ಭಾವರಶ್ಮಿ
- ಡಾ. ರಾಜಶೇಖರ ನಾಗೂರ ✍
ಒಂದೂರಲ್ಲಿ ಒಬ್ಬ ಬಾಲಕನಿದ್ದ. ಅವನಿಗೆ ಗೆಲುವಿನ ಹುಚ್ಚು. ಗೆಲ್ಲಬೇಕು ಯಶಸ್ಸು ಪಡೆಯಬೇಕು ಎಂಬ ಅತಿಯಾದ ಹಸಿವು. ಅವನಿಗೆ ಗೆಲ್ಲುವುದೆಂದರೆ ಎಲ್ಲವೂ ಆಗಿತ್ತು. ಯಶಸ್ಸು ಎನ್ನುವುದು ಗೆಲುವಿನಿಂದಲೆ ಅಳೆಯುವವನಾಗಿದ್ದ.
ಅವನು ಅದ್ಭುತವಾದಂತಹ ಓಟಗಾರನಾಗಿದ್ದ. ಅಲ್ಲಿ ನಡೆಯುವ ಓಟದ ಸ್ಪರ್ಧೆ ಅಥವಾ ಪಂದ್ಯಗಳಲ್ಲಿ ಗೆಲುವನ್ನು ಇನ್ನಾರಿಗೂ ಅವನು ಬಿಟ್ಟುಕೊಟ್ಟಿರಲಿಲ್ಲ. ತುಂಬಾ ಪ್ರಖ್ಯಾತನಾಗಿಬಿಟ್ಟ.
ಹೀಗೆ ಒಂದು ದಿನ ಆ ಊರಿನಲ್ಲಿ ಒಂದು ಪಂದ್ಯ ಏರ್ಪಾಡಾಯಿತು. ಅದರ ತಯಾರಿಯಲ್ಲಿ ಅವನಿದ್ದ. ಅತೀ ದೊಡ್ಡ ಜನ ಸಾಗರವೆ ಪಂದ್ಯ ನೋಡಲು ಅಲ್ಲಿ ಸೇರಿತ್ತು. ಅವನ ಪ್ರಖ್ಯಾತಿಯನ್ನು ಕೇಳಲ್ಪಟ್ಟ ಪಕ್ಕದ ಊರಿನ ವಯಸ್ಕ ಅನುಭವಿ ಮುದುಕನೊಬ್ಬ ಅವನ ಗೆಲುವನ್ನು ನೋಡಲು ಅಲ್ಲಿ ನಡೆಯುತ್ತಿರುವ ಓಟದ ಸ್ಪರ್ಧೆಗೆ ಆಗಮಿಸುತ್ತಾನೆ.
ಪಂದ್ಯ ಪ್ರಾರಂಭವಾಯ್ತು. ಅತೀ ಕಷ್ಟಕರವಾದ ಸ್ಪರ್ಧೆ ಅದಾಯಿತು. ಅದಾಗ್ಯೂ ಆ ಬಾಲಕ ಗೆಲುವು ಸಾಧಿಸಿದ. ನೆರೆದ ಜನಸ್ತೋಮ ಹರ್ಷ ಭರಿತರಾಗಿ ಚಪ್ಪಾಳೆಯ ಮಳೆಯನ್ನೇ ಹರಿಸುತ್ತ, ಆ ಬಾಲಕನತ್ತ ಕೈ ಬೀಸುತ್ತಾ ಇವನ ಗೆಲುವಿಗೆ ಸಾಕ್ಷಿಯಾದರು.
ಆದರೆ ಆ ವಯಸ್ಕ ಮುದುಕ ಮಾತ್ರ ಯಾವ ಪ್ರತಿಕ್ರಿಯೆಯನ್ನು ಕೊಡದೆ ಶಾಂತವಾಗಿ ಕುಳಿತ. ಬಾಲಕ ಮಾತ್ರ ತನ್ನ ಗೆಲುವಿನ ಬಗ್ಗೆ ಒಳಗೊಳಗೆ ಹೆಮ್ಮೆ ಪಡುತ್ತಿದ್ದ.
ಮತ್ತೆ ಎರಡನೆ ಪಂದ್ಯ ಪ್ರಾರಂಭವಾಯ್ತು. ಈ ಬಾರಿ ಸ್ಪರ್ಧೆ ಇನ್ನೂ ಕಠಿಣವಾಗಿತ್ತಾದರೂ ತನ್ನ ಗೆಲುವಿನ ಹಠದಿಂದ ಬಾಲಕ ಮತ್ತೆ ಗೆದ್ದು ಬಂದ. ನೆರೆದ ಜನಸಮೂಹ ಉನ್ಮಾದದಿಂದ ಇವನೆಡೆ ಕೈ ಬೀಸುತ್ತಾ ಶಿಳ್ಳೆ ಚಪ್ಪಾಳೆಗಳಿಂದ ಸಂಭ್ರಮಿಸಿದರು. ಆ ಮುದುಕ ಮಾತ್ರ ಮತ್ತದೇ ಶಾಂತತೆಯಿಂದ ಯಾವ ಹರ್ಷೋದ್ಗಾರವನ್ನು ಹೊರಹಾಕದೆ ಸುಮ್ಮನಿದ್ದ.
ಆ ಬಾಲಕ ಗೆಲುವಿನ ಉನ್ಮಾದದಲ್ಲಿ ” ಇನ್ನೊಂದು ಪಂದ್ಯ, ಇನ್ನೊಂದು ಪಂದ್ಯ…” ಎಂದು ಸವಾಲು ಎಸೆಯುತ್ತಿದ್ದ. ಆಗ ಆ ಮುದುಕ ಬಾಲಕನ ಹತ್ತಿರ ಬಂದು ಹೊಸ ಸವಾಲನ್ನು ಎಸೆದ. ಒಂದು ದುರ್ಬಲ ವಯಸ್ಸಾದ ಮುದುಕಿ ಮತ್ತು ಒಬ್ಬ ಕುರುಡ ಇಬ್ಬರ ಜೊತೆ ನಿನ್ನ ಪಂದ್ಯವಾಗಲಿ ಎಂದ.
“ಇದೇನು!! ಇದು ಒಂದು ಸ್ಪರ್ಧೆಯಾ? ಸ್ಪರ್ಧೆ ಹೇಗಾಗುತ್ತೆ!!” ಎಂದು ಆ ಬಾಲಕ ಉದ್ಗರಿಸಿದ. ಆಗ ಆ ಮುದುಕ ಹೇಳಿದ ನೀ ಮೊದಲು ಓಡು. ಅಮೇಲೆ ಮಾತಾಡೋಣ ಎಂದ. ಸ್ಪರ್ಧೆ ಪ್ರಾರಂಭವಾಯ್ತು. ಬಾಲಕ ಓಡಿ ತನ್ನ ಗೆಲುವಿನ ಗೆರೆಯನ್ನು ತಲುಪಿದ. ಗೆಲುವಿನಿಂದ ಎರಡು ಕೈ ಮೇಲೆತ್ತಿ ಜನರಿಗೆ ತೋರಿಸಿದ. ಆದರೆ ಜನ ಸಮೂಹ ಮೊದಲಿನ ರೀತಿ ಯಾವುದೇ ಹರ್ಷೋದ್ಗಾರ ತೊರಲಿಲ್ಲ. ಎಲ್ಲರೂ ಶಾಂತರಾದರು. ಅವನು ಅವಾಕ್ಕಾದ. ಪ್ರತಿಬಾರಿ ಗೆದ್ದಾಗಲೂ ನನ್ನ ಗೆಲುವಲ್ಲಿ ಹರ್ಷ ವ್ಯಕ್ತ ಪಡಿಸುವುದರ ಮೂಲಕ ಭಾಗಿಯಾಗುತ್ತಿದ್ದರು. ಆದರೆ ಇಂದು ಯಾಕಿಲ್ಲ ಎಂದು ಆ ವಯಸ್ಕ ಮುದುಕನಿಗೆ ಬಾಲಕ ಚಿಂತೆಯಿಂದ ಕೇಳಿದ.
ಆಗ ವಯಸ್ಕ” ಇನ್ನೊಮ್ಮೆ ಅವರೊಂದಿಗೆ ಪಂದ್ಯವಾಡು. ನೆನಪಿಡು ಈ ಬಾರಿ ಆ ಇಬ್ಬರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಪಂದ್ಯವನ್ನು ಮುಗಿಸು. ನೆನಪಿರಲಿ ಒಟ್ಟಿಗೆ…” ಎಂದ. ಬಾಲಕ ಹೋದವನೇ ಕುರುಡನನ್ನು ಬಲಕ್ಕೆ, ದುರ್ಬಲ ಮುದುಕಿಯನ್ನು ಎಡಕ್ಕೆ ಕೈಯಿಂದ ಹಿಡಿದು ಕೊಂಡು ನಿಧಾನವಾಗಿ ನಡೆಯುತ್ತಾ ಗುರಿ ತಲುಪಿದ. ನೆರೆದ ಜನ ಹುಚ್ಚೆದ್ದು ಚಪ್ಪಾಳೆ ಶಿಳ್ಳೆ ಬಾರಿಸುತ್ತಾ ಹಿಂದೆಂದೂ ತೋರದ ರೀತಿ ಹರ್ಷ ವ್ಯಕ್ತಪಡಿಸಿದರು. ಮುದುಕ ನಸು ನಕ್ಕ.
ಬಾಲಕ ಆ ಮುದುಕನಿಗೆ ಕೇಳಿದ” ಈ ಜನ ತಮ್ಮ ಹರ್ಷವನ್ನು ನಮ್ಮ ಮೂವರಲ್ಲಿ ಯಾರಿಗೆ ವ್ಯಕ್ತ ಪಡಿಸಿದ್ದು? ” ಆಗ ಆ ಮುದುಕ ಬಾಲಕನ ಕಣ್ಣಲ್ಲಿ ನೋಡುತ್ತಾ ಹೆಗಲ ಮೇಲೆ ಕೈ ಇಟ್ಟು ಹೇಳಿದ” ಮಗು ಈ ಪಂದ್ಯದಲ್ಲಿ ಈ ಹಿಂದೆಂದಿನ ಪಂದ್ಯಗಳಿಗಿಂತ ಅದ್ಭುತವಾದ ಗೆಲುವನ್ನು ನೀನು ತೋರಿರುವೆ ಮತ್ತು ಈ ಪಂದ್ಯದಲ್ಲಿ ಜನರು ಯಾರೋ ಒಬ್ಬ ಗೆದ್ದನೆಂದು ಚಪ್ಪಾಳೆ ತಟ್ಟಿಲ್ಲ.
ನಿನ್ನ ಬದುಕನ್ನು ಒಮ್ಮೆ ನೋಡು. ಯಾರಿಗಾಗಿ ನೀನು ಓಡುತ್ತಿರುವೆ. ಯಾರಿಗಾಗಿ ಪಂದ್ಯವಾಡುತ್ತಿರುವೆ. ನೀನು ಓಡುವುದು ಗೆಲುವಿನ ಹಸಿವಿಗಾಗಿಯೆ? ನಿನ್ನ ಬದುಕಲ್ಲಿ ಕೇವಲ ಗೆಲ್ಲುವುದು ಮಾತ್ರ ಯಶಸ್ಸಿನ ಅಳತೆಗೋಲೇ? ಯಾರ ವಿರುದ್ಧವಾಗಿ ಓಡುತ್ತಿರುವೇ? ಮತ್ತು ಯಾವಾಗಲೂ ನೀನೇ ಗೆಲ್ಲುತ್ತಾ ಹೋದರೆ, ಜನರು ತಮ್ಮ ಹರ್ಷೋದ್ಗಾರವನ್ನು ಬೇಗನೆ ನಿಲ್ಲಿಸುವರು. ಜೀವನದ ಕೊನೆಗೆ, ಬದುಕಿನ ಸಿಂಹಾವಲೋಕನ ನೀನು ಮಾಡಿಕೊಂಡಾಗ ಉದ್ಭವಿಸುವ ಪ್ರಶ್ನೇ ಎಂದರೆ ಈ ಬದುಕಿನ ಪಂದ್ಯದಲ್ಲಿ ನಿನ್ನ ಜೊತೆ ಸ್ಪರ್ಧಿಸಿದ ಆದರೆ ನಿನ್ನ ಹಿಂದಿರುವ ಸ್ಪರ್ಧಿಗಳು ಯಾರಾಗಿದ್ದರು? ಒಂದು ವೇಳೆ ಅವರು ದುರ್ಬಲರು ವಯಸ್ಕರು ಆಗಿದ್ದರೆ ನೀನು ಅವರಿಗೆ ಜೀವನ ಪಂದ್ಯದ ಗುರಿ ತಲುಪಲು ಸಹಾಯ ಹಸ್ತ ಚಾಚಿರುವೆಯಾ? ನೀವೆಲ್ಲಾ ಒಟ್ಟಾಗಿ ಜೀವನದ ಪಂದ್ಯವನ್ನು ಮುಗಿಸಿದಿರಾ? ಏಕೆಂದರೆ ಒಟ್ಟಾರೆ ಜೊತೆಗೂಡಿ ಓಡಿದಾಗ ಅದು ನೀನು ಎಂದೆಂದಿಗೂ ಓಡಿರದ ಅತ್ಯದ್ಭುತವಾದ ಓಟವಾಗುತ್ತದೆ.
ಹೀಗಾಗಿ ಓಡು.. ಈ ಜೀವನದ ಓಟದ ಪಂದ್ಯವನ್ನು ಆದರೆ ಒಂದು ಮರೆಯಬೇಡ ಇಲ್ಲಿ ನೀನು ಓಡಿ ಜೀವನದ ಪಂದ್ಯ ಗೆಲ್ಲುವುದು ಮುಖ್ಯವಾಗಲ್ಲ. ಈ ಜೀವನದ ಪಂದ್ಯದಲ್ಲಿ ನೀನು ಹೇಗೆ ಓಡಿದೆ, ಯಾರನ್ನು ಜೊತೆಯಾಗಿಸಿಕೊಂಡು ಓಡಿದೆ ಎಂಬುದು ಮುಖ್ಯವಾಗುತ್ತದೆ. ಗೆಲುವು ಅಪ್ರಸ್ತುತವೆಂದು ಹೇಳಿ ಜೀವನದ ಬಗ್ಗೆ ಬಾಲಕನ ಕಣ್ಣು ತೆರೆಸಿ ಆ ಮುದುಕ ಮುಂದೆ ಸಾಗುತ್ತಾನೆ.
ನಾವುಗಳು ನಮ್ಮ ಜೊತೆ ಇರುವವರನ್ನ, ನಮಗಿಂತ ದುರ್ಬಲ ಎನಿಸಿದವರನ್ನ ಜೊತೆ ಕರೆದುಕೊಂಡು ಸಾಗೋಣ ಅಲ್ವಾ..