ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಕುಲಸಚಿವ ಸೋಮಲಿಂಗ ಗೆಣ್ಣೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪುಸ್ತಕಗಳು ನಮ್ಮ ದಿನನಿತ್ಯದ ಗೆಳೆಯರಾಗಬೇಕು, ಪುಸ್ತಕಪ್ರೀತಿಯಿಂದ ಮನುಷ್ಯರೂಪದ ಜೀವಿಯೊಬ್ಬ ನಿಜವಾದ ಮನುಷ್ಯನಾಗಿ ರೂಪುಗೊಳ್ಳುವುದು ಸಾಧ್ಯವಾಗುತ್ತದೆಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ಸೋಮಲಿಂಗ ಗೆಣ್ಣೂರ ಹೇಳಿದರು.
ಭಾನುವಾರ ನಗರದ ನವರಸಪುರದಲ್ಲಿರುವ ತಿಕೋಟಾದ ಡಾ.ಪ್ರಕಾಶ ಪರಣಾಕಾರ ಅವರ ಮನೆಯಲ್ಲಿ ನಡೆದ “ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ”ದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಂದು ಪುಸ್ತಕದ ಒಳಗೂ ನಮ್ಮೊಂದಿಗೆ ಸಂವಾದಕ್ಕೆ ಹಾತೊರೆಯುವ ಒಂದು ವ್ಯಕ್ತಿತ್ವ ಮತ್ತು ಮನಸ್ಸಿದೆ ದಿಕ್ಕು ತಪ್ಪಿಸುವ, ಮೌಢ್ಯಬಿತ್ತುವ ಕಂದಾಚಾರಕ್ಕೆ ದೂಡುವ ಪುಸ್ತಕಗಳ ತಿರಸ್ಕರಿಸಿ, ವೈಚಾರಿಕ ಹಾಗೂ ವೈಜ್ಞಾನಿಕತೆ ಬಿತ್ತುವ ಪುಸ್ತಕಗಳ ಓದಬೇಕು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಒಂದು ಪುಸ್ತಕವನ್ನೋದುವುದೆಂದರೆ ಬಸವಣ್ಣನ ಸಮಸಮಾಜವನು ಮುನ್ನಡೆಸುವುದು ಎಂದರ್ಥ. ಅದೊಂದು ಹೊಸ ಅನುಭವ ಹಾಗೂ ಪ್ರಪಂಚದಲ್ಲಿ ಸಹೃದಯರು ಕೈಗೊಳ್ಳುವ ಪರ್ಯಟನವೋ ಅಥವಾ ರಸಯಾತ್ರೆಯೋ ಆಗಿರುತ್ತದೆ ಎಂದರು.
ಅಧ್ಯಕ್ಷ ಸ್ಥಾನ ವಹಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಪ್ರೊ; ಬಸವರಾಜ ಜಾಲವಾದಿ ಮಾತನಾಡಿದರು.
ಕಕಮರಿ ಗುರುದೇವಾಶ್ರಮದ ಆತ್ಮಾರಾಮ ಸ್ವಾಮಿಗಳು ಆಶೀರ್ವಚನ ನೀಡಿದರು.
ವೇದಿಕೆಯ ಮೇಲೆ ಯರಡೋಣದ ಕುಮಾರೇಶ್ವರ ಸ್ವಾಮಿಗಳು ಪ್ರಗತಿಪರ ರೈತರಾದ ಮಲ್ಲಿಕಾರ್ಜುನ ಹಂಜಗಿ, ಶ್ರೀಧರ್ ಮುರಾಳೆ, ಕಬ್ಬೂರಿನ ಬಾಬೂರಾವ್ ಮಹಾರಾಜ್, ವಚನ ಪಠಣ ಮಾಡಿದ ವೀರೇಶ ಹಿರೇಮಠ ಹಾಜರಿದ್ದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಬಸವರಾಜ ಸಾಲವಾಡಗಿ ನಿರ್ವಹಿಸಿದರು. ಸಹಪ್ರಾಧ್ಯಾಪಕ ಬಸವರಾಜ ಬೆಳಗಲಿ ವಚನ ಗಾಯನ ಮೂಲಕ ಸ್ವಾಗತಿಸಿದರು. ಸಿದ್ಧಾರ್ಥ ಪರಣಾಕರ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪರಣಾಕರ ದಂಪತಿಗಳನ್ನು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಲಾಯಿತು.

