೭ಗಂಟೆ ವಿದ್ಯುತ್ ಬದಲು ೬ ಗಂಟೆ ಪೂರೈಕೆಗೆ ರೈತರಿಂದ ಆಕ್ರೋಶ | ರಾತ್ರಿ ವಿದ್ಯುತ್ ನಿಲ್ಲಿಸಿ ಹಗಲು ವೇಳೆಯಲ್ಲೇ ನೀಡಲು ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿಪಡಿಸಿರುವ ೭ಗಂಟೆಗಳ ವಿದ್ಯುತ್ ಬದಲಾಗಿ ಕೇವಲ ೬ ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿರುವುದನ್ನು ಖಂಡಿಸುತ್ತೇನೆ. ರೈತರ ಹಿತದೃಷ್ಟಿಯಿಂದ ನಿಗದಿತ ಅವಧಿಯಷ್ಟು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಿಂದಗಿ ತಾಲೂಕಾಧ್ಯಕ್ಷ ಧರಪ್ಪಗೌಡ ಬಿರಾದಾರ ಆಗ್ರಹಿಸಿದ್ದಾರೆ.
ಸಿಂದಗಿ ಹೆಸ್ಕಾಂ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಒಂದು ಗಂಟೆ ವಿದ್ಯುತ್ ಕಡಿತವಾಗುವುದರಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ರೈತರು ಬೀಜ, ಗೊಬ್ಬರ, ಔಷಧಿ, ಕೂಲಿ ಸೇರಿದಂತೆ ಅಪಾರ ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದಾರೆ. ವಿದ್ಯುತ್ ಕೊರತೆಯಿಂದ ನೀರಾವರಿ ಸಾಧ್ಯವಾಗದಿದ್ದರೆ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ರಮೇಶ ಹೂಗಾರ, ಬಸವರಾಜ ಹಿಪ್ಪರಗಿ, ಶ್ರೀಶೈಲಗೌಡ ಪಾಟೀಲ, ಗುಂಡುರಾವ ಬಿರಾದಾರ, ಬಸಯ್ಯ ದುಮ್ಮದ್ರಿ, ಶ್ರೀಶೈಲ ಘತ್ತರಗಿ, ಶಿವಪ್ಪ ಪಾಟೀಲ, ರಾಜಕುಮಾರ ಬಿರಾದಾರ, ಸಂತೋಷ ಬಸಗೊಂಡ, ಮಲ್ಲುಗೌಡ ಬಿರಾದಾರ, ಹಣಮಂತ ಜಾಲವಾದಿ ಸೇರಿದಂತೆ ಇತರರು ಇದ್ದರು.
ರಾತ್ರಿ ವಿದ್ಯುತ್‌ನಿಂದ ಅಪಾಯ
ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ರೈತರು ಜೀವದ ಹಂಗು ತೊರೆದು ಹೊಲಗಳಿಗೆ ತೆರಳಿ ಪಂಪ್‌ಸೆಟ್‌ಗಳನ್ನು ಚಾಲನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ರಾತ್ರಿ ಹೊಲಗಳಿಗೆ ತೆರಳುವ ಸಂದರ್ಭದಲ್ಲಿ ಹಾವು, ವಿಷಜಂತುಗಳು ಸೇರಿದಂತೆ ವಿವಿಧ ಅಪಾಯಗಳ ಭೀತಿ ಎದುರಾಗುತ್ತಿದೆ. ಹಾಗಾಗಿ ರಾತ್ರಿ ವಿದ್ಯುತ್ ನಿಲ್ಲಿಸಿ, ಹಗಲು ವೇಳೆಯಲ್ಲೇ ಸಮರ್ಪಕ ವಿದ್ಯುತ್ ನೀಡಲು ರೈತರು ಆಗ್ರಹಿಸಿದರು

