್ಯಾಣ ಪಥ್!
ಉದಯರಶ್ಮಿ ದಿನಪತ್ರಿಕೆ
ಆಫಜಲಪುರ: ತಾಲೂಕಿನ ಚಿಂಚೋಳಿ ರಸ್ತೆಯ ಕಲ್ಯಾಣ ಪಥ್ ಕಾಮಗಾರಿ ಗುಣಮಟ್ಟದ ಬಗ್ಗೆ ಇದೀಗ ಗಂಭೀರ ಪ್ರಶ್ನೆಗಳು ಎದ್ದಿವೆ. ರಸ್ತೆ ಕಾಮಗಾರಿ ವಿಳಂಬವಾಗಿರುವ ಕುರಿತು ’ಉದಯರಶ್ಮಿ’ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಾರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿರುವಂತೆ ಕಂಡುಬಂದಿದ್ದು, ಡಾಂಬರ್ ಹಾಕಿದ ಮರುದಿನವೇ ರಸ್ತೆಯ ಮೇಲ್ಮೈ ಕಿತ್ತುಹೋಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕಿದ್ದರೂ ಹಲವು ತಿಂಗಳು ವಿಳಂಬವಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ನಂತರ ಕಾಮಗಾರಿಗೆ ಏಕಾಏಕಿ ವೇಗ ನೀಡಲಾಗಿದೆ. ಆದರೆ ಕಾಮಗಾರಿ ಮುಗಿಸಿದ ಕೆಲವೇ ದಿನಗಳಲ್ಲಿ ರಸ್ತೆ ಕಿತ್ತು ಹೋಗುತ್ತಿರುವುದು ಡಾಂಬರೀಕರಣದ ಗುಣಮಟ್ಟ, ಬಳಸಿದ ಸಾಮಗ್ರಿ ಹಾಗೂ ಕಾಮಗಾರಿಯ ಮೇಲ್ವಿಚಾರಣೆ ಕುರಿತು ಅನುಮಾನ ಮೂಡಿಸಿದೆ.
ಸ್ಥಳೀಯರ ಆರೋಪದ ಪ್ರಕಾರ, ರಸ್ತೆಗೆ ಸಮರ್ಪಕವಾಗಿ ತಳಹದಿ ಸಿದ್ಧಪಡಿಸಲಾಗಿದೆಯೇ? ನಿಯಮಾನುಸಾರ ಡಾಂಬರ್ ಹಾಕಲಾಗಿದೆಯೇ? ಗುಣಮಟ್ಟದ ಸಾಮಗ್ರಿ ಬಳಸಲಾಗಿದೆಯೇ? ಎಂಬ ಪ್ರಶ್ನೆಗಳು ಎದುರಾಗಿವೆ.
ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಸಂಬಂಧಿಸಿದ ಇಲಾಖೆ ತಕ್ಷಣ ಪರಿಶೀಲಿಸಿ, ತಾಂತ್ರಿಕ ಪರೀಕ್ಷೆ ನಡೆಸಬೇಕು. ಕಳಪೆ ಕಾಮಗಾರಿ ಸಾಬೀತಾದರೆ ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು, ಸಾರ್ವಜನಿಕರ ಹಣ ವ್ಯರ್ಥವಾಗದಂತೆ ರಸ್ತೆಯನ್ನು ಗುತ್ತಿಗೆದಾರರ ವೆಚ್ಚದಲ್ಲೇ ಗುಣಮಟ್ಟದ ಮಾನದಂಡದಂತೆ ಮರುನಿರ್ಮಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಕಲ್ಯಾಣ ಪಥ್ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಜನರಿಗೆ ಎಷ್ಟು ವರ್ಷ ಬಾಳಿಕೆ ಬರಲಿದೆ? ಅಥವಾ ಉದ್ಘಾಟನೆಗೂ ಮುನ್ನವೇ ಕಿತ್ತುಹೋಗುವ ಕಾಮಗಾರಿಯಾಗಲಿದೆಯೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
“ಅಧಿಕಾರಿಗಳು ಗುತ್ತಿಗೆದಾರನ ಜೊತೆಗೆ ಸೇರಿದ್ದಾರೆ ಎನ್ನಿಸುತ್ತಿದೆ. ಆರು ತಿಂಗಳು ಮೊದಲೇ ಮುಗಿಯಬೇಕಾದ ರಸ್ತೆ, ಮಾಧ್ಯಮಗಳಲ್ಲಿ ಸುದ್ದಿ ಆದ ಮೇಲೆ ತಾರಾತುರಿಯಲ್ಲಿ ಮುಗಿಸಿ ಹಣ ಎತ್ತಿ ಹೋಗುವ ಹುನ್ನಾರ ಮಾಡಿದಂತಿದೆ. ಡಾಂಬರ್ ಹಾಕಿದ ಮರುದಿನವೇ ರಸ್ತೆ ಕಿತ್ತು ಹೋಗುತ್ತಿದೆ. ಇದು ಯಾವ ರೀತಿಯ ಗುಣಮಟ್ಟದ ಕಾಮಗಾರಿ ಎಂಬುದನ್ನು ಅಧಿಕಾರಿಗಳು ಜನರಿಗೆ ಸ್ಪಷ್ಟಪಡಿಸಬೇಕು.”
– ಚಂದ್ರಕಾಂತ್ ಮದರಿ
ಸ್ಥಳೀಯರು

