ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಚಡಚಣ ಕಾನಿಪ ಸಂಘ ಹಾಗೂ ರೈತ ಸಂಘದಿಂದ ಗೃಹ ಸಚಿವರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಜಯಪುರ ಜಿಲ್ಲೆಯಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯ ಕಾಳಸಂತೆ ಹಾಗೂ ಅಕ್ರಮ ದಂಧೆ ಕುರಿತು ವರದಿ ಪ್ರಕಟಿಸಿದ ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಜೀವ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಚಡಚಣ ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಕರ್ನಾಟಕ ಕಾನಿಪ ಸಂಘ (ಚಡಚಣ) ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೋಣಜಮಠ ಅವರು, ಅನ್ನಭಾಗ್ಯ ಯೋಜನೆಯ ಅಕ್ಕಿಯ ಅಕ್ರಮ ದಂಧೆ ಕುರಿತು ಪರಶುರಾಮ ಶಿವಶರಣ ಅವರು ಜವಾಬ್ದಾರಿಯುತವಾಗಿ ತನಿಖಾ ವರದಿ ಪ್ರಕಟಿಸಿದ್ದು ಇದರಿಂದ ಅಕ್ರಮದಲ್ಲಿ ಭಾಗಿಯಾದ ಕೆಲವರು ಪತ್ರಕರ್ತರ ಮನೆಗೆ ತೆರಳಿ ಜೀವ ಬೆದರಿಕೆ ಹಾಕಿದ್ದು ಅಕ್ಷಮ್ಯ ಅಪರಾಧವಾಗಿದ್ದು ಸಮಾಜಘಾತುಕರನ್ನು ಕೂಡಲೆ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ವಸಂತ ಭೈರಾಮಡಿ, ಸಮಾಜದಲ್ಲಿನ ಅಕ್ರಮ, ಭ್ರಷ್ಟಾಚಾರ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ಜನರ ಮುಂದಿಡುವುದು ಪತ್ರಕರ್ತರ ವೃತ್ತಿಪರ ಕರ್ತವ್ಯವಾಗಿದೆ. ಇಂತಹ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಪತ್ರಕರ್ತರ ಮನೆಗೆ ತೆರಳಿ ಬೆದರಿಕೆ ಹಾಕುವುದು ಪತ್ರಿಕಾ ಸ್ವಾತಂತ್ರ‍್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಕೃತ್ಯವಾಗಿದೆ. ಪತ್ರಕರ್ತರ ಸುರಕ್ಷತೆ ಹಾಗೂ ವೃತ್ತಿ ಸ್ವಾತಂತ್ರ‍್ಯವನ್ನು ಕಾಪಾಡುವುದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದ್ದು ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಮತ್ತು ಪೋಲಿಸ್ ಇಲಾಖೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದರು.
ತಹಶೀಲ್ದಾರರ ಪರವಾಗಿ ಅಧಿಕಾರಿ ರವಿಕುಮಾರ ಎಸ್.ಚವ್ಹಾಣ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಚಡಚಣ ಕಾನಿಪ ಸಂಘದ ಅಧ್ಯಕ್ಷ ರಮೇಶ ಬಿರಾದಾರ, ಮಾಜಿ ಅಧ್ಯಕ್ಷ ಪ್ರಭಾಕರ ಗೂಳಿಪಾಟೀಲ, ಖಜಾಂಚಿ ವಿನಯ ಜೀರಂಕಲಗಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶಿವಾನಂದ ಶಿವಶರಣ, ಉಪಾಧ್ಯಕ್ಷ ಸಂಗಮೇಶ ಹೆಚ್ ಹೂಗಾರ, ಶಂಕರ ಹಾವಿನಾಳ, ಸುಬ್ರಹ್ಮಣ್ಯ ಸಂಗಮ, ಶ್ರೀಕಾಂತ ಬಗಲಿ, ಗಂಗಾಧರ ಗಿಡವೀರ, ಪುಟ್ಟು ನೀವರಗಿ, ಚಂದ್ರಕಾಂತ ನೀವರಗಿ, ಲಾಲಸಾಬ ನದಾಫ ಸೇರಿದಂತೆ ಪತ್ರಕರ್ತರು ಇದ್ದರು.

