ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರಾಷ್ಟ್ರೀಯ ಹೆದ್ದಾರಿ 52ರ ಗಾಣದೇವಿ ಸರ್ಕಲ್‌ನಲ್ಲಿ ಪಿಎಸ್‌ಐ ಅಶೋಕ ನಾಯಕ ವಾಹನ ತಪಾಸಣೆ ವೇಳೆ ಅಪ್ರಾಪ್ತ ಬಾಲಕನೊಬ್ಬ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದು ಪತ್ತೆಯಾಯಿತು. ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ನಿವಾಸಿ ಬಾಲಕನ ತಂದೆ ಅಲ್ಲಾಭಕ್ಷ ಗುಡುಸಾಬ್ ಮುಳವಾಡ ವಿರುದ್ಧ ಮೋಟಾರು ವಾಹನ ಕಾಯ್ದೆ ಕಲಂ 199(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಸವನ ಬಾಗೇವಾಡಿ ನ್ಯಾಯಾಲಯವು ₹25,000 ದಂಡ ವಿಧಿಸಿ, ವಾಹನದ ನೋಂದಣಿಯನ್ನು 6 ತಿಂಗಳು ಅಮಾನತು ಮಾಡಲು ಆದೇಶಿಸಿದೆ.
ಈ ಕುರಿತು ಮಾತನಾಡಿದ ಕೊಲ್ಹಾರ ಪೊಲೀಸ್ ಠಾಣೆಯ ಪಿಎಸ್‌ಐ ಅಶೋಕ ನಾಯಕ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವುದು ಕಾನೂನು ಬಾಹಿರವಾಗಿದ್ದು, ಪೋಷಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವುದರಿಂದ ಅಪಘಾತಗಳ ಸಂಭವ ಹೆಚ್ಚಾಗುತ್ತಿದ್ದು, ಅವರ ಜೀವಕ್ಕೆ ಹಾಗೂ ಇತರರ ಸುರಕ್ಷತೆಗೆ ಅಪಾಯ ಉಂಟಾಗುತ್ತದೆ ಎಂದು ಹೇಳಿದರು.
ನಿಯಮ ಉಲ್ಲಂಘನೆ ಮಾಡಿದ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರು ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಕಾನೂನು ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತ ಸಂಚಾರಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

