ಜಾನಕಿ ರಾವ್
“ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ”
ಒಂದು ಪರಿಪೂರ್ಣ ವ್ಯಕ್ತಿತ್ವ ಹೇಗಿರಬೇಕೆನ್ನೋ ವಿವರಣೆ ಇಲ್ಲಿದೆ. ಈ ಮೇಲಿನ ಡಿ. ವಿ. ಜಿ ಯವರ ಹೊನ್ನುಡಿಗೆ ತಕ್ಕಂತೆ ಬದುಕುತ್ತಿರುವ ಒಬ್ಬ ಅದ್ಭುತ ವ್ಯಕ್ತಿಯ ಪರಿಚಯವನ್ನು ಮಾಡಿಕೊಳ್ಳೋಣ.
” ಒಲವಧಾರೆ ” ಎನ್ನುವ ಕಾವ್ಯನಾಮದೊಂದಿಗೆ ಜನಮಾನಸದಲ್ಲಿ ನೆಲೆನಿಂತ ಡಾ. ರಾಜಶೇಖರ ನಾಗೂರರು ಹವ್ಯಾಸಿ ಬರಹಗಾರರಾಗಿದ್ದು, ವೃತ್ತಿಯಲ್ಲಿ ವೈದ್ಯರು.
ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದರೂ ಕೂಡ ಇವರ ಕನ್ನಡ ಭಾಷಾ ಜ್ಞಾನ ಹಾಗು ಅಭಿಮಾನ ಅಪಾರ. ಬದುಕಿನಲ್ಲಿ ಒಂದು ಹಂತದ ಯುದ್ಧ ಗೆದ್ದ ಮೇಲೆ, ತಾವು ನಡೆದುಬಂದ ಹಾದಿ, ಬಾಲ್ಯವನ್ನು ಕಳೆದ ಗ್ರಾಮೀಣ ಪರಿಸರ ಅಲ್ಲಿನ ಪ್ರಾದೇಶಿಕ ಭಾಷೆ, ಎಲ್ಲವನ್ನೂ ಮರೆತು ಪಕ್ಕಾ ಇಂಗ್ಲೀಷ ರಂತೆ ನಡೆದುಕೊಳ್ಳುವ ಅದೆಷ್ಟೋ ಮಂದಿಯನ್ನು ನಾವು ನೀವು ನಿತ್ಯವೂ ನೋಡುತ್ತಲೇ ಇದ್ದೇವೆ. ಇಂಥವರ ನಡುವೆ ಇಂದಿಗೂ ತನ್ನವರ ನಡುವೆ ಇದ್ದಾಗ ಅಪ್ಪಟ ಉತ್ತರ ಕರ್ನಾಟಕದ ಆಡು ಭಾಷೆಯನ್ನು ಮಾತನಾಡುತ್ತ ಸಾಮಾಜಿಕವಾಗಿ ಇತರರೊಂದಿಗೆ ಬೆರೆತಾಗ ಶುದ್ಧ ಕಸ್ತೂರಿ ಕನ್ನಡವನ್ನು ನಿರರ್ಗಳವಾಗಿ ಮಾತನಾಡುವ ಇವರು ಬಹಳ ವಿಶಿಷ್ಟವೆನ್ನಿಸುತ್ತಾರೆ.
ಇನ್ನು ಇವರ ಸಾಹಿತ್ಯಸೇವೆಯ ವಿಷಯಕ್ಕೆ ಬಂದರೆ “ಒಲವಧಾರೆ ” ಎನ್ನುವ ಹೆಸರಿನಡಿಯಲ್ಲಿ ಬರೆಯುವ ಪ್ರತಿ ಹನಿಗವನವೂ ಅದ್ಭುತ. ಯಾವುದೇ ಪ್ರಾಸದ ತ್ರಾಸು , ಆಡಂಬರದ ಶಬ್ದಗಳ ಬಳಕೆಯಿಲ್ಲದೇ ತೀರಾ ಸರಳ ಸುಂದರ ಪುಟ್ಟ ಪುಟ್ಟ ಸಾಲುಗಳಲ್ಲಿ ಉತ್ಕಟ ಪ್ರೇಮ ಭಾವವನ್ನು ಹಿಡಿದಿಡುವ ಪರಿ ಮಾತಿಗೆ ನಿಲುಕದ್ದು.
ನಡೆದಾಡುವ ವಿಶ್ವಕೋಶದಂತಿರುವ ಶ್ರೀಯುತರಿಗೆ, ನನ್ನ ಅನುಭವಕ್ಕೆ ಬಂದಿರುವಂತೆ ಅರಿವಿರದ ಕ್ಷೇತ್ರವೇ ಇಲ್ಲವೆಂದರೆ ಉತ್ಪ್ರೇಕ್ಷೆಯೆನಿಸದು. ಸಾಹಿತ್ಯ, ಸಂಗೀತ, ಭೂಗೋಳ ಶಾಸ್ತ್ರ, ಖಗೋಳ ಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರ,… ಹೀಗೆ ನೀವು ಯಾವುದೇ ವಿಷಯದ ಬಗ್ಗೆ ಮಾಹಿತಿ ಕೇಳಿದರೂ ಸ್ವಲ್ಪವೂ ವಿಚಲಿತರಾಗದೆ ಗಂಟೆಗಟ್ಟಲೆ ಪುಂಖಾನುಪುಂಖವಾಗಿ ವಿವರಣೆ ನೀಡಬಲ್ಲರು.
ವಿದ್ಯಾ ದದಾತಿ ವಿನಯಮ್… ಎಂಬ ನುಡಿಗೆ ಜೀವಂತ ಉದಾಹರಣೆಯಿವರು. ಅಪಾರ ಜ್ಞಾನದಾಗರವಾದರೂ ಕೂಡ ಇವರ ನಡೆನುಡಿ ಸರಳಾತೀಸರಳ.ಒಬ್ಬ ಸಾಮಾನ್ಯ ಸದಸ್ಯರಾಗಿ ಸುಮಾರು 35 ಸಾವಿರ ಸದಸ್ಯರನ್ನು ಹೊಂದಿದ ಮುಖಪುಟದ ಕನ್ನಡ ಸಾಹಿತ್ಯವಲಯದಲ್ಲಿ ಹೊಸ ಸಂಚಲವನುಂಟು ಮಾಡಿದ ” ಕಥಾ ಅರಮನೆ” ಎಂಬ ಸಾಹಿತ್ಯ ಸಾಗರವನ್ನು ಪ್ರವೇಶ ಮಾಡಿದ ಇವರು ತಮ್ಮ ಅಪಾರ ಪ್ರತಿಭೆ ಹಾಗು ಉತ್ತಮ ನಾಯಕತ್ವದ ಗುಣದಿಂದಾಗಿ ಕೆಲವೇ ಕೆಲವು ದಿನಗಳಲ್ಲಿ ಕಥಾ ಅರಮನೆಯ ಸಂಪೂರ್ಣ ಚುಕ್ಕಾಣಿ ಹಿಡಿದ ” ಅಧೀಕ್ಷಕರಾಗಿ ನಿಯುಕ್ತರಾಗಿದ್ದು ಇವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
ಅತ್ಯುತ್ತಮ ನಾಯಕರಾದ ಇವರು ಎಂದೂ ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡದೆ ಎಲ್ಲಾ ನಿರ್ವಾಹಕರು ಹಾಗೂ ಸರ್ವಸದಸ್ಯರನ್ನು ವಿಶ್ವಾಸದಲ್ಲಿ ಕಾಣುತ್ತ, ಎಡವಿದರೆ ಹಿಡಿದೆತ್ತಿ ಜೊತೆಯಲ್ಲೇ ಕರೆದೊಯ್ದು ಕಥಾ ಅರಮನೆಯ ನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತಿದ್ದಾರೆ.
ಕೇವಲ ಬಾಯಿಮಾತಿನಲ್ಲಿ ಕನ್ನಡ ಕನ್ನಡ….. ಸಾಹಿತ್ಯಸೇವೆ ಮಣ್ಣು ಮಸಿಎನ್ನುತ್ತಾ ತೋರಿಕೆಯ ಬಡಾಯಿ ಕೊಚ್ಚಿಕೊಳ್ಳದೆ, ತನ್ನ ಶ್ರಮದ ದುಡಿಮೆಯ ಒಂದಂಶವನ್ನು ಕನ್ನಡ ಸಾಹಿತ್ಯ ಸೇವೆಗೆ ಮುಡಿಪಾಗಿಟ್ಟಿದ್ದಾರೆ. ವಿವಿಧ ಬಹುಮಾನಗಳ ಪ್ರಾಯೋಜಕತ್ವವನ್ನು ವಹಿಸಿಕೊಂಡು ಬರೆಯುವವರನ್ನು ಹುರಿದುಂಬಿಸುತ್ತಿದ್ದಾರೆ.
ಅತ್ಯಂತ ಮಾನವೀಯತೆ ಹಾಗು ಭಾವುಕ ಮನಸ್ಥಿತಿಯವರಾದ ಇವರು ಇತರರ ಕಷ್ಟಗಳನ್ನು ಕೇಳಿ ಮುಖವೇ ನೋಡದೆ ಇದ್ದರೂ ತಮ್ಮಿಂದಾದ ಆರ್ಥಿಕ ಸಹಾಯವನ್ನು ನೀಡಿದ್ದೂ ಇದೆ. ಎಡಗೈಯಿಂದ ಕೊಟ್ಟಿದ್ದು ಬಲಗೈಗೆ ತಿಳಿಯಬಾರದು ಅನ್ನೋ ಮನಸ್ಥಿತಿಯವರಾದ ಇವರು ಎಂದೂ ಕೀರ್ತಿ ಹೊಗಳಿಕೆ ಹಣದ ದಾಹಕ್ಕೆ ಒಳಗಾದವರಲ್ಲವೇ ಅಲ್ಲ. ಎಲೆಮರೆಯ ಕಾಯಿಯಂತಿರುವುದನ್ನೇ ಇಷ್ಟ ಪಡುವ ಇವರು ಸುಮಾರು 3..4… ಪುಸ್ತಕ ತುಂಬುವಷ್ಟು ಬರಹಗಳನ್ನು ಬರೆದಿದ್ದರೂ ಕೂಡ ತನ್ನದೇ ಪುಸ್ತಕ ಬಿಡುಗಡೆಯ ಗೋಜಿಗೆ ಹೋದವರೇ ಅಲ್ಲ.ನಿನ್ನೆ ಮೊನ್ನೆ ಬರವಣಿಗೆ ಆರಂಭ ಮಾಡಿ ತಾವೇ ಗೀಚಿದ ತಲೆಬುಡವಿಲ್ಲದ ಬರಹವನ್ನು ಪುಸ್ತಕರೂಪದಲ್ಲಿ ತಂದು ತಮಗೆ ತಾವೇ ಸಾಹಿತಿ ಅನ್ನೋ ಬಿರುದು ಕೊಟ್ಟು ಬೀಗುವ ಮಂದಿಯ ನಡುವೆ ಇವರೊಂದು ಅಪರೂಪದ ಸ್ವಾತಿ ಮುತ್ತು.
ಹೀಗೆ ಮಾತಿಗಿಂತ ಕೃತಿಯೇ ಲೇಸು ಅನ್ನುವ ಮಾತನ್ನು ಬಲವಾಗಿ ನಂಬಿ ಸದ್ದಿಲ್ಲದೆ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಈ ಕನ್ನಡಮ್ಮನ ಹೆಮ್ಮೆಯ ಕುವರ ಕನ್ನಡ ರಾಜ್ಯೋತ್ಸವದ ಸುದಿನದಂದೆ ಜನ್ಮತಳೆದಿರುವುದು ಅಚ್ಚರಿಯ ಸಂಗತಿ. ಬಹುಷಃ ಮುಂದೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸುವ ಘನ ಉದ್ದೇಶಕ್ಕೆ ಕನ್ನಡಮ್ಮನ ಸಂಪೂರ್ಣ ಆಶೀರ್ವಾದದೊಂದಿಗೆ ಜನನವಾಗಿರಬಹುದು.
ಈ ಸುದಿನದಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನಿಮಗೆ ಆ ತಾಯಿ ಸಕಲ ಶಕ್ತಿಯನ್ನು ನೀಡಿ ಹರಸಲಿ, ಸಧೃಢ ಆಲದ ಮರದಂತಿರುವ ನಿಮ್ಮ ನೆರಳಿನಲ್ಲಿ ಕಥಾ ಅರಮನೆಯ ಸರ್ವಸದಸ್ಯರು ನಿರ್ವಾಹಕರು ನೆಮ್ಮದಿಯಿಂದ ಸಾಹಿತ್ಯ ಸೇವೆ ಸಲ್ಲಿಸುತ್ತಾ ಸಾಗಲಿ..
ನಿಮ್ಮ ಕಣ್ಗಾವಲಿನಲ್ಲಿ ಕಥಾ ಅರಮನೆಯ ಕೀರ್ತಿ ನಭದೆತ್ತರಕ್ಕೇರಲೆಂದು ಕಥಾ ಅರಮನೆಯ ಸಂಸ್ಥಾಪಕರು, ನಿರ್ವಾಹಕರು ಹಾಗು ಸರ್ವ ಸದಸ್ಯರ ಪರವಾಗಿ ಇಂದು ಮುಂದು ಎಂದೆಂದಿಗೂ ನೀವು ನಮ್ಮೆಲ್ಲರ ಹೆಮ್ಮೆಯೆಂದು ತುಂಬು ಅಭಿಮಾನದಿಂದ ನುಡಿಯುತ್ತಾ ಶುಭ ಹಾರೈಸುತ್ತೇನೆ.
ಜನುಮದಿನದ ಶುಭಾಶಯಗಳು
ಆಪ್ತಬಂಧು ಡಾ.ರಾಜಶೇಖರ ನಾಗೂರ ಅವರಿಗೆ “ಉದಯರಶ್ಮಿ” ಪತ್ರಿಕಾ ಬಳಗದಿಂದ ಜನುಮದಿನದ ಶುಭಾಶಯಗಳು.
ಇಂದುಶೇಖರ ಮಣೂರ, ಸಂಪಾದಕರು, ’ಉದಯರಶ್ಮಿ’
ಹಾಗೂ ಪತ್ರಿಕಾ ಬಳಗ, ವಿಜಯಪುರ