30 ವರ್ಷಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಕೊಲ್ಹಾರದಲ್ಲಿ ಬೃಹತ್ ಹೋರಾಟ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಮನೆ, ಮಠ ಹಾಗೂ ಭೂಮಿ ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ ಮೂರು ದಶಕಗಳು ಕಳೆದರೂ ಹಕ್ಕುಪತ್ರ, ಉತಾರಿ ನೀಡದಿರುವುದು ಖಂಡಿಸಿ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಪಟ್ಟಣದಲ್ಲಿ ಬೃಹತ್ ಹೋರಾಟ ನಡೆಯಿತು.
ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹಾಗೂ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ರೈತರು ಪಾಲ್ಗೊಂಡರು.
ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ರೈತರು ಮೆರವಣಿಗೆ ನಡೆಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, 1996ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಇಂದಿಗೂ ಹಕ್ಕುಪತ್ರ, ಉತಾರಿ ನೀಡಿಲ್ಲ. ಕೂಡಲೇ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವುದು ಸೇರಿದಂತೆ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಈ ಭಾಗದ ಹಿರಿಯರು ತಮ್ಮ ಬೆಲೆಬಾಳುವ ಭೂಮಿಯನ್ನು ಅತಿ ಕಡಿಮೆ ಪರಿಹಾರಕ್ಕೆ ಬಿಟ್ಟುಕೊಟ್ಟಿದ್ದರು. ಮುಂದಿನ ಪೀಳಿಗೆಗೆ ಸಮೃದ್ಧ ನೀರು ದೊರೆಯಲಿದೆ, ಈ ಭಾಗ ಸಂಪೂರ್ಣ ನೀರಾವರಿಯಾಗಿ ರೈತರ ಬದುಕು ಹಸನಾಗಲಿದೆ ಎಂಬ ಮಹತ್ವದ ಕನಸಿನಿಂದ ಭೂಮಿ ನೀಡಿದ್ದಾರೆ. ಆದರೆ ಯೋಜನೆ ಆರಂಭವಾಗಿ ದಶಕಗಳು ಕಳೆದರೂ ಇನ್ನೂ ಸಂಪೂರ್ಣವಾಗಿ ಪೂರ್ಣಗೊಳ್ಳದಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಸ್ಟೇಟ್ ಬ್ಯಾಂಕ್ ಹಿಂದುಗಡೆ ಕಳೆದ 25 ವರ್ಷಗಳಿಂದ ತಾತ್ಕಾಲಿಕವಾಗಿ ವಾಸವಾಗಿರುವ ಸಂತ್ರಸ್ತರಿಗೆ ಯಾವುದೇ ನಿವೇಶನಗಳಿಲ್ಲ. ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಕೂಡಲೇ ಮನವಿ ಸಲ್ಲಿಸಲಾಗುವುದು. ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ನಿವೇಶನಗಳು ಮಂಜೂರು ಆಗುವವರೆಗೂ ನಿರಾಶ್ರಿತರನ್ನ ಯಾವುದೇ ತೊಂದರೆ ಮಾಡಬಾರದು ಅಲ್ಲಿಯವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ವೀರೇಶ ಹಟ್ಟಿಯವರಿಗೆ ತಿಳಿಸಿದರು.
ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ರೈತರ ಬದುಕು ಮೊದಲೇ ಸಂಕಷ್ಟದಿಂದ ಕೂಡಿದೆ. ಅವರ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಬಾರದು. ರೈತರ ನ್ಯಾಯಯುತ ಬೇಡಿಕೆಗಳನ್ನು ತಕ್ಷಣ ಈಡೇರಿಸಿ, ಮುಳುಗಡೆ ಸಂತ್ರಸ್ತರ ದಶಕಗಳ ನೋವಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹಾಗೂ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿದರು.
ಯುಕೆಪಿ ವಿಶೇಷ ಜಿಲ್ಲಾಧಿಕಾರಿ, ವಿಜಯಪುರ ಅಪರ ಜಿಲ್ಲಾಧಿಕಾರಿ, ಹೆಸ್ಕಾಂ ಅಧಿಕಾರಿಗಳು, ಸ್ಥಳೀಯ ತಾಲೂಕು ದಂಡಾಧಿಕಾರಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಬಾಕಿ ಉಳಿದಿರುವ ಮುಳುಗಡೆ ಸಂತ್ರಸ್ತರ ಬೇಡಿಕೆಗಳನ್ನು ನಾಲ್ಕು ತಿಂಗಳ ಕಾಲಾವಧಿಯಲ್ಲಿ ಬಗೆಹರಿಸುವುದಾಗಿ ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅಪ್ಪುಗೌಡ ಪಾಟೀಲ ಮನಗೂಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಮಲ್ಲಪ್ಪ ಅಂಗಡಿ, ಪ್ರೇಮ್ ಚೌಗಲಾ, ಪ್ರಕಾಶ ಉಮ್ರಾಣಿ, ಶಿವಾನಂದ, ಸಿದ್ದು ಬಾಲಗೊಂಡ, ವಿಜಯಮಹಾಂತೇಶ ಗಿಡ್ಡಪ್ಪಗೋಳ, ಸಿ.ಎಸ್. ಗಿಡ್ಡಪ್ಪಗೋಳ, ಈರಣ್ಣಗೌಡ ಕೋಮಾರ, ಸಿ.ಎಂ. ಗಣಕುಮಾರ, ಪೀರಮಮ್ಮದ್ ಗಿರಗಾವಿ, ಇಸ್ಮಾಯಿಲ್ ತಸೀಲ್ದಾರ್, ಈರಪ್ಪ ಕೋಲಕಾರ, ಸಂಗೂ ಹುಲ್ಯಾಳ, ಚನ್ನಪ್ಪ ಅಂತರಗೊಂಡ, ರಾಮನಗೌಡ ಪಾಟೀಲ, ಮಹಾದೇವ ಬನಸೋಡೆ, ಸಂಗಪ್ಪ ಟಕ್ಕೆ, ಅಂಬರೇಶ ಭೈರಗೊಂಡ, ವಸಂತ ಭೈರಮಾಡಿ, ಸಾತಲಿಂಗಯ್ಯ ಸಾಲಿಮಠ, ಮಾಳು ಪೂಜಾರಿ, ಲಕ್ಷ್ಮೀ ಬಿರಾದಾರ ಸೇರಿದಂತೆ ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾವಿರಾರು ರೈತರು ಇದ್ದರು.
ಪ್ರಮುಖ ಬೇಡಿಕೆಗಳು
1996ರಲ್ಲಿ ಆಲಮಟ್ಟಿ ಜಲಾಶಯಕ್ಕಾಗಿ ಮನೆ, ಮಠ ಹಾಗೂ ಭೂಮಿ ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು.
ವಿಜಯಪುರ ಜಿಲ್ಲೆಯ ಎಲ್ಲ ಕೆರೆಗಳನ್ನು ಮುಳವಾಡ ಏತ ನೀರಾವರಿ ಯೋಜನೆಯ ಮೂಲಕ ತುಂಬಿಸಬೇಕು. ಜನವರಿಯಿಂದ ಜುಲೈವರೆಗೆ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ 20 ಟಿಎಂಸಿ ನೀರನ್ನು ಕಾಯ್ದಿರಿಸಬೇಕು.
ರೈತರ ಜಮೀನುಗಳಿಗೆ ಬೆಳಿಗ್ಗೆ 7 ಗಂಟೆ ಮೂರು ಫೇಸ್ ಹಾಗೂ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಸಮರ್ಪಕವಾಗಿ ಪೂರೈಸಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು.

