ಉದಯರಶ್ಮಿ ದಿನಪತ್ರಿಕೆ
ಚಡಚಣ: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಆರೋಗ್ಯ ಮಂದಿರವು ಕೇವಲ ಚಿಕಿತ್ಸಾ ಕೇಂದ್ರವಲ್ಲ, ಬದಲಿಗೆ ತಡೆಗಟ್ಟುವಿಕೆ, ಉತ್ತೇಜಕ, ಗುಣಪಡಿಸುವ, ಪುನರ್ವಸತಿ ಮತ್ತು ಉಪಶಮನಕಾರಿ ಸೇವೆಗಳನ್ನು ಒಳಗೊಂಡ ಒಂದು ಸಮಗ್ರ ಆರೋಗ್ಯ ಕೇಂದ್ರವಾಗಿದೆ. ದೇಶದ ಅಸ್ತಿತ್ವದಲ್ಲಿರುವ ಉಪ-ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಸಾರ್ವತ್ರಿಕವಾಗಿ ಉಚಿತ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಶಾಸಕ ವಿಠ್ಠಲ ಕಟಕದೋಂಡರವರು ಹೇಳಿದರು.
ಶುಕ್ರವಾರದಂದು ರೇವತಗಾಂವ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಜಿನಿಯರಿಂಗ್ ಘಟಕದ ವತಿಯಿಂದ ೧೫ ನೇ ಹಣಕಾಸಿನ ಆಯೋಗದಡಿಯಲ್ಲಿ ಆಯುಷ್ಮಾನ ಆರೋಗ್ಯ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು. ಈ ಕೇಂದ್ರಗಳು ಕೇವಲ ಕಾಯಿಲೆ ಗುಣಪಡಿಸುವುದಷ್ಟೇ ಅಲ್ಲದೆ, ತಾಯಿ-ಮಗುವಿನ ಆರೋಗ್ಯ, ಅಸಾಂಕ್ರಾಮಿಕ ರೋಗಗಳ ತಪಾಸಣೆ, ಮಾನಸಿಕ ಆರೋಗ್ಯ, ದಂತ, ಕಣ್ಣುಮತ್ತು ಕಿವಿ-ಮೂಗು-ಗಂಟಲು ಸಮಸ್ಯೆಗಳ ಜೊತೆಗೆ ಯೋಗ ಮತ್ತು ಆಯುಷ್ ಪದ್ಧತಿಗಳನ್ನು ಒಳಗೊಂಡ ಕ್ಷೇಮ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತೇವೆ. ತಡೆಗಟ್ಟುವಿಕೆ ಮತ್ತು ಪುನರ್ವಸತಿ ಆರೈಕೆಗೆ ಒತ್ತು ನೀಡುವ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸುವುದು ಈ ಯೋಜನೆಯ ಮುಖ್ಯ ಆಶಯವಾಗಿದೆ ಎಂದರು.
ಈ ವೇಳೆಯಲ್ಲಿ ಚಡಚಣ ಸಮುದಾಯ ಕೇಂದ್ರದ ಆಡಳಿತಾಧಿಕಾರಿಗಳಾದ ಡಾ. ಎ.ಎನ್.ಅಗರಖೇಡರವರು ಮಾತನಾಡುತ್ತ. ಆಯುಷ್ಮಾನ ಕೇಂದ್ರವು ಕೇವಲ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸೀಮಿತವಾಗದೆ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ, ಮೂಲಭೂತ ದಂತ ಚಿಕಿತ್ಸೆ, ಕಿವಿ ಮೂಗು-ಗಂಟಲು, ಕಣ್ಣಿನ ಆರೈಕೆ ಮತ್ತು ಮಾನಸಿಕ ಆರೋಗ್ಯ ಬೆಂಬಲದಂತಹ ವಿಸ್ತೃತ ಸೇವೆಗಳನ್ನು ಒಳಗೊಂಡಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಡಚಣ ಬ್ಲಾಕ್ ಕಾಂಗ್ರೇಸ ಅಧ್ಯಕ್ಷರಾದ ಆರ್.ಡಿ.ಹಕ್ಕೆ, ಗುತ್ತಿಗೆದಾರ ಐ.ಜಿ.ಬಿರಾದಾರ, ಗ್ರಾಪಂ ಪಿಡಿಒ ದೇವೇಂದ್ರ ವಾಗ್ಮೋಡೆ, ಕಾರ್ಯದರ್ಶಿ ಮಾದೇವ ಪೂಜಾರಿ, ಸುರೇಶ ಬಗಲಿ, ಅಡವೇಪ್ಪ ನಡಗೇರಿ, ಕಾಮೇಶ ಪಾಟೀಲ, ಮನೋಹರ ಹಿರೇಮಠ, ಶಿವಣ್ಣ ಪಾಂಡ್ರೆ, ನಾಗಪ್ಪ ನಂದಗೊಂಡೆ, ಸಮುದಾಯ ಆರೋಗ್ಯ ಅಧಿಕಾರಿ ಶ್ರೀಧರ ಬಂಡಗರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಿ.ತೇಲಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

