ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಆಗದತಂತ್ರ ವಿಭಾಗದ ವತಿಯಿಂದ ಕಾಲೇಜಿನಲ್ಲಿ ವಿಶ್ವ ರೇಬಿಸ್ ದಿನ ಆಚರಿಸಲಾಯಿತು.
ಇದರ ಅಂಗವಾಗಿ ಜನಸಾಮಾನ್ಯರಲ್ಲಿ ರೇಬೀಸ್ ವೈರಾಣು ಹರಡುವ ವಿಧಾನ, ರೋಗಪೀಡಿತ ಸಾಕಿದ ನಾಯಿಗಳಿಂದ ಹಾಗೂ ಬೀದಿ ನಾಯಿಗಳಿಂದ ಕೆಲವು ಭಾರಿ ಎದುರಾಗುವ ಪ್ರಾಣಾಪಾಯದ ಕುರಿತು ಜನಜಾಗೃತಿ ಅಭಿಯಾನ ನಡೆಸಲಾಯಿತು.
ಈ ಅಭಿಯಾನದಲ್ಲಿ ಮಹಾವಿದ್ಯಾಲಯದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಅಲ್ಲದೇ, ಮಹಾವಿದ್ಯಾಲಯದ ಆವರಣದಿಂದ ನಗರದ ಕೇಂದ್ರ ಬಸ್ ನಿಲ್ದಾಣದ ವರೆಗೆ ಜಾಥಾ ಕಾರ್ಯಕ್ರಮ ನಡೆಸಲಾಯಿತು.
ಈ ಜಾಥಾದಲ್ಲಿ ಬೀದಿ ನಾಯಿಗಳ ಕಡಿತ, ಮುನ್ನೆಚ್ಚರಿಕಾ ಕ್ರಮಗಳು, ಲಕ್ಷಣಗಳು, ಪ್ರಥಮ ಚಿಕಿತ್ಸೆ, ಉಪಚಾರ ಕುರಿತು ವೈದ್ಯ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶನ ಮಾಡಿದರು. ಜನಸಾಮಾನ್ಯರಲ್ಲಿ ರೇಬೀಸ್ ಮುಕ್ತ ಭಾರತ ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು.
ಅಗದ ತಂತ್ರ ವಿಭಾಗದ ಮುಖ್ಯಸ್ಥೆ ಡಾ. ಮಲ್ಲಮ್ಮ ಬಿರಾದಾರ, ಸಹಾಯಕ ಪ್ರಾಧ್ಯಾಪಕ ಡಾ. ದಾಮೋದರ ನಾಯಕ ಹಾಗೂ ಸಹಪ್ರಾಧ್ಯಾಪಕಿ ಡಾ. ಶ್ವೇತಾ ನಿಡಗುಂದಿ, ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಜಾಥಾಕ್ಕೆ ಚಾಲನೇ ನೀಡಿ ಜನ ಸಾಮಾನ್ಯರಲ್ಲಿ ರೇಬೀಸ್ ಬಗ್ಗೆ ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

