ವಿಜಯಪುರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಾಲಿಕೆ ಸ್ವಚ್ಛತಾ ಕಾರ್ಮಿಕರಿಂದ ವಿಶೇಷವಾಗಿ ಜಾಗೃತಿ ಓಟ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಿಸೆಂಬರ್ 13 ರಂದು ನಗರದಲ್ಲಿ ನಡೆಯುವ ವೃಕ್ಷಥಾನ್ ಹೆರಿಟೇಜ್ ರನ್ ಸಲುವಾಗಿ ಇಂದು ರವಿವಾರ ನಗರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಾಲಿಕೆ ಸ್ವಚ್ಛತಾ ಕಾರ್ಮಿಕರಿಂದ ವಿಶೇಷವಾಗಿ ಜಾಗೃತಿ ಓಟ ನಡೆಯಿತು.
ಬೆಳಗ್ಗೆ ಇಲ್ಲಿನ ಗಗನ್ ಮಹಲ್ ಬಳಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಮಹಾ ನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿಯವರು, ಸಚಿವ ಎಂ. ಬಿ. ಪಾಟೀಲ ಅವರ ನಿರಂತರ ಶ್ರಮದಿಂದ ವಿಜಯಪುರ ಪರಿಸರ ಬದಲಾಗಿದೆ. ಪಾಲಿಕೆ ಪೌರ ಕಾರ್ಮಿಕರು, ಅರಣ್ಯ ಸಿಬ್ಬಂದಿಯೊಂದಿಗೆ ಓಡಿದ್ದು ತಮಗೆ ಸಂತಸ ಹಾಗೂ ತೃಪ್ತಿ ತಂದಿದೆ ಎಂದು ಹೇಳಿದರು.
ಸಾಮಾಜಿಕ ಅರಣ್ಯ ವಲಯ ಉಪ ಸಂರಕ್ಷಣಾಧಿಕಾರಿ ಶಿವರುದ್ರ ಕಬಾಡಗಿ ಮಾತನಾಡಿ, ಅರಣ್ಯ ಉಳಿಸಿ, ಬೆಳೆಸಲು ವೃಕ್ಷಥಾನ್ ಹೆರಿಟೇಜ್ ರನ್ ಮಹತ್ವದ ಪಾತ್ರ ವಹಿಸುತ್ತಿದೆ. ಎಲ್ಲ ವರ್ಗದವರೂ ಇದರಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ವಿಜಯಪುರ ಸೈಕಲ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕ ಮಾತನಾಡಿ, ಹೆಸರು ನೋಂದಾಯಿಸಿದ ಪೌರ ಕಾರ್ಮಿಕರಿಗೆ ಉಚಿತ ನೋಂದಣಿ ಮಾಡಿಸಲಾಗುವುದು. ಹತ್ತು, ಐದು ಕಿಮಿ ಓಟವನ್ನು ಅವರು ಪೂರೈಸಬಹುದು. ಸ್ವಚ್ಚ ವಿಜಯಪುರ, ಹಸಿರು ವಿಜಯಪುರ ಘೋಷ ವಾಕ್ಯದೊಂದಿಗೆ ಇವತ್ತು ಈ ಮೂರು ಕಿಮೀ ಜಾಗೃತಿ ಓಟವನ್ನು ಗಗನ್ ಮಹಲ್‌ನಿಂದ ಶಿವಾಜಿ ವೃತ್ತದ ವರೆಗೆ ಓಡಲಾಗಿದೆ ಎಂದು ಹೇಳಿದರು.
ಜಗತ್ತಿನಲ್ಲಿ ಕೇವಲ ಶೇ. 2ರಷ್ಟು ಜನ ಮಾತ್ರ ಒಡುತ್ತಾರೆ. ವಿಜಯಪುರದ ಐದು ಲಕ್ಷ ಜನರಲ್ಲಿ ಕೇವಲ ಐದಾರು ಸಾವಿರ ಜನ ಮಾತ್ರ ಓಡುತ್ತಾರೆ, ವಾಕ್ ಮಾಡುತ್ತಾರೆ ಮತ್ತು ಬೇಗ ಏಳುತ್ತಾರೆ. ಸೂರ್ಯೋದಯಕ್ಕೂ ಮೊದಲು ಏಳುವವರ ಸಂಖ್ಯೆ ಹೆಚ್ಚಾಗಬೇಕು. ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಗಿಡ ನೆಡಲು, ಅವುಗಳನ್ನು ಕಾಪಾಡಿ ನಮ್ಮ ಪ್ರಕೃತಿ ಉಳಿಸುವ ಸಲುವಾಗಿ ಈ ವೃಕ್ಷಥಾನ್ ನಡೆದಿದೆ. ಜನರಲ್ಲಿ ಇದರಿಂದ ಕನಿಷ್ಟ ಇರೋ ಗಿಡಗಳನ್ನಾದರೂ ಕಡಿಯಬಾರದು ಎನ್ನುವ ಮನೋಭಾವ ಬೆಳೆದಿದೆ. ಮುಂದೆ ಇನ್ನೂ ಬದಲಾಗಲಿದ್ದಾರೆ ಎಂದು ಆಶಿಸಿದರು.
ಮೇಯರ್ ಮಡಿವಾಳ ಕರಡಿ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ, ಎನ್.ಕೆ. ಬಾಗಾಯತ್, ಎಸಿಎಫ್‌ಗಳಾದ ಅನಂತಕುಮಾರ ಪಾಕೆ, ಸೆಲ್ವರಾಜ್ ನಾಯ್ಕರ್, ಶಿವಾನಂದ ಜಿಡ್ಡಿಮನಿ, ರಮೇಶ ಚವ್ಹಾಣ ಹಾಗೂ ಸಹಾಯಕ ಅರಣ್ಯ ಅಧಿಕಾರಿಗಳು, ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ವಿಸಿಜಿ ಸದಸ್ಯರು, ನನ್ನ ಗಿಡ ನನ್ನ ಭೂಮಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

