ಉದಯರಶ್ಮಿ ದಿನಪತ್ರಿಕೆ
ಇಂಡಿ: ಸೌಹಾರ್ದ ಸಹಕಾರಿ ಸಂಘಗಳು ಬಡವರ, ದೀನ, ದುರ್ಬಲರ, ಆರ್ಥಿಕವಾಗಿ ಹಿಂದುಳಿದವರ ಪಾಲಿನ ಶ್ರದ್ಧಾ ಕೇಂದ್ರಗಳಾಗಿವೆ. ಗ್ರಾಹಕರು ಸಹಕಾರಿ ಸಂಘಗಳಿಂದ ಸಾಲ ಪಡೆದು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿ. ತಾವು ಸದೃಢರಾಗಿ ಸಂಘವನ್ನು ಸದೃಢರನ್ನಾಗಿ ಮಾಡಬೇಕು ಎಂದು ತಾಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾದೇವಪ್ಪ ಏವೂರ ಹೇಳಿದರು.
ಮಂಗಳವಾರ ನಗರದ ಬಸ್ ನಿಲ್ದಾಣ ಎದುರಿನ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಹಕಾರಿ ಸಂಘಗಳು ಗ್ರಾಮೀಣ ಜನರ ಆರ್ಥಿಕ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಸದಸ್ಯರು ಸಂಘದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು. ನಗರದ ಅಕ್ಕಮಹಾದೇವಿ ಸೌಹಾರ್ದ ಸಹಕಾರ ಸಂಘ ಬಡ ಜನರ ಪಾಲಿನ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘ ಇನ್ನಷ್ಟು ಉತ್ತುಂಗಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಇಂಡಿಯ ಉಪತಹಸಿಲ್ದಾರ ಬಸವರಾಜ ರಾವೂರ ಮಾತನಾಡಿ, ಸಹಕಾರ ಕ್ಷೇತ್ರವು ಸಮಾಜದ ಅಭಿವೃದ್ಧಿಗೆ ಬಲವಾದ ಅಡಿಪಾಯವಾಗಿದ್ದು, ಸದಸ್ಯರ ವಿಶ್ವಾಸ ಮತ್ತು ಸಹಕಾರದಿಂದ ಸಂಘಗಳು ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಹಾಯಕ ಉಪನಿಬಂಧಕರ ಕಚೇರಿಯ ಅಧಿಕಾರಿ ವಿಜಯಕುಮಾರ್ ನಾಯಕ ಮಾತನಾಡಿ, ಸಹಕಾರಿ ಸಂಘಗಳು ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಮೂಲಕ ಸದಸ್ಯರಿಗೆ ಉತ್ತಮ ಸೇವೆ ಒದಗಿಸಬೇಕು. ಆರ್ಥಿಕ ಶಿಸ್ತು ಕಾಪಾಡಿಕೊಂಡರೆ ಸಂಘದ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಮಂಜುನಾಥ ಕಾಮಗೊಂಡ ಮಾತನಾಡಿ, ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಂಘವು ಸದಸ್ಯರ ಸಹಕಾರದಿಂದ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸದಸ್ಯರ ಹಿತಾಸಕ್ತಿಗೆ ಪೂರಕವಾದ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಉಮೇಶ ಬಳಬಟ್ಟಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಯಲಗೊಂಡ ಬೇವನೂರ ನಿರ್ದೇಶಕರಾದ ವಿಠಲ ಪಟ್ಟಣ, ಶಿವಾನಂದ ಮಠಪತಿ, ರಮೇಶ ಹತ್ತಿ, ಚಂದ್ರಾಮ ಮೇಡೆದಾರ, ಸಿದ್ದಾರ್ಥ ಅರಳಿ, ಶಶಿಧರ ತೋಳನೂರ ಉಪಸ್ಥಿತರಿದ್ದರು.
ಸಂಘದ ವ್ಯವಸ್ಥಾಪಕ ಅಶೋಕ್ ಬಳಬಟ್ಟಿ, ಶ್ರೀಕಾಂತ ಗಡಗಲಿ, ಮಲ್ಲು ಹಿಕ್ಕಲಗುಂತಿ, ಸಚಿನ್ ದೇವಣಗಾಂವ, ಸಚಿನ್ ಮೇಡೆದಾರ, ಮಹೇಶ ಬಳಬಟ್ಟಿ ಹಾಗೂ ಧೂಳಪ್ಪ ಜಿದ್ದಿಮನಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶೇರುದಾರರಾದ ವೀರೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಾವಿನಾಳಮಠ, ಪ್ರಕಾಶ ಲವಗಿ, ಅಣ್ಣಾರಾಯ ಆಳೂರ ಸೇರಿದಂತೆ ನೂರಾರು ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಸಭೆಯಲ್ಲಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳಿಗೆ ಅನುಮೋದನೆ ನೀಡಲಾಯಿತು. ಸಹಕಾರ ಕ್ಷೇತ್ರದ ಅಭಿವೃದ್ಧಿ ಮತ್ತು ಸಂಘದ ಭವಿಷ್ಯದ ಯೋಜನೆಗಳ ಕುರಿತು ಚರ್ಚೆ ನಡೆಯಿತು.
