ತಾಳಿಕೋಟೆಯಲ್ಲಿ ಯತ್ನಾಳ ರೋಡ ಶೋದಲ್ಲಿ ಜೆಸಿಬಿಗಳ ಮೆರವಣಿಗೆ | ಬೈಕ್ ರ‍್ಯಾಲಿ ಮೂಲಕ ಅದ್ದೂರಿ ಸ್ವಾಗತ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಹಿಂದೂ ಸಮಾಜ ಒಗ್ಗಟ್ಟಾಗಿ ತನ್ನ ಶಕ್ತಿ ಪ್ರದರ್ಶಿಸುವ ಅಗತ್ಯವಿದೆ. ಸಮಾಜದಲ್ಲಿ ಜಾತಿ-ಜಾತಿಗಳಾಗಿ ವಿಭಜನೆಯಾದರೆ ದೇಶದ ಏಕತೆಗೆ ಧಕ್ಕೆಯಾಗುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರು ಹೇಳಿದರು.
ತಾಳಿಕೋಟೆಯಲ್ಲಿ ಭಗತ್ ಸಿಂಗ್ ಯುವಕ ಮಂಡಳಿಯ ಗಣೇಶೋತ್ಸವದ ದಶಮಾನೋತ್ಸವ ಅಂಗವಾಗಿ ಸೋಮವಾರರಂದು ಆಯೋಜಿಸಲಾದ ಹಿಂದೂ ಏಕತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಜಾಗೃತಗೊಳಿಸುವ ಹಾಗೂ ಜನರನ್ನು ಒಗ್ಗೂಡಿಸುವ ವೇದಿಕೆಗಳಾಗಬೇಕು ಎಂದರು.
ಕೆಲವು ಕಡೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿಧಿಸಲಾಗುವ ನಿರ್ಬಂಧಗಳ ಕುರಿತು ಮಾತನಾಡಿದ ಅವರು, ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಮತ್ತು ಸಮಾನ ಕಾನೂನು ಅನ್ವಯವಾಗಬೇಕು. ಯಾವುದೇ ಸಮುದಾಯದ ಧಾರ್ಮಿಕ ಆಚರಣೆಗೆ ಅನಗತ್ಯ ನಿರ್ಬಂಧ ಇರಬಾರದು ಎಂದು ಹೇಳಿದರು.
ಭಗತ್ ಸಿಂಗ್ ಯುವಕ ಮಂಡಳಿ ಹತ್ತು ವರ್ಷಗಳ ನಂತರ ಹಿಂದೂ ಏಕತಾ ಸಮಾವೇಶದಂತಹ ದೊಡ್ಡ ಕಾರ್ಯಕ್ರಮದ ಮೂಲಕ ಯುವಕರನ್ನು ಒಗ್ಗೂಡಿಸುತ್ತಿರುವುದು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿದೆ. ನಾವು ಒಗ್ಗಟ್ಟಾಗದೆ ಜಾತಿ-ಜಾತಿಗಳಾಗಿ ಒಡೆದುಹೋದರೆ ದೇಶದ ಏಕತೆ ದುರ್ಬಲವಾಗುತ್ತದೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಬೆಳವಣಿಗೆಗಳ ಕುರಿತು ಮಾತನಾಡಿದ ಯತ್ನಾಳ್, ಹಿಂದೂ ಸಮಾಜವು ತನ್ನ ಸಂಸ್ಕೃತಿ, ಪರಂಪರೆ ಹಾಗೂ ಹಕ್ಕುಗಳ ಬಗ್ಗೆ ಜಾಗೃತವಾಗಿರಬೇಕು ಎಂದರು.
ಕಾರ್ಯಕ್ರಮದ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ವಹಿಸಿದ್ದರು. ವೇದಿಕೆಯ ಮೇಲೆ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಸನಗೌಡ ಯಡಿಯಾಪೂರ, ಮಲ್ಲಿಕಾರ್ಜುನ ಹಿಪ್ಪರಗಿ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಎರಡು ಹುಲಿಗಳನ್ನು ಬಿಟ್ಟಿದ್ದೇನೆ!
ಇತ್ತೀಚೆಗೆ ಮುದ್ದೇಬಿಹಾಳದಲ್ಲಿ ಸ್ವಯಂ ಘೋಷಿತ ರೈತ ನಾಯಕ ನಾನು ರೈತರಿಗಾಗಿ ಪ್ರಾಣವನ್ನೇ ಕೊಡುತ್ತೇನೆ, ರಕ್ತವನ್ನೇ ಕೊಡುತ್ತೇನೆಂದು ಹೇಳುತ್ತಿದ್ದಾನೆ. ಇವನೇನು ಹನುಮಂತನಾ? ಎದೆ ಬಗೆದು ತೋರಿಸಲಿಕ್ಕೆ, ಎಂದು ಹೆಸರು ಹೇಳದೆ ನಡಹಳ್ಳಿ ವಿರುದ್ದ ವ್ಯಂಗ್ಯದೊಂದಿಗೆ ಪ್ರಶ್ನಿಸಿದ ಯತ್ನಾಳ, ಇಂತವರ ರಾಜಕೀಯ ಅಂತ್ಯ ಬಂದಿದ್ದಾಗಿದೆ. ಅದಕ್ಕಾಗಿ ಆರ್.ಎಸ್.ಪಾಟೀಲ(ಕೂಚಬಾಳ), ಪ್ರಭು ದೇಸಾಯಿ ಎರಡು ಹುಲಿಗಳನ್ನು ಕ್ಷೇತ್ರದಲ್ಲಿ ಬಿಟ್ಟಿದ್ದೇನೆ. ಇವರ ಜೊತೆ ಎಲ್ಲರೂ ನಿಲ್ಲಿ. ಜನರಿಗಾಗಿ ನಿಜವಾಗಿ ಕೆಲಸ ಮಾಡುವ ಮೂಲಕ ತಮ್ಮ ಬದ್ಧತೆಯನ್ನು ತೋರಿಸುವ ಕಾರ್ಯ ಮುಂದೆ ಆಗಲಿದೆ ಎಂದು ಬಸನಗೌಡ ಪಾಟೀಲ (ಯತ್ನಾಳ) ಗುಡುಗಿದರು.

