ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಜನಪದ ಸಾಹಿತ್ಯವು ಹಲವು ತಲೆಮಾರುಗಳಿಂದ ಜನಪದ ಆಡುಭಾಷೆಯ ಮೂಲಕ ಬೆಳೆದು ಬಂದ ಅಮೂಲ್ಯ ಪರಂಪರೆಯಾಗಿದೆ. ಇಂತಹ ಜನಪದ ಸಾಹಿತ್ಯದ ಭಾಗವಾಗಿರುವ ಭಜನಾ ಪದಗಳ ಹಾಡುಗಾರಿಕೆ ಹಾಗೂ ಪರಂಪರೆಯನ್ನು ಕೊಲ್ಹಾರದ ಯುವಜನತೆ ಮತ್ತು ದ್ಯಾಮವ್ವ ದೇವಿ ದೇವಸ್ಥಾನ ಸಮಿತಿಯವರು ಉಳಿಸಿಕೊಂಡು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಹಾತಪಸ್ವಿ ಮನಗೂಳಿಯ ಮಲ್ಲನಗೌಡ ಪಾಟೀಲ ಹೇಳಿದರು.
ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನ ಸಮಿತಿ ಹಾಗೂ ಸಮಸ್ತ ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ 54ನೇ ವರ್ಷದ ಹರಭಜನೆ ಮುಕ್ತಾಯ ಸಮಾರಂಭ ಹಾಗೂ 19ನೇ ವರ್ಷದ ರಾಜ್ಯಮಟ್ಟದ ಭಜನಾ ತಂಡಗಳ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಸುಕಿನ ಜಾವ ಎದ್ದು ನಿತ್ಯಕರ್ಮಗಳನ್ನು ಮುಗಿಸಿದ ಬಳಿಕ ಪ್ರಾತಃಸ್ಮರಣೀಯ ಭಜನಾ ಪದಗಳನ್ನು ಹಾಡುವುದು ಹಾಗೂ ಆಲಿಸುವುದನ್ನು ಜೀವನದ ಭಾಗವನ್ನಾಗಿ ಮಾಡಿಕೊಂಡರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಂಗೀತ ಮತ್ತು ಭಜನೆಯಿಂದ ದೊರೆಯುವ ಆನಂದ ಹಾಗೂ ಮಾನಸಿಕ ನೆಮ್ಮದಿ ವಿಶೇಷವಾದುದು. ಯುವಕರು ದುಶ್ಚಟಗಳಿಗೆ ದಾಸರಾಗದೆ ಮನಸ್ಸಿಗೆ ಮುದ ನೀಡುವ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಆಧುನಿಕ ವೈಜ್ಞಾನಿಕ ಯುಗದಲ್ಲಿಯೂ ನಮ್ಮ ಹಿರಿಯರು ರೂಢಿಸಿಕೊಂಡು ಬಂದಿರುವ ಭಜನಾ ಪರಂಪರೆ ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ. ಮನುಷ್ಯನಿಗೆ ಉತ್ತಮ ಚಿಂತನೆ, ಮಾನಸಿಕ ನೆಮ್ಮದಿ ಹಾಗೂ ಸಾತ್ವಿಕ ಬದುಕಿನ ದಾರಿ ತೋರಿಸುವ ಶ್ರೇಷ್ಠ ಸಾಧನಗಳಲ್ಲಿ ಭಜನೆಯೂ ಒಂದಾಗಿದೆ ಎಂದರು.
ದಮಡಿ, ಹಾರ್ಮೋನಿಯಂ, ತಾಳ, ತಬಲಾ ಸೇರಿದಂತೆ ವಿವಿಧ ವಾದ್ಯಗಳ ಬಳಕೆಯೊಂದಿಗೆ ಭಜನೆ ಮಾಡುವುದರಿಂದ ದೇಹ ಹಾಗೂ ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಯುವಕರು ಭಜನೆಯ ಕಲೆ ಮತ್ತು ಶಾಸ್ತ್ರವನ್ನು ಆಸಕ್ತಿಯಿಂದ ಕಲಿತು, ದುಶ್ಚಟಗಳಿಂದ ದೂರವಿದ್ದು ಸಾತ್ವಿಕ ಜೀವನ ನಡೆಸಬೇಕು. ಉತ್ತಮ ಸಾಧನೆ ಮಾಡುವ ಭಜನಾ ತಂಡಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಹೇಳಿದರು.
ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿದರು.
ಕೈಲಾಸನಾಥ ಶ್ರೀಗಳು ಸಾನಿಧ್ಯ ವಹಿಸಿದ್ದರು. ಎಸ್.ಕೆ. ಬೆಳ್ಳುಬ್ಬಿ ಅಧ್ಯಕ್ಷತೆ ವಹಿಸಿದ್ದರು. ಶಂಕ್ರೆಪ್ಪ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ, ಟಿ.ಟಿ. ಹಗೇದಾಳ, ಸದಸ್ಯರಾದ ಬಾಬು ಭಜಂತ್ರಿ, ಅಪ್ಪಸಿ ಮಟ್ಯಾಳ, ಶ್ರೀಶೈಲ ಅಥಣಿ, ಶಶಿಧರ ದೇಸಾಯಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲಪ್ಪ ಸಿ. ಸೊನ್ನದ, ಪುಂಡಲೀಕ ಕಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಬಾಟಿ ಸ್ವಾಗತಿಸಿ, ನಿರೂಪಿಸಿದರು.

