ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮದ ತನ್ನಿಮಿತ್ತ ವಿಶೇಷ ಲೇಖನ
ಸಂತೋಷ ಬಿ. ನವಲಗುಂದ(ಮಳ್ಳಿ), ಪತ್ರಕರ್ತ-ಸಾಹಿತಿ
೮೧೩೯೯೭೮೮೭೩
ಕಾವೇರಿಯಿಂದ ಗೋದಾವರಿಯುವರೆಗೂ ಹಬ್ಬಿದ ನಾಡು ಕನ್ನಡ ಎಂದು ಹೇಳಿದ್ದನ್ನು ಗಮನಿಸಿದರೆ, ಈಗಿನ ಕಲ್ಯಾಣ ಕರ್ನಾಟಕದ (ಹೈದರಾಬಾದ್ ಕರ್ನಾಟಕ) ಆ ಕಾಲದ ಹಿರಿಮೆ ಕಣ್ಣ ಮುಂದೆ ಕಟ್ಟುತ್ತದೆ. ಅಲ್ಲದೇ,
“ಪದನರಿದು ನುಡಿಯಲುಂ ನುಡಿದುದ
ನರಿಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುರಿತೋದದೆಯುಂ
ಕಾವ್ಯಪ್ರಯೋಗ ಪರಿಣತಮತಿಗಳ್”
ಈ ಕಾವ್ಯದ ಸಾಲುಗಳು ಕನ್ನಡಿಗನ ಕಾವ್ಯದ ಕನ್ನಡತನ ಶಿಖರದೆಡೆಗೆ ಮುಖಮಾಡುವಂತಿದೆ. ಕನ್ನಡನಾಡು ಪ್ರಾಚೀನ. ನುಡಿ ಸುಲಿದ ರಸಬಾಳೆ. ಕನ್ನಡಿಗನ ಬದುಕು ಸುಲಿದ ರಸಬಾಳೆಯ ಪ್ರತಿಬಿಂಬ. ಇಷ್ಟು ರಸಮಯ, ಸರಳ, ಉದಾರಭಾಷೆ ನಮ್ಮ ಕನ್ನಡ. ಅಗಣಿತ ಸಿರಿವಂತಿಕೆ ಹೊಂದಿದ ಕನ್ನಡ ನಾಡು-ನುಡಿಯ ವ್ಯಾಪ್ತಿ ಬಹುವಿಶಾಲ. ಕನ್ನಡಿಗರಿಗೆ ಕಾವಿರಾಜಮಾರ್ಗಕಾರನ ಕಾವ್ಯ ದಿಕ್ಸೂಚಿಯಂತೆ ತೋರುತ್ತದೆ. ಪ್ರಾಚೀನರು ಇಂತಹ ದಿವ್ಯ ದಿಕ್ಸೂಚಿ ನೀಡಿದ್ದರೂ, ನಮ್ಮ ಕನ್ನಡದ ನಡಿಗೆ ನಿರ್ದಿಷ್ಟ ದಿಕ್ಕಿನೆಡೆಗೆ ಸಾಗದೇ ದಾರಿ ಕಾಣದ ಪಯಣಿಗರಾಗಿದ್ದೇವೆ ಎಂಬುದು ಅಷ್ಟೇ ಸತ್ಯವೆನಿಸುತ್ತದೆ.
ಸಾಮ್ರಾಜ್ಯಶಾಹಿಗಳ ಆಡಳಿತ ಕೊನೆಯಾಗಿ, ವಿದೇಶಿಗರ ದಬ್ಬಾಳಿಕೆಯ ಆಳ್ವಿಕೆಯಿಂದ ಮುಕ್ತಿಹೊಂದಿದ ಭಾರತ, ತನ್ನನ್ನು ತಾನು ಗಟ್ಟಿಯಾಗಿ ಎದ್ದು ನಿಲ್ಲುವ ಸ್ವಾತಂತ್ರ್ಯ ನಂತರದ ಪ್ರಾರಂಭದ ಕಾಲವದು. ರಾಜ್ಯಗಳ ಪುನರ್ ವಿಂಗಡಣಾ ಕಾಯ್ದೆಯ ಅನುಸಾರವಾಗಿ ೧೯೫೬, ನವ್ಹೆಂಬರ್ ೧ರಂದು ಮೈಸೂರು ರಾಜ್ಯ ಉದಯವಾಯಿತು. ಹರಿದುಹಂಚಿಹೋಗಿದ್ದ ಕನ್ನಡಿಗರ ಪ್ರದೇಶಗಳು ಒಂದುಗೂಡಿಸುವಲ್ಲಿ ನಡೆದ ಚಳುವಳಿ ಐತಿಹಾಸಿಕ. ಅಷ್ಟೇ ಅಲ್ಲದೇ, ಕನ್ನಡಿಗರ ಪಾಲಿಗದು ಬ್ರಾಹ್ಮೀ ಮಹೂರ್ತದಲಿ ಪಠಿಸುವ ಪುರಾಣವೂ ಹೌದು!. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಸಂದರ್ಭದಲ್ಲಿ ಮೂಡಿದ ಕರ್ನಾಟಕ ಏಕೀಕರಣದ ಹೆಜ್ಜೆಗಳು ಎಂದೆಂದಿಗೂ ಶಾಶ್ವತ. ನಾಲ್ಕು ಭಾಗಗಳಿಂದಲೂ ನಡೆದ ಹೋರಾಟ ಮತ್ತು ಆ ಕಾಲದ ಕನ್ನಡಿಗನ ಉತ್ತಿಷ್ಠತೆ ಸಾರ್ವಕಾಲಿಕ ಆದರ್ಶವಾದುದು.
ಮೈಸೂರು-ಬೆಂಗಳೂರು ಪ್ರದೇಶದಿಂದ ಸಿರಿಗನ್ನಡಂ ಗೆಲ್ಗೆ ಎಂಬ ಉದ್ಘಾರದೊಡನೆ ಕನ್ನಡದ ಹೋರಾಟವನ್ನು ನಡೆಸಿದರೆ, ಉತ್ತರ ಕರ್ನಾಟಕದವರು ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಎಂಬ ಸಾಮಗಾನದೊಂದಿಗೆ ಕನ್ನಡದ ಸೇವೆಗೆ ಅಣಿಯಾದರು.
ಒಂದೆಡೆ, ಏರಿಸಿ ಹಾರಿಸಿ ಕನ್ನಡದ ಬಾವುಟ !… ಬಾಳ್ ಕನ್ನಡ ತಾಯ್ ಪಾಳ್ ಕನ್ನಡದ ತಾಯ್! ಆಳ್ ಕನ್ನಡದಾ ತಾಯ್ ! ಕನ್ನಡಿಗರೊಡತಿ ಓ ರಾಜೇಶ್ವರಿ” ಎಂಬ ಧ್ವನಿ ಮೊಳಗುತ್ತಿದ್ದರೆ ಇನ್ನೊಂದೆಡೆ, ಎನಿತು ಇನಿದು ಈ ಕನ್ನಡ ನುಡಿಯು! ಮನವನು ತಣಿಸುವ ಮೋಹನಸುದೆಯು! ಎಂಬ ಸುಸ್ವರದ ಆಲಾಪ ಕೇಳಿಸುತ್ತಿತ್ತು.
ಇತ್ತ ಉರ್ದುವಿನ ಮಡುವಿನಲ್ಲಿ ಕೈಯಾಡಿಸಿ ಕನ್ನಡವನ್ನು ಹೊರತೆಗೆದ ಕಲ್ಯಾಣ ಭಾಗದ ಕನ್ನಡಿಗರ ಸಾಹಸ ಕಡಿಮೆಯೇನಿಲ್ಲ. “ ಕನ್ನಡಾಂಬೆಯೆ ತಾಯಿ ಕನ್ನಡಾಂಬೆಯೆ ತಂದೆ| ಕನ್ನಡಾಂಬೆಯೆ ಎನ್ನ ಬಂಧು ಬಳಗ!… ಕನ್ನಡವೆ ನನ್ನೂರ್ ಕನ್ನಡವೆ ನನ್ನಾಡು ಕನ್ನಡವೆ… ಮನ್ನಿಸಿದೆ ಯಾರಾದರನ್ಯ ಬಗೆದರೆ ಮಾತ್ರ ಬೆನ್ನ ಮೂಳೆಯ ಕಿತ್ತಿ ಕೆನ್ನೆ ಬಡಿಯುವೆನೆ! ಎಂಬ ಸಿಂಹ ಘರ್ಜಿನೆಯೊಂದಿಗೆ ಕನ್ನಡ ಕಟ್ಟುವ, ಬೆಳೆಸುವ ಕಾರ‍್ಯಕ್ಕೆ ಮುಂದಾದರು. ವೈಯಕ್ತಿಕ ಬದುಕನ್ನೇ ಬದಿಗೊತ್ತಿ ಕನ್ನಡ ಉಳಿಸಿ, ಬೆಳೆಸುವ ಹಾದಿಯತ್ತ ಕನ್ನಡದ ಹೋರಾಟಗಾರರು ದಾಪುಗಾಲಿಟ್ಟರು.
ಮಡದಿಮಕ್ಕಳ ಬಿಟ್ಟ ಬರಲು ಪೇಳಿರೆ ಬರುವ | ಹಡೆದ ತಾಯ್ತಂದೆಗಳನಗಲಿ ಬರುವೆ| ಅಡಿಗಡಿಗೆ ನಿನ್ನಯ ಪಾದ ಸೇವೆಯಲೆನ್ನ ಜಡದೇಹ ಸವಿಸುವೆನು| ಪುಸಿಯಲ್ಲ ತಾಯೆ ! ಎಂದು ಪಣ ತೊಟ್ಟರು. ಅಷ್ಟೇ ಏಕೆ ತೊಟ್ಟ ಸಂಕಲ್ಪವನ್ನು ಈಡೇರಿಸಿಯೇ ಬಿಟ್ಟರು. ಕರ್ನಾಟಕ ಏಕೀಕರಣದ ಶಿಲ್ಪಿ ಎಂದೇ ಕರೆಯಲ್ಪಡುವ, ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು, ಮುಖಂಡರಾದ ರಾ.ಹ.ದೇಶಪಾಂಡೆ, ಎಸ್.ನಿಜಲಿಂಗಪ್ಪ, ಗಂಗಾಧರರಾವ್ ದೇಶಪಾಂಡೆ, ಡೆಪ್ಯೂಟಿ ಚೆನ್ನಬಸಪ್ಪ, ರೊದ್ದ ಶ್ರೀನಿವಾಸ, ಪಾಟೀಲ ಪುಟ್ಟಪ್ಪ, ಅಂದಾನಪ್ಪ ದೊಡ್ಡಮೇಟಿ, ಸಿದ್ದಪ್ಪ ಕಂಬಳಿ, ಕೆ.ಸಿ.ರೆಡ್ಡಿ, ಹರ್ಡೇಕರ್ ಮಂಜಪ್ಪ, ಕೆಂಗಲ್ ಹನುಮಮತಯ್ಯನಂತವರ ನಾಯಕರ ಹೋರಾಟ ಒಂದೆಡೆಯಾದರೆ, ಬಿ.ಎಂ.ಶ್ರೀ., ಕುವೆಂಪು, ಹುಯಿಲ್‌ಗೋಳ ನಾರಾಯಣರಾವ್, ಅನಕೃ, ಅಂತಹ ಮೇರು ಕವಿಗಳ ಹೋರಾಟ ಅಪ್ರತಿಮವಾದುದು.
ಕಲ್ಯಾಣ ಕರ್ನಾಟಕದಲ್ಲಿ ಬಾಲ್ಕಿ ಪಟ್ಟದ್ದೇವರು, ಪೂಜ್ಯ ದೊಡ್ಡಪ ಅಪ್ಪಾ, ಶಾಂತವೀರ ಸ್ವಾಮಿಗಳು, ಗುಡುಗುಂಟಿ ರಾಮಾಚಾರ್ಯರು, ದೇಸಾಯಿ ಜನಾರ್ಧನರಾಯರು, ದತ್ತಾತ್ರೇಯ ಅವರಾದಿ, ಕಪಟರಾಳ್ ಕೃಷ್ಣಾರಾಯರು, ಕಕ್ಕೇರಿ ಹನುಮಂತಾರಾಯರು, ಅಶ್ವತ್ಥರಾಯರು, ತವಗರು, ಹಾಗರಗಿ ಹನುಮಂತಾರಾಯರು, ಗಣಮುಖಿ ಅಣ್ಣಾರಾಯರು, ರಾಯಚೂರಿನ ಗೂಡಿಹಾಳ ಹನುಮಂತರಾಯರು, ಕೊಪ್ಪಳದ ದೇಸಾಯಿ, ಗುಡುಗುಂಟಿ ಕೃಷ್ಣಾಚಾರ್ಯ ಜೋಶಿಯವರು, ಜಯಾಚರ‍್ಯರು, ಜಿ. ಮಧ್ವರಾಯರು, ಸಿಂಧನೂರಿನ ವಕೀಲ ರಾಮರಾಯರು, ಮೌಲ್ವಿ ಅಬ್ದುಲ್‌ರವೂಫ್ ಸಾಹೇಬರು, ಯರ್‌ಮರಸ್ ಗ್ರಾಮದ ಸಿದ್ರಾಮಪ್ಪನವರು, ಮಾನ್ವಿಯ ನಾರಾಯಣರಾಯರು, ಡಾ. ದೇಶಪಾಂಡೆ ಭಗೀರಥರಾಯರು, ಶಹಾಪುರದ ಹೋಳಿ ಶೇಷಗಿರಿರಾಯ, ನಾಗಪ್ಪ ಶೆಟ್ಟರು, ಯಡ್ರಾಮಿಯ ದುಮ್ಮದ್ರಿ ಶರಣಗೌಡರಂತಹ ಮುಖಂಡರು, ಸಿದ್ಧಯ್ಯ ಪುರಾಣಿಕ, ಬುದ್ಧಿವಂತಶೆಟ್ಟಿ, ಸಗರ ಕೃಷ್ಣಾಚಾರ್ಯರಂತಹ ಸಾಹಿತಿಗಳು ಕನ್ನಡಿಗರ ಬಡಿದೆಬ್ಬಿಸಿ ಕನ್ನಡವನ್ನು ಮೇಲೆತ್ತುವಲ್ಲಿ ಗೈದ ಅನುಪಮ ಸೇವೆಯ ಸ್ಮರಣೆಯ ದಿನವಿದು. ಇವರಷ್ಟೇ ಅಲ್ಲದೇ ದಶದಿಕ್ಕುಗಳಲ್ಲಿಯೂ ಹರಿದು ಹಂಚಿಹೋದ ಕನ್ನಡದ ಪ್ರದೇಶಗಳು ಒಂದೂಗೂಡಿಸುವಲ್ಲಿ ಇಂತಹ ಅನೇಕ ಮಹನೀಯರ ಸೇವೆ ಇಂದಿಗೂ ಸ್ಮರಣೀಯವಾಗಿದೆ.
ನಂತರದ ದಿನಗಳಲ್ಲಿ ಮೈಸೂರು ಹೆಸರನ್ನು ಬದಲಿಸಿ ೧೯೭೩ ನವ್ಹೆಂಬರ್ ೧ರಂದು ಡಿ.ದೇವರಾಜ ಅರಸು ಅವರ ಸರ್ಕಾರ ಕೈಗೊಂಡ ತೀರ್ಮಾನದಿಂದ ಕರ್ನಾಟಕ ಎಂಬ ಹೊಸ ಹೆಸರಿನೊಂದಿಗೆ ಇಂದು ಕನ್ನಡ ನಾಡು ಬೆಳಗುತ್ತಲಿದೆ. ಈ ಬೆಳಗು ಇಂದು ಕೇವಲ ಭಾಷಣ, ಬರಹದಲ್ಲಷ್ಟೇ ಕಾಣುತ್ತಲಿದ್ದೇವೆ ಎಂಬ ಕಟು ಸತ್ಯ ಅರಿಯದಂತಹ ಸ್ಥಿತಿಗೆ ಕನ್ನಡಿಗರು ತಲುಪಿದ್ದಾರೆ.
ಕನ್ನಡ ಎಂದರೆ ಏನು? ಯಾರಿಗಾಗಿ? ಏತಕ್ಕಾಗಿ? ಎಂಬುದನ್ನೇ ಮರೆತಿರುವ ಕಾಲಘಟ್ಟಕ್ಕೆ ಪ್ರಸ್ತುತ ದಿನಗಳು ಸಾಕ್ಷಿಯಾಗಿವೆ ಎಂದರೆ ಅತಿಶಯೋಕ್ತಿ ಆಗಲಾರದು. ಇಂತದ್ದೊಂದು ಸಾಕ್ಷಿಗೆ ಕನ್ನಡಿಗರ ಇವತ್ತಿನ ಬದುಕು ನಿರ್ಭಯವಾಗಿ ನಿರೂಪಿಸುತ್ತಿದೆ. ಅನ್ಯಭಾಷೆಗಳ ವ್ಯಾಮೋಹದಲ್ಲಿ ಕನ್ನಡ ನಿಜಕ್ಕೂ ಸೊರಗಿ ಹೋಗುತ್ತಲಿದೆ. ಇವತ್ತಿನ ಸರ್ಕಾರದಿಂದ ಈ ಹಿಂದೆ ಆಳಿದ ಅಷ್ಟೂ ಸರ್ಕಾರಗಳು ಕನ್ನಡಕ್ಕಾಗಿ ಯೋಚನೆ, ಯೋಜನೆ, ಕನ್ನಡದ ಅನುಷ್ಠಾನಗಳಲ್ಲಿ ಬಡತನ ಎದ್ದು ತೋರುತ್ತಲಿದೆ. ನಾಡಿನ ನ್ಯಾಯಾಂಗ, ಕರ‍್ಯಾಂಗ, ಶಾಸನಾಂಗಗಳು ಕನ್ನಡಕ್ಕಾಗಿ ತೊಟ್ಟ ಸಂಕಲ್ಪಗಳೇನು ಎಂಬುದು ಆತ್ಮಾವಲೋಕನ ಮಾಡಬೇಕಿದೆ. ಪ್ರಸ್ತುತ ದಿನಗಳಲ್ಲಿ ಕನ್ನಡದ ಶಿಕ್ಷಣ, ಕನ್ನಡದ ಶಾಲೆಗಳ ಅವನತಿ ಅಂದಾಜಿಸಿಯೂ ಸರ್ಕಾರಗಳು ಮೌನಕ್ಕೆ ಶರಣಾಗುವುದು ಎಷ್ಟರಮಟ್ಟಿಗೆ ಸರಿ ಎಂಬುದು ಕನ್ನಡಾಭಿಮಾನಿಗಳ ಬಹುದೊಡ್ಡ ಪ್ರಶ್ನೆಯಾಗಿದೆ. ನಗರ ಪ್ರದೇಶದ ಕನ್ನಡಿಗರು ಇಂಗ್ಲೀಷ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮಕ್ಕಳನ್ನು ಕಂಗ್ಲೀಷ ಶಾಲೆಗಳಿಗೆ ಕಳಿಸುವುದು ಅಪಾಯಕಾರಿ ಎಂದೆನಿಸಿತ್ತು. ಆದರೆ ಇಂದು ಗ್ರಾಮೀಣ ಪ್ರದೇಶಗಳಲ್ಲಿನ ಕನ್ನಡಿಗರೂ ಇಂಗ್ಲೀಷ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವುದು ನಗರ ಪ್ರದೇಶಕ್ಕಿಂತಲೂ ದೊಡ್ಡ ಅಪಾಯಕಾರಿ ಎನಿಸುತ್ತದೆ. ಎಲ್ಲಿಯವರೆಗೂ ಮಾತೃಭಾಷೆಯಲ್ಲಿ ಶಿಕ್ಷಣ ಪೂರೈಸುವಲ್ಲಿ ಸರ್ಕಾರಗಳು ಎಡವುತ್ತವೆಯೋ ಅಲ್ಲಿಯವರಗೆ ಕನ್ನಡಕ್ಕೆ ಒದಗಿದ ಸಂದಿಗ್ಧತೆ ದೂರಾಗಲಾರದು. ಅಲ್ಲದೇ, ಕನ್ನಡದ ಉಚ್ಛ ಸಾಂಸ್ಕೃತಿಕ ಸಿರಿವಂತಿಕೆ ಕಾಪಿಟ್ಟಿಕೊಳ್ಳಲು ತೆವಳು ನಡಿಗೆಯೇ ಗತಿ ಎಂಬಂತಾಗುತ್ತದೆ. ಕನ್ನಡ ರಾಜ್ಯೋತ್ಸವ ನಾಡಿನ ಬಾವುಟದ ಅಭಿಮಾನ, ಆಚರಣೆಗಷ್ಟೇ ಸೀಮೀತ ಆಗದೇ, ಕನ್ನಡಿಗರ ಬದುಕು ಕಟ್ಟಿಕೊಡುವ, ಬದುಕಿಗೆ ನಿಶ್ಚಿತತೆಯನ್ನು ಒದಗಿಸುವ, ಅತ್ಮಸ್ಥೈರ‍್ಯ ಮೂಡಿಸುವ, ಕನ್ನಡವನ್ನೇ ಹಂಬಲಿಸುವ, ಕನ್ನಡವನ್ನೇ ನಿತ್ಯ ಪಠಿಸುವಂತೆ ಮಾಡಿದಾಗ ಕನ್ನಡ ರಾಜ್ಯೋತ್ಸವಕ್ಕೆ ನಿಜವಾದ ಅರ್ಥ ಬಂದೀತು!.
ಮುಖ್ಯವಾಗಿ ಕನ್ನಡದ ಪ್ರಾಚೀನ ಸ್ಮಾರಕಗಳು, ಶಾಸನಗಳು, ತಾಡೋಲೆಗಳು, ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಅವುಗಳ ಅಧ್ಯಯನ, ವ್ಯಾಪಕ ಪ್ರಚಾರ, ವಿದ್ಯಾರ್ಥಿಗಳಲ್ಲಿ ಇಂತಹ ರಾಷ್ಟ್ರೀಯ ಸಂಪತ್ತಿನ ಬಗೆಗೆ ಅಭಿಮಾನ ಮೂಡಿಸುವಂತಹ ಕರ‍್ಯಗಳತ್ತ ಸರ್ಕಾರಗಳು ಕ್ರಮವಹಿಸುವ ಜರೂರಿ ಅಂತು ಇದೆ. ಇವೆಲ್ಲವೂ ಪ್ರಾಚೀನ ಕನ್ನಡದ ಸಂಪತ್ತು ಎಂಬ ಅರಿವು ಪ್ರತಿ ಕನ್ನಡಿಗನಲ್ಲಿ ಬೆಳೆಯಬೇಕಿದೆ. ಯುವಕ-ಯುವತಿಯರಿಗೆ ಇಂದಿನ ಕನ್ನಡ ಶಿಕ್ಷಣ ಬದುಕಿನ ಭದ್ರತೆಗೆ ಭರವಸೆ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಹಲವಾರು ಉಪಕ್ರಮಗಳನ್ನು ಕೈಗೊಂಡದ್ದೇ ಆದರೆ ಕನ್ನಡಕ್ಕೆ ಯಾವ ಬಾಧೆಯೂ ಬಾರದು. ಅದು ಎಂದೆಂದಿಗೂ ನಿತ್ಯ ನೂತನ. ಪ್ರತಿ ಕನ್ನಡಿಗನಲ್ಲಿಯೂ ಕನ್ನಡತನವೇ ಉಸಿರಾಗಬೇಕು. ಅಂದಾಗಲೇ ಕನ್ನಡ ಹಸಿರಾಗಿರುತ್ತದೆ. ಕನ್ನಡಿಗರ ಒಂದೂಗೂಡಿಸಿ ಕನ್ನಡ ಕಟ್ಟಿ ಬೆಳೆಸಿದ ಕನ್ನಡದ ಕಟ್ಟಾಳುಗಳ ಮಹತ್ಕರ‍್ಯ ಕೇವಲ ಸ್ಮರಣೆಗೆ ಮೀಸಲಾಗದೇ ಹಿಂದಿಗಿಂತಲೂ ಕನ್ನಡತನವನ್ನು ಮೈಕೊಡವಿ ಎದ್ದು ನಿಲ್ಲಿಸಿದಾಗ ಏಕೀಕರಣದ ಬಂಟರಿಗೆ ನಿಜಗೌರವ ದಕ್ಕಿದಂತಾಗುತ್ತದೆ. ಕರ್ನಾಟಕ ರಾಜ್ಯೋತ್ಸವ ಹಬ್ಬದ ಈ ಸುವರ್ಣ ಸಂಭ್ರಮಕ್ಕೆ ನಿಜ ಅರ್ಥ ಕಲ್ಪಿಸಿದಂತಾಗುತ್ತದಲ್ಲವೇ!.