ಉದಯರಶ್ಮಿ’ ಸಂಪಾದಕ ಇಂದುಶೇಖರ ಮಣೂರ ಅವರನ್ನು ಸನ್ಮಾನಿಸಿದ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ವಿನೋದ್ ಎಂ ಖೇಡ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಿಂದ ಪ್ರಕಟಗೊಳ್ಳುವ “ಉದಯರಶ್ಮಿ” ದಿನಪತ್ರಿಕೆಯು ತನ್ನ ಜನಪರ – ಜೀವಪರ ಧೋರಣೆಯ ವರದಿಗಳಿಂದ ಕಡಿಮೆ ಅವಧಿಯಲ್ಲಿಯೇ ಅತ್ಯಧಿಕ ಓದುಗರ ಮನಗೆದ್ದಿದೆ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ವಿನೋದ್ ಎಂ ಖೇಡ್ ಅಭಿಪ್ರಾಯಿಸಿದರು.
ಶುಕ್ರವಾರ ನಗರದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ “ಜಿಲ್ಲಾ ರಾಜ್ಯೋತ್ಸವ” ಪುರಸ್ಕಾರ ಪಡೆದ ಪ್ರಯುಕ್ತ ’ಉದಯರಶ್ಮಿ’ ದಿನಪತ್ರಿಕೆ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಅವರನ್ನು ವಿಜಯಪುರ ಜಿಲ್ಲಾ ಸಂಘ -ಸಂಸ್ಥೆಗಳ ಒಕ್ಕೂಟದಿಂದ ಸನ್ಮಾನಿಸಿ ಅವರು ಮಾತನಾಡಿದರು.

ಪತ್ರಿಕಾಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಇಂದುಶೇಖರ ಮಣೂರ ಅವರಿಗೆ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ತನ್ನನ್ನು ತಾನು ಗೌರವಿಸಿಕೊಂಡಿದೆ ಎಂದು ಹೇಳಿದ ಅವರು, ಮಣೂರ ಅವರು ತಮ್ಮ ಪತ್ರಿಕೆಯ ಮೂಲಕ ಸಮಾಜದಲ್ಲಿ ನೊಂದವರ ಧ್ವನಿಯಾಗಿ ಮತ್ತಷ್ಟು ಕೆಲಸ ಮಾಡಲಿ ಎಂದು ವಿನೋದ ಖೇಡ ಸದಾಶಯ ವ್ಯಕ್ತಪಡಿಸಿದರು.
ಸಂಘ -ಸಂಸ್ಥೆಗಳ ಮುಖಂಡ ಹಾಗೂ ಸಂಶೋಧಕ ಲಾಯಪ್ಪ ಇಂಗಳೆ ಅವರು ಮಾತನಾಡಿ, ವಿಜಯಪುರ ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದ ಫ ಗು ಹಳಕಟ್ಟಿ, ಮೋಹರೆ ಹಣಮಂತರಾಯರು ತಮ್ಮ ಪತ್ರಿಕೆಗಳ ಮೂಲಕ ಭಾರತ ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ತಮ್ಮ ಪತ್ರಿಕೆಯ ಮೂಲಕ ಸರಕಾರದ ಗಮನ ಸೆಳೆಯುವ ಕಾರ್ಯ ಮಾಡುತ್ತಿರುವ ಇಂದುಶೇಖರ ಮಣೂರ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸನ್ಮಾನಕ್ಕೆ ಪ್ರತಿಯಾಗಿ ಮಾತನಾಡಿದ ಇಂದುಶೇಖರ ಮಣೂರ ಅವರು, ಈ ಸನ್ಮಾನ ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಉತ್ಸಾಹದಿಂದ, ಪರಿಣಾಮಕಾರಿಯಾಗಿ ಸೇವೆಗೈಯಲು ಪ್ರೇರಣೆ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುಲಿಂಗಪ್ಪಗೌಡ ಪಾಟೀಲ, ಅಂಬಣ್ಣ ಗುನ್ನಾಪುರ, ಮಲ್ಲಿಕಾರ್ಜುನ ಬಿರಾದಾರ, ಅನಿಲ ಪವಾರ ಶ್ರೀನಿವಾಸ ಕೋಳಿ, ದಾದಾಪೀರ್ ಮುಲ್ಲಾ ಹಾಗೂ “ಉದಯರಶ್ಮಿ” ಪ್ರಕಾಶಕಿ ಶೈಲಾ ಮಣೂರ ಉಪಸ್ಥಿತರಿದ್ದರು.

“ಹಿಂದೆ ಹೈದ್ರಾಬಾದ್ ವಿಮೋಚನಾ ಚಳುವಳಿಯ ಹೋರಾಟದಲ್ಲಿ ಇಲ್ಲಿಯ ಸ್ಥಳಿಯ ಪತ್ರಿಕೆಗಳು ಮಹತ್ವದ ಪಾತ್ರ ವಹಿಸಿದ್ದವು. ವಿಜಯಪುರ ಜಿಲ್ಲೆಯ ಬಹುತೇಕ ಭಾಗವು ರಜಾಕರ ಹಾವಳಿಯಿಂದ ನಲುಗಿಹೋಗಿತ್ತು. ಹೀಗಿರುವಾಗ ಎಲ್ಲ ಅರ್ಹತೆಯಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಂದು ವಿಜಯಪುರ ಜಿಲ್ಲೆ ೩೭೧ (ಜೆ) ಸೌಲಭ್ಯದಿಂದ ವಂಚಿತವಾಯಿತು. ಈಗ ಮತ್ತೆ ಈ ಹೋರಾಟಕ್ಕೆ ಚಾಲನೆ ನೀಡಿದ್ದು, ಅದು ಸಾಕಾರಗೊಳ್ಳುವವರೆಗೆ ನಾವೆಲ್ಲ ವಿರಮಿಸುವುದಿಲ್ಲ.”
– ಲಾಯಪ್ಪ ಇಂಗಳೆ
ಸಂಶೋಧಕರು, ವಿಜಯಪುರ

