ಭಾವರಶ್ಮಿ
- ಅಚಲ ಬಿ ಹೆನ್ಲಿ
ಮಾನವನ ಶರೀರ ಭೂಮಂಡಲದಷ್ಟೇ ನಿಗೂಢ. ಎಷ್ಟೇ ಕೆದಕಿದರೂ, ಎಷ್ಟೇ ಅದನ್ನು ಅರಿತರೂ ಮೊಗೆದಷ್ಟು ಒಂದಾದರೊಂದರ ಮೇಲೆ ಹೊಸ ವಿಷಯಗಳು ತಿಳಿಯುತ್ತಲೇ ಹೋಗುತ್ತವೆ. ಇಂತಹ ಮಾನವನ ದೇಹದಲ್ಲಿ ಚಿತ್ರ ವಿಚಿತ್ರವಾದ ವಿಷಯಗಳು ಅಡಗಿವೆ. ಅದನ್ನು ಅರ್ಥ ಮಾಡಿಕೊಳ್ಳುವುದು ಸಹ ಅಷ್ಟೇ ಕಷ್ಟ. ಎಲ್ಲಿಯ ಕನೆಕ್ಷನ್ ಇನ್ನೆಲ್ಲಿಯೋ ಇರುತ್ತದೆ. ಎಲ್ಲೋ ಒಂದು ತೊಂದರೆಯಾದರೆ, ಮತ್ತಿನ್ನೆಲ್ಲೋ ಅದು ವ್ಯಕ್ತಪಡಿಸುತ್ತದೆ. ಒಟ್ಟಿನಲ್ಲಿ ಅದರ ಸೂತ್ರ ಒಂದು ಕಡೆಯಿದ್ದರೆ, ಅದರ ಪಾತ್ರ ನಿರ್ವಹಿಸುವಿಕೆ ಮತ್ತಿನ್ನೆಲ್ಲೋ ಇರುತ್ತದೆ.
ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿದ್ದ ದೇಹ, ದಿಢೀರನೆ ವ್ಯತ್ಯಾಸಗೊಂಡು ಅನಾರೋಗ್ಯಕ್ಕೆ ಈಡಾಗುತ್ತದೆ. ಅದೇಕೆ ಹಾಗಾಯಿತು, ಏನಾಯಿತು ಎಂದು ಪತ್ತೆ ಹಚ್ಚುವುದಕ್ಕೆ ಕೆಲವೊಮ್ಮೆ ಕಷ್ಟವಾಗಿ ಬಿಡುತ್ತದೆ. ಕೆಲವೊಮ್ಮೆ ಒಂದು ನೋವಿಗೂ ಇನ್ನೊಂದು ನೋವಿಗೂ ಸಂಬಂಧವಿದ್ದು ಕಾಯಿಲೆಗಳು ಒಂದಕ್ಕೊಂದು ಬೆಸೆದುಕೊಂಡಿದ್ದರೆ, ಮತ್ತೂ ಕೆಲವೊಮ್ಮೆ ಎರಡು ಮೂರು ಕಾಯಿಲೆ ನೋವುಗಳು ಒಟ್ಟೊಟ್ಟಿಗೆ ಶುರುವಾದರೂ, ಕಾರಣಗಳು ವಿಭಿನ್ನವಾಗಿರುತ್ತವೆ.
“ಮಾನವನ ದೇಹವು ಮೂಳೆ ಮಾಂಸದ ತಡಿಕೆ” ಎಂದರೂ ಸಹ, ನಮ್ಮ ದೇಹ ಕಾರ್ಯನಿರ್ವಹಿಸಲು ಬೇಕಾಗುವ ಶಕ್ತಿ, ಕೆಲಸ ನಿರ್ವಹಿಸುವ ವೈಖರಿ, ಒಂದೊಂದು ಅಂಗಗಳ ರಚನೆ, ಪರಿಕಲ್ಪನೆ ಎಲ್ಲವೂ ವಿಸ್ಮಯದಿಂದ ಕೂಡಿದೆ. ಮಾನವನ ದೇಹ ಯಾವುದೇ ಒಂದು ಮಷೀನ್ ಹೇಗೆ ಕೆಲಸ ಮಾಡುತ್ತದೆಯೋ, ಅದೇ ರೀತಿಯಲ್ಲಿಯೇ ಕೆಲಸ ಮಾಡುತ್ತದೆ. ಇಲ್ಲಾ ಅದಕ್ಕಿಂತಲೂ ತೀಕ್ಷ್ಣವಾಗಿ, ಸಂಕೀರ್ಣತೆಯಿಂದ, ನಿರಂತರವಾಗಿ ಕಾರ್ಯನಿರ್ವಹಿಸುತ್ತಲೇ ಇರುತ್ತದೆ.
ದೇಹ ಸ್ತಬ್ಧವಾಯಿತು ಎಂದರೆ ಉಸಿರು ನಿಂತಂತೆ. ಉಸಿರು ನಿಂತ ಕ್ಷಣವೇ ಜೀವಿಯನ್ನು ಜೀವ ಕಳೆದುಕೊಂಡ ಕಾರಣ, “ಬಾಡಿ” ಎನ್ನಲು ಶುರು ಮಾಡುತ್ತೇವೆ..! ಎಂತಹ ವಿಚಿತ್ರವಲ್ಲವೇ..? ಅಲ್ಲಿಯವರೆಗೂ ಸಂಬಂಧಾನುಸಾರ ಕರೆಯುತ್ತಿದ್ದ ಆ ವ್ಯಕ್ತಿಯನ್ನು ಅಥವಾ ಅವರು/ ಅವನು/ ಅವಳು ಎನ್ನುತ್ತಿದ್ದ ನಾವು, ಉಸಿರು ನಿಂತೇಟಿಗೆ ಅದು/ ಬಾಡಿ ಎನ್ನಲು ಶುರುವಿಡುತ್ತೇವೆ. ಕೇಳಲು ಬೇಸರವಾದರೂ ಅದೇ ವಾಸ್ತವ ಎನ್ನುವುದೇ ಖೇದಕರ ಸಂಗತಿ.
“ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ..!!” ಎಂಬ ಪುರಂದರದಾಸರ ನುಡಿಯಂತೆ ಇಡೀ ಪ್ರಕೃತಿಯಲ್ಲಿಯೇ ಮಾನವನು ಬುದ್ಧಿವಂತ, ಮಾತುಬಲ್ಲ, ಅಗಾಧ ಯೋಚನಾ ಶಕ್ತಿ ಹೊಂದಿದ ಪ್ರಾಣಿ. ಆದರೆ ಕೆಲವೊಮ್ಮೆ ಅಥವಾ ಇತ್ತೀಚಿನ ದಿನಮಾನಸದಲ್ಲಿ ಮಾನವನು ತನ್ನ ಆರೋಗ್ಯದ ಕಡೆಗೆ ಗಮನವಿಡುವುದರಲ್ಲಿ ಉದಾಸೀನತೆಯನ್ನು ತೋರಿಸುತ್ತಿದ್ದಾನೆ. ಇದಕ್ಕೆ ಇಂಬು ಕೊಡುವಂತೆ 30- 40 ವರ್ಷಗಳ ಪ್ರಾಯದಲ್ಲೇ ಕೆಲವರು ನಿಧನ ಹೊಂದುತ್ತಿದ್ದಾರೆ.
ಇಂತಹ ಬೆಳವಣಿಗೆಗೆ ಕಾರಣ ನೂರಾರು. ಆದರೆ “ಆರೋಗ್ಯವೇ ಭಾಗ್ಯವೆಂದು” ಗೊತ್ತಿದ್ದರೂ, ಅದನ್ನು ಕಡೆಗಣಿಸಿ ಕೆಲಸ ಕೆಲಸವೆಂದು ತಮ್ಮ ದೇಹದ ಬಗ್ಗೆ ಕಾಳಜಿವಹಿಸದೆ ಅನಾರೋಗ್ಯಕ್ಕೆ ಈಡಾಗುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಯಾವುದೇ ಒಂದು ಕಾಯಿಲೆ ದಿಢೀರನೆ ಮನುಷ್ಯನನ್ನು ಆಪೋಶನ ತೆಗೆದುಕೊಳ್ಳುವುದು ಎಲ್ಲೋ ಒಮ್ಮೊಮ್ಮೆ.
ಯಾವುದೇ ಕಾಯಿಲೆ ತನ್ನ ಇರುವಿಕೆಯನ್ನು ಲಕ್ಷಣಗಳ ಮೂಲಕ ಮನುಷ್ಯನಿಗೆ ಗೊತ್ತಾಗಲಿ ಎಂದು ತೋರಿಸಿಕೊಳ್ಳುತ್ತದೆ. ಆದರೆ ಇಲ್ಲೇ ಎಷ್ಟೋ ಜನ ಇಡುವುದು ಎಡುವುದು. ಏನೋ ಒಂದು ನೋವು, ಏನೋ ಒಂದು ಗಂಟು, ಏನೋ ಒಂದು ಗುಳ್ಳೆ ಎಂದು ಅದನ್ನು ನೆಗ್ಲೆಕ್ಟ್ ಮಾಡುವವರೇ ಹೆಚ್ಚು. ಆದರೂ ಆಕ್ರಮಿಸಿದ ಖಾಯಿಲೆ ಇಲ್ಲಿಗೇ ಸೋಲುವುದಿಲ್ಲ. ಮತ್ತೂ “ತಾನು ನಿನ್ನ ದೇಹಕ್ಕೆ ಲಗ್ಗೆ ಇಟ್ಟಿದ್ದೇನೆ” ಎಂದು ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಪಡಿಸುತ್ತದೆ.
ಈ ಸಮಯದಲ್ಲಿ ಮನುಷ್ಯನಾದವನು ಸ್ವಲ್ಪ ಜಾಗರೂಕನಾಗಿ, ಜಾಣ್ಮೆಯಿಂದ ಏಕೆ ತಾನು ಎಂದಿನಂತೆ ಇಲ್ಲ, ಏಕೆ ಈ ದಣಿವು, ಏಕೆ ಈ ನೋವು ಎಂದು ಸ್ವಲ್ಪ ಹೊತ್ತಾದರೂ ಯೋಚಿಸಿದರೆ ಆಕ್ರಮಿಸಿದ ಕಾಯಿಲೆಯನ್ನು ತಮ್ಮ ದೇಹದಿಂದ ಹೊರಗೋಡಿಸಬಹುದು. ಆದರೆ ಸದಾ ಕೆಲಸ, ಸಂಬಳ, ಮನೆ, ಖರ್ಚು- ವೆಚ್ಚ ಎಂದು ಗಣಿತದ ಅಂಕಿಗಳಲ್ಲೇ ಮುಳುಗಿರುವವನಿಗೆ ತನ್ನ ಜೀವದ ಬಗ್ಗೆ ಹೇಗಾದರೂ ಜ್ಞಾನ ಬಂದೀತು..?!
ಏನೋ ಹೀಗೆಯೇ ಸರಿ ಹೋಗುತ್ತದೆ, ಮುಂದೆ ನೋಡೋಣ, ತನಗೆ ಸಮಯವಿಲ್ಲ, ದುಡಿತವೇ ಮುಖ್ಯ ಹೀಗೆ ಕಾರಣಗಳನ್ನು ಒಂದಾದರೊಂದರ ಮೇಲೆ ಹೇಳುತ್ತಾ, ಕಾಯಿಲೆಯನ್ನು ಇನ್ನೂ ಜಾಸ್ತಿ ಮಾಡಿಕೊಳ್ಳುತ್ತಾನೆ. ಜೊತೆಗೆ ಇತ್ತೀಚಿನ ಬಿಡುವುರಹಿತ ಜೀವನದಲ್ಲಿ ಸೂಕ್ಷ್ಮಗ್ರಾಹಿಯಾಗಿದ್ದ ಮಾನವನು ಮಂದಮತಿಯಾಗಿಬಿಟ್ಟಿದ್ದಾನೆ..!! ಪರಿಣಾಮವಾಗಿ ಚಿಕ್ಕ ವ್ಯತ್ಯಾಸವನ್ನು ಕಂಡುಹಿಡಿಯಲು ಸೋಲುತ್ತಿದ್ದಾನೆ. ತನಗೆ ಅಂಟಿದ ಕಾಯಿಲೆ ದೊಡ್ಡ ಮಟ್ಟಕ್ಕೆ ಆಗುವವರೆಗೂ ಗೊತ್ತೋ ಗೊತ್ತಿಲ್ಲದೆಯೋ ಸುಮ್ಮನಿದ್ದು, ನಂತರ ವೈದ್ಯರ ಹತ್ತಿರ ಹೋಗುತ್ತಾನೆ.
ಚಿಕ್ಕದ್ದರಲ್ಲಿಯೇ ವಾಸಿ ಮಾಡಿಕೊಳ್ಳುವ ಅವಕಾಶವಿದ್ದರೂ ದೊಡ್ಡ ಮಟ್ಟಿಗೆ ಆಗುವ ತನಕ ಸುಮ್ಮನಿದ್ದು, ನಂತರ ವೈದ್ಯರ ಹತ್ತಿರ ಹೋಗುವುದರಿಂದ ಖರ್ಚು ಜಾಸ್ತಿ, ಜೊತೆಗೆ ಹುಷಾರಾಗುವ ಸಮಯವೂ ಹೆಚ್ಚು ಹಿಡಿಯುತ್ತದೆ. “ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಂಡರು” ಎಂಬ ನಾಣ್ಣುಡಿಯನ್ನು ಇವರನ್ನು ನೋಡಿಯೇ ಹಿರಿಯರು ಮಾಡಿರಬೇಕು ಎನಿಸುತ್ತದೆ.
ಯಾವುದಾದರೂ ವಿಷಯ ಯಾರಿಂದಾದರೂ ಸರಿಯೇ, ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದೆ ಎಂದರೆ ಅದು ದೇವರೇ ಹೇಳಿಸುತ್ತಿದ್ದಾರೆ ಎಂಬ ಮಾತಿದೆ. ನಮ್ಮ ಪ್ರೀತಿ ಪಾತ್ರರು, ಆತ್ಮೀಯರು, ಕುಟುಂಬಸ್ಥರು ಆರೋಗ್ಯಕ್ಕೆ ಸಂಬಂಧಿಸಿದಂತೆ ಅಥವಾ ಯಾವುದೇ ವಿಷಯಕ್ಕೆ ಅನುಸಾರ ಹಿತವಚನಗಳನ್ನು ನುಡಿದಾಗ, ಅದನ್ನು ತಳ್ಳಿ ಹಾಕದೆ ಅದಕ್ಕನುಗುಣವಾಗಿ ನಡೆದುಕೊಳ್ಳುವುದು ಅಷ್ಟೇ ಮುಖ್ಯ. ಹೇಳುವವರು ಸುಮ್ಮನೆ ಹೇಳುತ್ತಲೇ ಇರುವುದಕ್ಕೆ ಅವರಿಗೆ ಕೆಲಸ ಕಾರ್ಯಗಳಿಲ್ಲವೇ..? ಅಥವಾ ಅತಿಯಾಗಿ ಬಿಡುವಾಗಿದ್ದಾರೆಯೇ..? ಖಂಡಿತ ಇಲ್ಲ, ನಮ್ಮ ಬಗ್ಗೆ ಕಾಳಜಿವಹಿಸುವ ಆತ್ಮೀಯರಿಗೂ ಕೆಲಸಗಳಿವೆ. ಅದರ ಮಧ್ಯೆ ನಮ್ಮ ಬಗ್ಗೆ ನೆನೆಸಿಕೊಂಡು ಕೇರ್ ಮಾಡುತ್ತಿದ್ದಾರೆ ಎಂದರೆ ನಾವು ಅವರಿಗೆಷ್ಟು ಮುಖ್ಯವೆಂದು ಯೋಚಿಸಬೇಕಾಗುತ್ತದೆ.
ಇದಕ್ಕೆ ಉದಾಹರಣೆಯಾಗಿ ಇತ್ತೀಚಿಗೆ ಹೆಚ್ಚು ಸದ್ದು ಮಾಡಿದ ಒಂದು ದುರಂತವನ್ನು ನೆನೆಯಬಹುದು. ನೂರು ವರ್ಷಗಳಷ್ಟು ಹಳೆಯದಾದ ಸಮುದ್ರದಾಳದಲ್ಲಿ ಮುಳುಗಿ ಹೋಗಿರುವ ಟೈಟಾನಿಕ್ ದೈತ್ಯ ಹಡಗಿನ ಅವಶೇಷಗಳನ್ನು ನೋಡಲು ಐದು ಕೋಟ್ಯಾಧೀಶ್ವರರನ್ನು ಹೊತ್ತ “ಓಷನ್ ಗೇಟ್” ಸಂಸ್ಥೆಯ ಟೈಟಾನ್ ಎಂಬ ಸಬ್ಮರ್ಸಿಬಲ್ ಜಲಾಂತರ್ಗಾಮಿ ಸಮುದ್ರದಾಳಕ್ಕೆ ಇಳಿಯಿತು. ದುರದೃಷ್ಟವಶಾತ್ ಆ ಯೋಜನೆಯನ್ನು ಶುರು ಮಾಡಿದ ಓಷನ್ ಗೇಟ್ ಸಂಸ್ಥಾಪಕ ಸ್ಟಾಕ್ಟನ್ ರಶ್ ಜೊತೆ ಹೋದ ಇನ್ನೂ ನಾಲ್ವರು ಶ್ರೀಮಂತರು, ಟೈಟಾನ್ ನಲ್ಲಿ ಉಂಟಾದ ಕೆಲವು ತೊಂದರೆಗಳಿಂದ ಸಮುದ್ರದಾಳದಲ್ಲಿಯೇ ಜಲ ಸಮಾಧಿಯಾದರು.
ಸಾವು ಯಾರನ್ನು ಕೇಳಿ ಬರುವುದಿಲ್ಲ ನಿಜ. ಆದರೆ ಈ ದುರಂತ ನಡೆದ ನಂತರ ಸುದ್ದಿಯಾದ ವಿಷಯಗಳೇನೆಂದರೆ, ಇದರ ಸಂಸ್ಥಾಪಕ ಸ್ಟಾಕ್ಟನ್ ರಶ್ ನಿಗೆ ಹಲವು ತಂತ್ರಜ್ಞರು, ಕೆಲಸಗಾರರು ಈ ಜಲಾಂತರ್ಗಾಮಿ ಸಂಬಂಧಿತ ಕೆಲವು ನ್ಯೂನತೆಗಳಿವೆ, ಹಾಗಾಗಿ ಪ್ರಯಾಣಿಸಲು ಕ್ಷೇಮಕರವಲ್ಲ ಎಂದು ಮುಂಚೆಯೇ ಹಲವು ಸಲ ಹೇಳಿದ್ದರಂತೆ. ಆದರೆ ಅವರ ಮಾತುಗಳನ್ನ ಕೇಳದೆ ಮುಂದಡಿ ಇಟ್ಟಿದ್ದೇ ತಪ್ಪಾಯಿತು ಎಂದು ಹಲವು ವರದಿಗಳು ಹೇಳಿದವು. ಮೇಲಿನ ನಿದರ್ಶನವೇ ಸಾಕಲ್ಲವೇ ದುಡ್ಡೇ ದೊಡ್ಡದಲ್ಲ, ದುಡ್ಡಿನಿಂದಲೇ ಜೀವ ಖರೀದಿಸಲು ಸಾಧ್ಯವಿಲ್ಲವೆಂದು ನಿರೂಪಿಸಲು..?!
ದೇಹಕ್ಕೆ ಬೇಕಾದಷ್ಟು ವಿಶ್ರಾಂತಿ, ನಿದ್ದೆ, ವ್ಯಾಯಾಮ, ಆಹಾರ, ವಿಹಾರ ಇವುಗಳನ್ನು ಸಮಯಕ್ಕೆ ಸರಿಯಾಗಿ ನಾವು ಕೊಡಬೇಕು. ಇದರಿಂದ ದೇಹವು ಚೈತನ್ಯಗೊಂಡು, ಒಳ ಮನಸ್ಸು ಸಂತುಷ್ಟಗೊಂದು, ಆರೋಗ್ಯದಿಂದ ನಾವು ಇರಬಹುದು. ದೇಹವು ಸುಸ್ಥಿತಿಯಲ್ಲಿದ್ದರೆ ನಾವೂ ಕ್ಷೇಮ, ನಮ್ಮವರೂ ಕ್ಷೇಮ. ಅದಕ್ಕೆ ಅಲ್ಲವೇ ಹೇಳುವುದು “ದೇಹವೇ ದೇಗುಲವಯ್ಯವೆಂದು..?” ನಮ್ಮ ದೇಹವನ್ನು ದೇಗುಲದಷ್ಟೇ ನಿರ್ಮಲವಾಗಿ, ಪವಿತ್ರವಾಗಿ, ಗೌರವಯುತವಾಗಿ, ಕಾಳಜಿಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯಗಳಲ್ಲೊಂದಲ್ಲವೇ..?!