ಕಾಂಗ್ರೆಸ್ ಸದಸ್ಯನಿಗೆ ಅಧ್ಯಕ್ಷ ಪಟ್ಟ | ಬಿಜೆಪಿ ಪಾಳಯದಲ್ಲಿ ಸಂಭ್ರಮ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ 15ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ದಸ್ತಗೀರ ಮಕ್ತುಂಸಾಬ ಕಲಾದಗಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಳಿದ ಅವಧಿಗಾಗಿ ಚುನಾವಣೆ ನಡೆಸಲಾಯಿತು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಕಾರ್ಯನಿರ್ವಹಿಸಿದರು. ಪಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷ ಸ್ಥಾನಕ್ಕೆ ದಸ್ತಗೀರ ಕಲಾದಗಿ ಹಾಗೂ 10ನೇ ವಾರ್ಡ್ ಸದಸ್ಯೆ ಯಾಸ್ಮೀನಾಬಾನು ಮೈಬುಸಾಬ ಕಲಾದಗಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುವ ಅವಧಿಯಲ್ಲಿ ಯಾಸ್ಮೀನಾಬಾನು ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ದಸ್ತಗೀರ ಕಲಾದಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಘೋಷಿಸಿದರು.
ಪಪಂನಲ್ಲಿ ಒಟ್ಟು 17 ಸದಸ್ಯರಿದ್ದು, ಓರ್ವ ಸದಸ್ಯರ ನಿಧನದಿಂದ ಪ್ರಸ್ತುತ 16 ಸದಸ್ಯರಿದ್ದಾರೆ. ಶಾಸಕ ಶಿವಾನಂದ ಪಾಟೀಲ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮತದಾನದ ಹಕ್ಕು ಇದ್ದರೂ ಚುನಾವಣಾ ಪ್ರಕ್ರಿಯೆಗೆ ಹಾಜರಾಗಿರಲಿಲ್ಲ. 11ನೇ ಹಾಗೂ 13ನೇ ವಾರ್ಡ್‌ನ ಸದಸ್ಯರೂ ಗೈರಾಗಿದ್ದರು.
ಬಿಜೆಪಿ ಮುಖಂಡರೊಂದಿಗೆ ವಿಜಯೋತ್ಸವ
ದಸ್ತಗೀರ ಕಲಾದಗಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬಿಜೆಪಿ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ಬೆಳ್ಳುಬ್ಬಿ ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಲಾಯಿತು. ಕಾಂಗ್ರೆಸ್ ಸದಸ್ಯರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ವಿಜಯೋತ್ಸವದಲ್ಲಿ ಭಾಗವಹಿಸಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ಗಮನ ಸೆಳೆಯಿತು.
ಅಧ್ಯಕ್ಷ ಸ್ಥಾನದ ಚುನಾವಣೆಗೆ ಮುನ್ನ ವಿವಿಧ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ದಸ್ತಗೀರ ಕಲಾದಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ನಾಮಪತ್ರ ಹಿಂಪಡೆಯುವ ಬೆಳವಣಿಗೆ ಹಾಗೂ ಕೆಲವು ಸದಸ್ಯರ ಗೈರುಹಾಜರಿ ಕೂಡ ಚರ್ಚೆಗೆ ಗ್ರಾಸವಾಗಿದೆ.

