ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಐತಿಹಾಸಿಕ ಮಲ್ಲಯ್ಯನ ದೇವಸ್ಥಾನದ ಮುಂದೆ ಸರ್ವೇ ನಂ ೮೬೪/೨ರ ಜಾಗೆಯಲ್ಲಿನ ಶೌಚಾಲಯದ ನೀರು ಬರುತ್ತಿದ್ದು, ಪಟ್ಟಣ ಪಂಚಾಯಿತಿ ಈ ಕುರಿತು ಕ್ರಮ ಕೈಗೊಳ್ಳಲು ಆಗ್ರಹಿಸಿ ದೇವಸ್ಥಾನ ಸಮಿತಿ ಸದಸ್ಯರು ಮುಖ್ಯಾಧಿಕಾರಿ ಅಫ್ರೋಜ್ ಅಹ್ಮದ್ ಪಟೇಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪಂಚಾಯಿತಿ ಕಾರ್ಯಾಲಯಕ್ಕೆ ಬುಧವಾರ ಆಗಮಿಸಿದ ರಾವುತರಾಯ-ಮಲ್ಲಯ್ಯ ದೇವಸ್ಥಾನ ಸಮಿತಿ ಸದಸ್ಯರು ಶೌಚಾಲಯ ನೀರು ಹರಿಯುವ ಕುರಿತು ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ವಿನೋದಗೌಡ ಪಾಟೀಲ ಮಾತನಾಡಿ, ಸರ್ವೇ ನಂ೮೬೪/೨ ರಲ್ಲಿನ ವಿನಾಯಕ ಲಾಜ್‌ನ ಸ್ನಾನ ಮತ್ತು ಶೌಚಾಲಯದ ಮಲೀನ ನೀರು ಮಲ್ಲಯ್ಯನ ದೇವಸ್ಥಾನದ ಮುಂದೆ ಬರುತ್ತಿದ್ದು , ಇದರಿಂದ ಬರುವ ಭಕ್ತಾಧಿಗಳು ಮೂಗು ಮುಚ್ಚಿಕೊಂಡು ಬರುವಂತಾಗಿದೆ. ದೇವಾಲಯ ಪವಿತ್ರ ಯಾತ್ರಾ ಸ್ಥಳವಾಗಿರುವುದರಿಂದ ಶೌಚಾಲಯದ ಮಲಮೂತ್ರ ತ್ಯಾಜ್ಯ ಮತ್ತು ಸ್ನಾನದ ನೀರು ಜೊತೆಗೆ ಮದ್ಯದಂಗಡಿಯ ಸರಾಯಿ ಬಾಟಲುಗಳು ದೇವಾಲಯದ ಮುಂದೆ ಬರುತ್ತಿವೆ. ಆದ ಕಾರಣ ನಮ್ಮ ಸಮಿತಿಯ ಎಲ್ಲ ಸದಸ್ಯರು ಹಾಗೂ ದೇವಸ್ಥಾನದ ಸಕಲ ಸದ್ಭಕ್ತರು ಮನವಿ ಮೇರೆಗೆ ಕೂಡಲೇ ಪಂಚಾಯಿತಿಯವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ದೇವಸ್ಥಾನ ಸಮಿತಿ ಉಪಾಧ್ಯಕ್ಷ ಶ್ರೀಧರ ನಾಡಗೌಡ, ಯಮನಪ್ಪ ಸಣ್ಣಕ್ಕಿ, ಬಾಬು ಸೌದಿ, ಪ್ರಕಾಶ ಮಲ್ಲಾರಿ, ರಾಜು ಮೆಟಗಾರ, ಆನಂದ ವಗ್ಗರ ಇದ್ದರು.

