ಸಿಂದಗಿಯಲ್ಲಿ ನೂರಾರು ಜೋಡೆತ್ತುಗಳೊಂದಿಗೆ ರೈತರ ಪ್ರತಿಭಟನೆ | ರೈತರಿಗೆ ಮಾಸಿಕ ೧೧ಸಾವಿರ ಪ್ರೋತ್ಸಾಹಧನ ನೀಡಲು ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಎತ್ತಿನ ನೇಗಿಲಿನಿಂದ ಉಳುಮೆ ಮಾಡುವ ಮೂಲಕ ಮಣ್ಣು, ಪರಿಸರ ಹಾಗೂ ಕೃಷಿ ಸಂಸ್ಕೃತಿಯ ಸಂರಕ್ಷಣೆಗೆ ಕೊಡುಗೆ ನೀಡುತ್ತಿರುವ ಜೋಡೆತ್ತಿನ ಕೃಷಿಕರನ್ನು ನೇಗಿಲಯೋಗಿಗಳು ಎಂದು ಗುರುತಿಸಬೇಕು. ಸಾಂಪ್ರದಾಯಿಕ ಕೃಷಿ ಪದ್ಧತಿಗಳ ನಿರ್ಲಕ್ಷ್ಯದಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದ್ದು, ಪರಿಸರದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಜೋಡೆತ್ತಿನ ಕೃಷಿ ಪದ್ಧತಿಯನ್ನು ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ರೈತ ಮುಖಂಡ ಪೀರು ಕೆರೂರ ಹೇಳಿದರು.
ಜೋಡೆತ್ತಿನ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ರಾಜ್ಯ ಸರ್ಕಾರವು ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು ಜಾರಿಗೆ ತಂದು ರಾಜ್ಯದ ಬಜೆಟ್‌ನಲ್ಲಿ ಶೇ.೧೦ರಷ್ಟು ಅನುದಾನ ಮೀಸಲಿಡಬೇಕು ಹಾಗೂ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ೧೧ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ತಾಲೂಕಿನ ರೈತರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಹಕ್ಕೊತ್ತಾಯಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಜೋಡೆತ್ತುಗಳು ಗ್ರಾಮೀಣ ಕೃಷಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವುಗಳನ್ನು ಸಾಕುತ್ತಿರುವ ರೈತರಿಗೆ ಸರ್ಕಾರ ಸೂಕ್ತ ನೆರವು ನೀಡಬೇಕು. ರೈತರ ಬೇಡಿಕೆಯನ್ನು ಸರ್ಕಾರ ಕೂಡಲೇ ಪರಿಗಣಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಅಶೋಕ ಅಲ್ಲಾಪುರ, ಧಶರಥ ರಜಪೂತ ಮತ್ತು ಭೀಮಣ್ಣ ಹೇರೂರ ಮಾತನಾಡಿ, ಜೋಡೆತ್ತಿನ ಕೃಷಿಕರ ಕೊಡುಗೆಯನ್ನು ಗುರುತಿಸಿ, ಬಯಲುಸೀಮೆಯ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು. ಜೋಡೆತ್ತಿನ ಕೃಷಿಕರು ಸಂಪೂರ್ಣವಾಗಿ ನಾಶವಾದರೆ ಸಾಂಪ್ರದಾಯಿಕ ಕೃಷಿ ಪದ್ಧತಿ ಹಾಗೂ ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದೇವೇಂದ್ರ ಕಡ್ಲಗೊಂಡ, ಮಹಾದೇವ ನಾಗಠಾಣ, ಸಾಹೇಬಗೌಡ ಮರಡಿ, ಗೌಡಪ್ಪ ಪರಗೊಂಡ, ಶ್ರೀನಾಥಗೌಡ ಪರಗೊಂಡ, ಹುಸೇನಿಸಾಬ ಕುಮಸಗಿ, ರೇವಣಸಿದ್ಧ ವಗ್ಗಿ, ರಾಯಪ್ಪ ಅಲ್ಲಾಪುರ, ಬಸವರಾಜ ರಂಜುಣಗಿ, ಭಗವಂತರಾಯ ಬಿರಾದಾರ, ಸಂತೋಷ ಶಿವೂರ, ಶಿವಶರಣ ಹಳ್ಳಿ, ವಿಠ್ಠಲ ಬಾಳಪ್ಪಗೋಳ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಗೂ ಜೋಡೆತ್ತುಗಳ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಎತ್ತಿನ ಬಂಡಿಗಳಲ್ಲಿ ಆಗಮಿಸಿ ಮನವಿ
ಸಿಂದಗಿ ನಗರದ ಬೈಪಾಸ್‌ಯಿಂದ ಸಿಂದಗಿಯ ಸುಮಾರು ೫೦ಕ್ಕೂ ಹೆಚ್ಚು ರೈತರು, ಯರಗಲ್ ಗ್ರಾಮದಿಂದ ೧೫೦ಕ್ಕೂ ಹೆಚ್ಚು ರೈತರು, ಸೋಂಪುರ, ಹಿಕ್ಕನಗುತ್ತಿ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ರೈತರು ೨೦೦ಕ್ಕೂ ಅಧಿಕ ಜೋಡೆತ್ತುಗಳನ್ನು ಕಟ್ಟಿಕೊಂಡು ಕೃಷಿಕರು ಎತ್ತಿನ ಬಂಡಿಗಳ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿ, ಹಕ್ಕೊತ್ತಾಯ ಪತ್ರ ಸಲ್ಲಿಸುವ ಮೂಲಕ ಸರ್ಕಾರದ ಗಮನ ಸೆಳೆದರು.

