ಸಾರ್ವಜನಿಕ ಸೇವೆ, ಶುಚಿತ್ವಕ್ಕೆ ಆದ್ಯತೆ ನೀಡಲು ಜಿಲ್ಲಾಧಿಕಾರಿ ಡಾ. ಕೆ. ಆನಂದ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಗೆ ಗುರುವಾರ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ದಿಢೀರ್ ಭೇಟಿ ನೀಡಿ, ಕಚೇರಿಯ ದೈನಂದಿನ ಆಡಳಿತ ಕಾರ್ಯವೈಖರಿ ಹಾಗೂ ಹಾಲಿ ವ್ಯವಸ್ಥೆಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿದರು.
ಕಚೇರಿ ಭೇಟಿಯ ವೇಳೆ ಕಚೇರಿಯ ಪರಿಸರ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಇಡೀ ಕಚೇರಿಯ ಆವರಣದಲ್ಲಿ ಸಂಪೂರ್ಣ ಶುಚಿತ್ವ, ಶಿಸ್ತು ಹಾಗೂ ಚೊಕ್ಕಟವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಚುರುಕು ಮುಟ್ಟಿಸುವ ಮೂಲಕ ಕಟ್ಟು-ನಿಟ್ಟಿನ ಸೂಚನೆ ನೀಡಿದರು.
ಕಚೇರಿಗೆ ಆಗಮಿಸುವ ಸಾರ್ವಜನಿಕರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ಮೂಲಸೌಲಭ್ಯಕ್ಕೆ ಸೂಚನೆ: ಕಚೇರಿಗೆ ಆಗಮಿಸುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯಗಳನ್ನು ಸಮರ್ಪಕವಾಗಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ತಕ್ಷಣಕ್ಕೆ ಜನರಿಗೆ ಸ್ಪಂದಿಸಿ: ಜೊತೆಗೆ, ವಿವಿಧ ಕೆಲಸ-ಕಾರ್ಯಗಳಿಗಾಗಿ ಬರುವ ಸಾರ್ವಜನಿಕರ ಅರ್ಜಿಗಳಿಗೆ ಕಾಲಮಿತಿ ಹಾಕಿಕೊಂಡು ಕೆಲಸ ಮಾಡಿಕೊಡಬೇಕು. ಜೊತೆಗೆ ಸಾರ್ವಜನಿಕರ ಕೆಲಸ-ಕಾರ್ಯಗಳಿಗೆ ತಕ್ಷಣವೇ ಸ್ಪಂದಿಸಿ ತ್ವರಿತ ಸೇವೆಯನ್ನು ತಲುಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ದಿಢೀರ್ ಭೇಟಿ ಸಂದರ್ಭದಲ್ಲಿ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಕಚೇರಿಯ ಪ್ರಸ್ತುತ ಸ್ಥಿತಿಗತಿ ಹಾಗೂ ಕಾರ್ಯನಿರ್ವಹಣೆಯ ಕುರಿತು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.

