ಅಗ್ನಿವೀರ ನೇಮಕಾತಿ ರ್ಯಾಲಿ ಸಮಾರೋಪ | ಸಮಾರಂಭರ‍್ಯಾಲಿ ಯಶಸ್ವಿಗೊಳಿಸಿದ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದ ಕರ್ನಲ್ ಸೋಮು ಅಬಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೇನೆಗೆ ಸೇರುವ ಕನಸು ಹೊತ್ತ ಯುವಕರು ನಿರಂತರ ಪರಿಶ್ರಮ ಮತ್ತು ಶಿಸ್ತು ಕಾಯ್ದುಕೊಳ್ಳಬೇಕು ಎಂದು ಕರ್ನಲ್ ಸೋಮು ಅವರು ಹೇಳಿದರು.
ಭಾರತೀಯ ಸೇನೆಯ ಮಂಗಳೂರು ನೇಮಕಾತಿ ವಲಯ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಗ್ನಿವೀರ ನೇಮಕಾತಿ ರ್ಯಾಲಿಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸೇನೆ ಸೇರುವ ಕನಸು ಏಕಾಏಕಿಯಾಗಿ ಈಡೇರದಿದ್ದಲ್ಲಿ, ಯುವಕರು ಆತಂಕಕ್ಕೊಳಗಾಗಬೇಕಿಲ್ಲ. ಅದೇ ಉತ್ಸಾಹ, ನಿರಂತರ ದೈಹಿಕ ಅಭ್ಯಾಸ ಮತ್ತು ಶಿಸ್ತು ಮೈಗೂಡಿಸಿಕೊಂಡರೆ ಖಂಡಿತವಾಗಿಯೂ ಸೇನೆ ಸೇರ್ಪಡೆ ಕನಸು ಸಾಕಾರವಾಗುತ್ತದೆ ಎಂದರು.
ಭಾರತೀಯ ಸೇನೆ ಸೇರುವುದು ದೇಶಸೇವೆಯ ಅತ್ಯಂತ ಮಹತ್ವದ ಅವಕಾಶ. ವಿಜಯಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿದ ೧೧ ಜಿಲ್ಲೆಗಳ ಯುವಕರು ಸದಾ ಶಿಸ್ತು, ಉತ್ಸಾಹ ಹಾಗೂ ದೈಹಿಕ ಸಾಮರ್ಥ್ಯ ಪ್ರದರ್ಶಿಸಿದರು. ಇದರಿಂದಾಗಿ ನೇಮಕಾತಿ ಪ್ರಕ್ರಿಯೆ ಶಿಸ್ತಿನಿಂದ ನಡೆಯಲು ಅನುಕೂಲವಾಯಿತು ಎಂದರು.
ಆನ್‌ಲೈನ್ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ರ್ಯಾಲಿಯ ದೈಹಿಕ ಹಾಗೂ ವೈದ್ಯಕೀಯ ತಪಾಸಣೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮುಂದಿನ ಹಂತದ ಸಿದ್ಧತೆ ಮಾಡಿಕೊಳ್ಳಲು ಇದೇ ವೇಳೆ ಅವರು ಶುಭ ಹಾರೈಸಿದರು.
ಜೊತೆಗೆ ರ‍್ಯಾಲಿಯ ಸುಸೂತ್ರ ನಿರ್ವಹಣೆಗೆ ಶ್ರಮಿಸಿದ ವಿಜಯಪುರ ಜಿಲ್ಲಾಡಳಿತದ ಸಹಕಾರವನ್ನು ಸ್ಮರಿಸಿದ ಕರ್ನಲ್ ಸೋಮು ಅವರು, ೧೧ ಜಿಲ್ಲೆಗಳಿಂದ ಆಗಮಿಸಿದ ಎಲ್ಲ ಅಭ್ಯರ್ಥಿಗಳಿಗೆ ಸಕಲ ರೀತಿಯ ವ್ಯವಸ್ಥೆ ಮಾಡಿದ ಜಿಲ್ಲಾಡಳಿತದ ಕ್ರಮವನ್ನು ಮುಕ್ತಕಂಠದಿಂದ ಪ್ರಶಂಸಿಸಿ, ಕೃತಜ್ಞತೆ ಸಲ್ಲಿಸಿದರು.
ಅಭ್ಯರ್ಥಿಗಳಿಗೆ ಸೂಕ್ತ ವಸತಿ, ಕುಡಿಯುವ ನೀರು, ವೈದ್ಯಕೀಯ ಸೇವೆ ಹಾಗೂ ಭದ್ರತೆ ಒದಗಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

