ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಿಕೋಟಾ ತಾಲ್ಲೂಕಿನ ತೊರವಿ ಗ್ರಾಮ ಬಳಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ಶೀತಲಗೃಹಕ್ಕೆ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಒಟ್ಟು ವಿಸ್ತೀರ್ಣ ೧೪೧ ಎ.ಗುಂಟ ಇದೆ. ಸುತ್ತಲೂ ತಂತಿ ಬೇಲಿ ಅಳವಡಿಸಲಾಗಿದೆ. ರಸ್ತೆಗಳ ನಿರ್ಮಾಣ ಹಾಗೂ ೧೦ ಬೋರವೆಲ್ ಗಳಿದ್ದು, ಪ್ರಸ್ತುತ ನಬಾರ್ಡ ಯೋಜನೆಯಡಿ ಸುಮಾರು ೧೦೦೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹ ನಿರ್ಮಾಣಗೊಳ್ಳುತ್ತಿದ್ದು, ವೈನ್ ಮತ್ತು ದ್ರಾಕ್ಷಿ ಬೋರ್ಡದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದಂತೆ ೨ ರಿಂದ ೩ ತಿಂಗಳಲ್ಲಿ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ಅವರು, ಶೀತಲ ಗೃಹದ ಕುರಿತು ಜಿಲ್ಲಾಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಿದರು.
ಬಳಿಕ ಜಿಲ್ಲಾಧಿಕಾರಿಗಳು ಶೀತಲ ಗೃಹದ ಬಳಕೆ ಹಾಗೂ ನಿರ್ವಹಣೆ ಬಗ್ಗೆ ಚರ್ಚಿಸಿದರು. ಬಳಿಕ ಇದಕ್ಕೆ ಸಂಬಂಧಿಸಿದಂತೆ ಬೋರ್ಡಿನ ವ್ಯವಸ್ಥಾಪಕರ ನಿರ್ದೇಶಕರು ಮುಂದಿನ ದಿನಗಳಲ್ಲಿ ಬಂದು ಮಾಹಿತಿ ನೀಡುವಂತೆ ಸೂಚಿಸಿದರು.
ನಂತರ ಇಟ್ಟಂಗಿಹಾಳದಲ್ಲಿ ನಿರ್ಮಾಣವಾಗುತ್ತಿರುವ ಆಹಾರ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟಕಕ್ಕೆ ಭೇಟಿ ನೀಡಿ ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಬೇರೆ ಬೇರೆ ಕೃಷಿ ತೋಟಗಾರಿಕೆ ಬೆಳೆಗಳಿಗೆ ಅನುಗುಣವಾಗಿ ಕೈಗೊಳ್ಳಬಹುದಾದ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

