ಸಾತಿಹಾಳ ಗ್ರಾಮದ ವಿಬಿಜಿ–ರಾಮ್ ಜಿ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಕಡ್ಡಾಯವಾಗಿ ಲಭ್ಯವಿರುವಂತೆ ನೋಡಿಕೊಳ್ಳುವುದು ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಹೇಳಿದರು.
ತಾಲ್ಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋನಾಬಾಯಿ ಹಳ್ಳದ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ, ಕೂಲಿಕಾರರ ಹಾಜರಾತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರುವಂತೆ ಪಿಡಿಓ ಕ್ರಮ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರತಿದಿನ ಎನ್‌ಎಂಎಂಎಸ್ ಆ್ಯಪ್ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸುವಂತೆ ಟಿಆರ್‌ಎಂ ಅವರಿಗೆ ನಿರ್ದೇಶನ ನೀಡಿದರು.
ಕೂಲಿಕಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೂಲಿ ಆಧಾರಿತ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವಂತೆ ಪಿಡಿಓ ಅವರಿಗೆ ಸೂಚಿಸಿದರು.
ನಂತರ ಕೂಲಿಕಾರರೊಂದಿಗೆ ಸಂವಾದ ನಡೆಸಿ, ವಿಬಿಜಿ–ರಾಮ್ ಜಿ ಯೋಜನೆಯ ಉದ್ದೇಶ ಹಾಗೂ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ತಾಪಂ ಇಓ ಭಾರತಿ ಚಲುವಯ್ಯ ಮಾತನಾಡಿದರು.
ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಶಿವಾನಂದ ಮೂಲಿಮನಿ, ತಾಂತ್ರಿಕ ಸಂಯೋಜಕ ಶರಣಗೌಡ ಪಾಟೀಲ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ತಾಂತ್ರಿಕ ಸಹಾಯಕರಾದ ಆರ್ಷದ್ ಕೊಟ್ನಾಳ, ಶೋಹೆಬ್ ಮಾರಡಗಿ, ಪಿಡಿಓ ಎಂ.ಎನ್. ಕತ್ತಿ, ಟಿಆರ್‌ಎಂ ವಿನೋದ ಚವ್ಹಾಣ ಇದ್ದರು.

