ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಇಲಾಖೆಗೆ ನೀಡುವ ಅತ್ಯುತ್ತಮ ಗೌರವವಾಗಿದೆ. ಶಿಕ್ಷಕರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವ ಸುಲ್ತಾನ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ನಗರವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಹೊಸೂರ ಹೇಳಿದರು.
ನಗರದ ಸುಲ್ತಾನ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ರವಿವಾರ ಶಿಕ್ಷಕರ ದಿನಾಚರಣೆ ನಿಮಿತ್ಯ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸುಲ್ತಾನ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಆಯೋಜಿಸಿದ್ದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಗಳು ಇನ್ನಷ್ಟು ಶಿಕ್ಷಕರಿಗೆ ಪ್ರೇರಣೆಯಾಗಲಿವೆ. ಸಮಾಜಮುಖಿ ಕಾರ್ಯಗಳ ಮೂಲಕ ಸಂಸ್ಥೆ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು.
ನೌಕರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿ, ಕೇವಲ ವ್ಯಾಪಾರ ಮತ್ತು ಲಾಭ ಗಳಿಕೆಗೆ ಸೀಮಿತವಾಗಿರುವ ಇಂದಿನ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಶಿಕ್ಷಕರ ಸೇವೆಯನ್ನು ಸಮಾಜದ ಮುಂದೆ ಗುರುತಿಸುವ ಮೂಲಕ ಸಂಸ್ಥೆ ಮಾದರಿ ಕಾರ್ಯ ಮಾಡಿದೆ ಎಂದರು.
ಜಿಲ್ಲಾ ನೌಕರರ ಸಂಘದ ಖಜಾಂಚಿ ಜುಬೇರ ಕೆರೂರ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಸುಲ್ತಾನ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆ ನೀಡುತ್ತಿರುವ ಪ್ರಶಸ್ತಿ ಗೌರವಯುತವಾಗಿದೆ. ಶಿಕ್ಷಕರ ಸೇವೆಗೆ ದೊರೆಯುವ ಇಂತಹ ಗೌರವಗಳು ಮತ್ತಷ್ಟು ಉತ್ತಮ ಕಾರ್ಯ ಮಾಡಲು ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಜಿಲ್ಲಾ ಶಿಕ್ಷಕ ಸಂಘದ ಸಂಘಟನಾ ಕಾರ್ಯದರ್ಶಿ ಕಬೂಲ ಕೊಕಟನೂರ, ಶಿಕ್ಷಕ ಮಂಜುನಾಥ ಅರೇಶಂಕರ ಸೇರಿದಂತೆ ಪ್ರಶಸ್ತಿ ಪಡೆದ ಎಲ್ಲ ಶಿಕ್ಷಕರು ಮಾತನಾಡಿ, ಶಿಕ್ಷಕರ ಸೇವೆಯನ್ನು ಗುರುತಿಸಿ ಗೌರವಿಸಿರುವುದಕ್ಕೆ ಸುಲ್ತಾನ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

