ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಧಾರ್ಮಿಕ ಪರಂಪರೆ ಮತ್ತು ಆಧ್ಯಾತ್ಮಿಕತೆಯಲ್ಲಿ ಭಾರತ ದೇಶ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ ಎಂದು ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಹೇಳಿದ್ದಾರೆ.
ಸೋಮವಾರ ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದ ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಹಾ ಪುರಾಣ ಮತ್ತು ಭಜನಾ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಕ್ತಿ, ಜ್ಞಾನ ಮತ್ತು ಸಂಸ್ಕೃತಿಯ ಸಂಗಮವಾದ ಇಂಥ ಕಾರ್ಯಕ್ರಮಗಳು ನಮ್ಮೊಳಗಿನ ಮಾನವೀಯತೆಯನ್ನು ಜಾಗೃತಗೊಳಿಸಿ, ಧರ್ಮದ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡುತ್ತವೆ. ಪುರಾಣ, ಪ್ರವಚನಗಳಿಂದ ನಮಗೆ ಹಿಂದಿನ ಇತಿಹಾಸ ಗೊತ್ತಾಗುತ್ತದೆ. ಇದರಲ್ಲಿ ಒಳ್ಳೆಯದು ಹಾಗೂ ಕೆಟ್ಟದು ಎರಡೂ ಇರುತ್ತದೆ. ಇಂಥ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗಿಯಾಗಿ ಅನೇಕತೆಯಲ್ಲಿ ಏಕತೆ ಸಾಧಿಸಬೇಕು. ಶರಣರು ಅನುಸರಿಸಿದ ಅನುಭವ ಮಂಟಪದ ಪರಿಕಲ್ಪನೆ ಪ್ರತಿ ಊರಿನಲ್ಲೂ ಕೈಗೂಡಬೇಕು. ಪ್ರತಿ ಗ್ರಾಮವೂ ಒಂದೊಂದು ಅನುಭವ ಮಂಟಪದಂತೆ ಎಲ್ಲ ಜಾತಿ, ವರ್ಗ, ಜನಾಂಗಗಳನ್ನು ಒಳಗೊಂಡಿರುತ್ತವೆ. ಎಲ್ಲ ಧರ್ಮಗಳವರು ಒಟ್ಟಾಗಿ ಬದುಕಬೇಕು. ಗ್ರಾಮಗಳಲ್ಲಿ ಹಿಂದೂ ಮುಸ್ಲಿಮರಲ್ಲಿ ಏಕತೆ ಇದ್ದರೆ ಶಾಂತಿ ನೆಲೆಸುತ್ತದೆ ಎಂದು ಅವರು ಹೇಳಿದರು.
ಗಣಲಿಂಗ ದೇವರು ಹಿರೇಮಠ, ಆಸಂಗಿ ಹಿರೇಮಠದ ಶ್ರೀಗಳು, ಚಂದ್ರಶೇಖರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ
ನ್ಯಾಯವಾದಿ ಶ್ರೀನಿವಾಸ ಕೊಂಡಗೂಳಿ, ಬಸವರಾಜ ದೇಸಾಯಿ, ರಮೇಶ ಬಶೆಟ್ಟಿ, ಶಿವಾನಂದ ನ್ಯಾಮಗೌಡ, ಬಸವರಾಜ ಜೈನಾಪುರ ಮುಂತಾದವರು ಉಪಸ್ಥಿತರಿದ್ದರು.

