ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ನಾಗಠಾಣ ವಿಧಾನಸಭಾ ಮತಕ್ಷೇತ್ರದ ವಿಜಯಪುರ ನಗರ ವ್ಯಾಪ್ತಿಯಲ್ಲಿ ಬರುವ ೪೪ ಮತಗಟ್ಟೆಗಳ ಮತಗಟ್ಟೆ ಅಧಿಕಾರಿಗಳು ಇಲ್ಲಿಯವರೆಗೆ ೪೩,೩೧೧ ಗಣತಿ ನಮೂನೆ ವಿತರಿಸಿ, ೩೧,೦೬೩ ಗಣತಿ ನಮೂನೆಗಳನ್ನು ಡಿಜಿಟೈಜೇಶನ್ ಮಾಡಿದ್ದಾರೆ ಎಂದು ವಿಜಯಪುರ ತಹಶೀಲ್ದಾರ್ ತಿಳಿಸಿದ್ದಾರೆ.
ನಗರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ ೨೩೩ ರಿಂದ ೨೭೬ ರವರೆಗೆ ಒಟ್ಟು ೪೪ ಮತಗಟ್ಟೆಗಳಲ್ಲಿ ಜೂ. ೩೦ ರಿಂದ ಜು. ೨೯ರವರೆಗೆ ಈ ಸಾಧನೆ ಮಾಡಿದ್ದಾರೆ ಎಂದವರು ತಿಳಿಸಿದ್ದಾರೆ.
ಇನ್ನು ೧೨೨೪೮ ಗಣತಿ ನಮೂನೆಗಳನ್ನು ಮತದಾರರು ಭರ್ತಿ ಮಾಡಿ ಮರಳಿ ನೀಡದೆ ಇರುವುದರಿಂದ ಈ ನಮೂನೆಗಳು ಡಿಜಿಟೈಜೇಶನ್ ಆಗಿಲ್ಲ. ಈ ಕುರಿತು ಮಹಾನಗರ ಪಾಲಿಕೆಯ ಘನತಾಜ್ಯ ಸಂಗ್ರಹಣಾ ವಾಹನದಲ್ಲಿ ಮತ್ತು ಆಟೋರಿಕ್ಷಾಗಳಲ್ಲಿ ಎಲ್ಲ ಮತದಾರರಿಗೆ ಅರಿವು ಮೂಡಿಸಲಾಗಿದೆ. ಆದ್ಯಾಗ್ಯೂ ಕೆಲ ಮತದಾರರು ಬಿ.ಎಲ್.ಓ ಗಳಿಗೆ ಮರಳಿ ನಮೂನೆಗಳನ್ನು ಹಿಂತಿರುಗಿಸಿಲ್ಲ. ಕಾರಣ ಈಗಾಗಲೇ ಗಣತಿ ನಮೂನೆಗಳನ್ನು ಪಡೆದುಕೊಂಡ ಮತದಾರರು ಆ. ೧ರೊಳಗಾಗಿ ಗಣತಿ ನಮೂನೆಗಳನ್ನು ಬಿಎಲ್ ಒ ಅವರಿಗೆ ಹಿಂತಿರುಗಿಸಬೇಕು ಎಂದವರು ತಿಳಿಸಿದ್ದಾರೆ.
ಈಗಾಗಲೇ ನೇಮಕ ಮಾಡಲಾದ ಎಲ್ಲ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು (ಬಿ.ಎಲ್.ಎ) ಮತ್ತು ಎಲ್ಲ ರಾಜಕೀಯ ಪಕ್ಷದ ಪ್ರಮುಖರು ಮತದಾರರಿಗೆ ಸೂಕ್ತ ತಿಳುವಳಿಕೆ ನೀಡಿ ಗಣತಿ ನಮೂನೆಗಳನ್ನು ಅವಶ್ಯಕ ಮಾಹಿತಿಯೊಂದಿಗೆ ಹಿಂದಿರುಗಿಸಲು ಸಹಕರಿಸಬೇಕು ಎಂದವರು ತಿಳಿಸಿದ್ದಾರೆ.
