ಲೇಖನ
– ಡಾ.ರಾಜಶೇಖರ ನಾಗೂರ
ಸಂಚಾಲಕರು
’ನಮ್ಮ ಕಥಾ ಅರಮನೆ ’
ಉದಯರಶ್ಮಿ ದಿನಪತ್ರಿಕೆ
ಮನುಷ್ಯನ ಬದುಕು ಬಹುಶಃ ಬೇಕು ಮತ್ತು ಬೇಡ ಎಂಬ ಎರಡು ಪದಗಳ ನಡುವೆ ನಡೆಯುವ ನಿರಂತರ ಪಯಣ.
ಚಿಕ್ಕವನಿದ್ದಾಗ ಆಟಿಕೆ ಬೇಕು, ಶಾಲೆಗೆ ಹೋದಾಗ ಒಳ್ಳೆಯ ಅಂಕ ಬೇಕು, ಬೆಳೆದಾಗ ಒಳ್ಳೆಯ ಉದ್ಯೋಗ ಬೇಕು, ನಂತರ ಮನೆ, ಹಣ, ಹೆಸರು, ಗೌರವ ಹೀಗೆ ‘ಬೇಕು’ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಬದುಕು ಒಂದು ಹಂತಕ್ಕೆ ಬಂದಾಗ ಹಿಂದೆ ಬೇಕೆಂದು ಬಯಸಿದ್ದ ಅನೇಕ ಸಂಗತಿಗಳೇ ಇಂದು ಬೇಡ ಎನಿಸಲು ಆರಂಭಿಸುತ್ತವೆ.
ಒಮ್ಮೆ ಹೆಚ್ಚು ಹಣ ಬೇಕೆನಿಸುತ್ತದೆ. ನಂತರ ಹಣಕ್ಕಾಗಿ ಕಳೆದುಕೊಂಡ ನೆಮ್ಮದಿ ಬೇಡವೆನಿಸುತ್ತದೆ.

ಹೆಚ್ಚು ಜನರ ಪರಿಚಯ ಬೇಕೆನಿಸುತ್ತದೆ. ನಂತರ ಮನಸ್ಸನ್ನು ಅರ್ಥಮಾಡಿಕೊಳ್ಳುವ ಕೆಲವೇ ಜನರು ಸಾಕೆನಿಸುತ್ತದೆ.
ಎಲ್ಲರ ಮೆಚ್ಚುಗೆ ಬೇಕೆನಿಸುತ್ತದೆ. ನಂತರ ನಮ್ಮ ಮನಸ್ಸಿಗೆ ನಾವು ಸತ್ಯವಾಗಿರುವುದೇ ಮುಖ್ಯವೆನಿಸುತ್ತದೆ.
ವಿಚಿತ್ರವೆಂದರೆ ಬೇಕೆಂಬ ಆಸೆ ನಮ್ಮನ್ನು ಓಡಿಸಿದರೆ ಬೇಡವೆಂಬ ಅರಿವು ನಮ್ಮನ್ನು ನಿಲ್ಲಿಸುತ್ತದೆ. ಬದುಕಿನಲ್ಲಿ ಪ್ರತಿಯೊಂದನ್ನೂ ಪಡೆಯುವುದೇ ಯಶಸ್ಸಲ್ಲ. ಯಾವುದನ್ನು ಪಡೆಯಬೇಕು, ಯಾವುದನ್ನು ಬಿಟ್ಟುಕೊಡಬೇಕು ಎಂಬ ಅಂಶವು ಕೂಡಾ ಯಶಸ್ಸಿನ ಒಂದು ಭಾಗ. ಎಲ್ಲವೂ ಬೇಕೆಂದು ಹಂಬಲಿಸಿದರೆ ಮನಸ್ಸಿಗೆ ವಿಶ್ರಾಂತಿ ಸಿಗುವುದಿಲ್ಲ. ಎಲ್ಲವನ್ನೂ ಬೇಡವೆಂದರೆ ಬದುಕಿಗೆ ಅರ್ಥ ಉಳಿಯುವುದಿಲ್ಲ.
ಆದ್ದರಿಂದ ಬದುಕಿನ ಸೌಂದರ್ಯ ‘ಬೇಕು’ಗಳನ್ನು ಹೆಚ್ಚಿಸುವುದರಲ್ಲಿ ಇಲ್ಲ. ಅಗತ್ಯವಾದ ‘ಬೇಕು’ಗಳನ್ನು ಗುರುತಿಸಿ, ಅನಗತ್ಯವಾದ ‘ಬೇಡ’ಗಳನ್ನು ಧೈರ್ಯವಾಗಿ ಒಪ್ಪಿಕೊಳ್ಳುವುದರಲ್ಲಿ ಇದೆ.
ಕೆಲವೊಮ್ಮೆ ನಾವು ಬಯಸಿದ್ದು ಸಿಗದಿರುವುದೇ ಒಳ್ಳೆಯದು. ಏಕೆಂದರೆ ನಮಗೆ ಬೇಕೆಂದು ಅನಿಸಿದ್ದೆಲ್ಲವೂ ನಮಗೆ ಒಳ್ಳೆಯದಾಗಿರಬೇಕೆಂದಿಲ್ಲ. ಹಾಗೆಯೇ ನಮಗೆ ಬೇಡವೆಂದು ದೂರ ಮಾಡಿದ ಕೆಲವು ಅನುಭವಗಳೇ ಮುಂದೆ ನಮ್ಮನ್ನು ಬೆಳೆಸಬಹುದು.
ಬೇಕು ಬೇಡಗಳೆಂಬ ಆಸೆಗಳು ಕಲಿಸುವ ದೊಡ್ಡ ಪಾಠ ಏನೆಂದರೆ ಎಲ್ಲವೂ ಬೇಕೆಂದರೆ ನೆಮ್ಮದಿ ಸಿಗದು.
ಎಲ್ಲವೂ ಬೇಡವೆಂದರೆ ಬದುಕು ರುಚಿಸದು. ಬೇಕಾದುದನ್ನು ಬಯಸಿ, ಬೇಡವಾದುದನ್ನು ಬಿಡುವ
ವಿವೇಕ ಬಂದಾಗಲೇ ಬದುಕು ಪರಿಪೂರ್ಣವಾಗುವುದು.


