ವಿಜಯಪುರದ ಮಹಿಳಾ ವಿವಿ ಮತ್ತು ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿವಿ ಮಧ್ಯ ಶೀಘ್ರದಲ್ಲೇ ಶೈಕ್ಷಣಿಕ ಸಹಕಾರ ಒಪ್ಪಂದ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ಅವರ ನೇತೃತ್ವದ ನಿಯೋಗವು ಆಗಸ್ಟ್ ೪ ಮತ್ತು ೫ರಂದು ದೇಶದ ಪ್ರಪ್ರಥಮ ಮಹಿಳಾ ವಿಶ್ವವಿದ್ಯಾನಿಲಯವಾಗಿರುವ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಚರ್ಚ್ಗೇಟ್ ಹಾಗೂ ಜುಹು ಆವರಣಗಳಿಗೆ ಭೇಟಿ ನೀಡಿ, ಶೈಕ್ಷಣಿಕ ಹಾಗೂ ಸಂಶೋಧನಾ ಸಹಕಾರದ ಕುರಿತು ಮಹತ್ವದ ಚರ್ಚೆ ನಡೆಸಿತು.
ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್ ಅವರು ನಿಯೋಗವನ್ನು ಸ್ವಾಗತಿಸಿ, ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಉನ್ನತ ಶಿಕ್ಷಣ, ಸಂಶೋಧನೆ, ನವೋದ್ಯಮ, ಕೌಶಲ್ಯಾಭಿವೃದ್ಧಿ ಮತ್ತು ವಿದ್ಯಾರ್ಥಿ-ಕೇಂದ್ರಿತ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ವಿಜಯಪುರ ಮಹಿಳಾ ವಿವಿಯ ಈ ನಿಯೋಗದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಪಿ.ಜಿ.ತಡಸದ, ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಜಿ.ರಜಪೂತ, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಬಿ. ಸೋನಾರ್ ಹಾಗೂ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಜೆನ್ನಿಫರ್ ಸೌಲಮ್ ಇದ್ದರು.
ಈ ಭೇಟಿಯ ಸಂದರ್ಭದಲ್ಲಿ ಎರಡೂ ಮಹಿಳಾ ವಿಶ್ವವಿದ್ಯಾಲಯಗಳ ನಡುವೆ ಶೀಘ್ರದಲ್ಲೇ ಪರಸ್ಪರ ತಿಳುವಳಿಕೆ ಒಪ್ಪಂದ (ಎಂಓಯು)ಕ್ಕೆ ಸಹಿ ಹಾಕುವ ಕುರಿತು ಉಭಯ ಕುಲಪತಿಗಳು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಒಪ್ಪಂದದ ಮೂಲಕ ಶೈಕ್ಷಣಿಕ ಸಹಕಾರ, ಜಂಟಿ ಸಂಶೋಧನೆ, ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳು, ನವೋದ್ಯಮ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಕ್ಷೇತ್ರಗಳಲ್ಲಿ ಪರಸ್ಪರ ಸಹಯೋಗವನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಮಹಿಳಾ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸುವ ಮಹತ್ವದ ಶೈಕ್ಷಣಿಕ ಸೇತುವೆಯಾಗಿ ಈ ಒಪ್ಪಂದ ಕಾರ್ಯನಿರ್ವಹಿಸಲಿದೆ. ಇದು ಎರಡೂ ವಿಶ್ವವಿದ್ಯಾನಿಲಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ವಿಜಯಪುರ ಮಹಿಳಾ ವಿವಿ ನಿಯೋಗವು ಜುಹು ಮತ್ತು ಚಚ್ಗೇðಟ್ ಆವರಣಗಳಲ್ಲಿರುವ ವೈಜ್ ಮಹಿಳಾ ನವೋದ್ಯಮ ಮತ್ತು ಸ್ಟರ‍್ಟ್ಅಪ್ ಇಂಕ್ಯುಬೇಷನ್ ಸೆಂಟರ್, ಪ್ರೀ-ಇಂಕ್ಯುಬೇಷನ್ ಸೆಂಟರ್, ಶೈಕ್ಷಣಿಕ ತಂತ್ರಜ್ಞಾನ ವಿಭಾಗ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಎಸ್.ವಿ.ಟಿ. ಗೃಹ ವಿಜ್ಞಾನ ಕಾಲೇಜು, ಫಾರ್ಮಸಿ ಕಾಲೇಜು, ಜಾನಕಿದೇವಿ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗ, ವಿಶೇಷ ಶಿಕ್ಷಣ ವಿಭಾಗ, ವಿಶ್ವವಿದ್ಯಾಲಯ ಗ್ರಂಥಾಲಯ ಹಾಗೂ ಅನಿಮಲ್ ಹೌಸ್ ಸೇರಿದಂತೆ ವಿವಿಧ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಆಧುನಿಕ ಸೌಲಭ್ಯಗಳು, ಸಂಶೋಧನಾ ಚಟುವಟಿಕೆಗಳು ಹಾಗೂ ವಿದ್ಯಾರ್ಥಿ-ಕೇಂದ್ರಿತ ಕಾರ್ಯಕ್ರಮಗಳನ್ನು ವೀಕ್ಷಿಸಿತು.
ವಿಶೇಷವಾಗಿ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿನ ಡಿಜಿಟಲ್ ಸಂಪನ್ಮೂಲಗಳು, ಆಧುನಿಕ ಮೂಲಸೌಕರ್ಯ ಹಾಗೂ ವಿದ್ಯಾರ್ಥಿನಿಯರಿಗಾಗಿ ರೂಪಿಸಿರುವ ಜ್ಞಾನಾಧಾರಿತ ವ್ಯವಸ್ಥೆಯನ್ನು ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ನೇತೃತ್ವದ ತಂಡ ಪ್ರಶಂಸಿಸಿತು. ಅಲ್ಲದೆ, ಮಹಿಳಾ ಶಿಕ್ಷಣ, ಸಂಶೋಧನೆ, ನವೋದ್ಯಮ ಮತ್ತು ಉದ್ಯಮಶೀಲತೆ ಕ್ಷೇತ್ರಗಳಲ್ಲಿ ಎಸ್ಎನ್ಡಿಟಿ ಮಹಿಳಾ ವಿಶ್ವವಿದ್ಯಾಲಯ ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ತಂಡ ಶ್ಲಾಘಿಸಿತು.
ಈ ಸಂದರ್ಭದಲ್ಲಿ ಎರಡೂ ವಿಶ್ವವಿದ್ಯಾಲಯಗಳ ಅಧ್ಯಾಪಕರೊಂದಿಗೆ ಸಂವಾದ ನಡೆಸಿ, ಜಂಟಿ ಸಂಶೋಧನೆ, ಶೈಕ್ಷಣಿಕ ವಿನಿಮಯ, ಕೌಶಲ್ಯಾಭಿವೃದ್ಧಿ, ನವೀನ ಶಿಕ್ಷಣ ಪದ್ಧತಿಗಳು ಹಾಗೂ ಭವಿಷ್ಯದ ಸಹಯೋಗದ ಅವಕಾಶಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಈ ಸೌಹಾರ್ದ ಭೇಟಿ ಎರಡೂ ಮಹಿಳಾ ವಿಶ್ವವಿದ್ಯಾಲಯಗಳ ನಡುವಿನ ಶೈಕ್ಷಣಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವುದರ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ನವೋದ್ಯಮಕ್ಕೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿದೆ.

