ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ತುಮಕೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಆವರಿಸಿದೆ. ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ತಕ್ಷಣ 10,000 ಕೋಟಿ ರೂ. ವಿಶೇಷ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಒತ್ತಾಯಿಸಿದ್ದಾರೆ.
ಬರಗಾಲ ಪೀಡಿತ ಪ್ರದೇಶಗಳಿಗೆ ತಕ್ಷಣ ಪರಿಹಾರ ಘೋಷಣೆ ಮಾಡಬೇಕು, ರೈತರ ಬೆಳೆ ವಿಮಾ ಕಂತುಗಳನ್ನು ಸರ್ಕಾರವೇ ಪಾವತಿಸಬೇಕು ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚುವರಿ ಹಣವನ್ನು ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆಗ್ರಹಿಸಿದ್ದಾರೆ.
ತುಮಕೂರು ಜಿಲ್ಲೆಯ ಬರಗಾಲ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಕೇಂದ್ರದ ಸಹಾಯಕ್ಕಾಗಿ ಕಾಯದೆ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಒದಗಿಸಲು ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕದಾದ್ಯಂತ ಬರ ಪರಿಸ್ಥಿತಿಯನ್ನು ನಿರ್ಣಯಿಸಲು ಪಕ್ಷದ ಮುಖಂಡರ ನೇತೃತ್ವದಲ್ಲಿ ಏಳು ತಂಡಗಳನ್ನು ಮಾಡಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ಪ್ರವಾಸ ಕೈಗೊಳ್ಳಲಾಗಿದೆ. ಬರದ ನೈಜ ಸ್ಥಿತಿಯನ್ನು ತಿಳಿದು ರೈತರ ಸಂಕಷ್ಟ ಆಲಿಸುತ್ತಿದ್ದೇವೆ, ರೈತರನ್ನು ಮಾತನಾಡಿಸಿ ವಾಸ್ತವಿಕ ಸತ್ಯ ತಿಳಿಯಲಾಗುತ್ತಿದೆ ಎಂದು ತಿಳಿಸಿದರು.

