ಲೇಖನ
– ಡಾ.ಅಪ್ಪು ಏಮ್
ಉಪನ್ಯಾಸಕರು
ಅಥಣಿ
ಉದಯರಶ್ಮಿ ದಿನಪತ್ರಿಕೆ
ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ಕೊರತೆಯನ್ನು ನೀಗಿಸುವಲ್ಲಿ ಅತಿಥಿ ಉಪನ್ಯಾಸಕರ ಸೇವೆ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ಯಾವುದೇ ಅಡಚಣೆಯಾಗದಂತೆ ಪಾಠ-ಪ್ರವಚನ ನಡೆಸುವುದು, ಪರೀಕ್ಷಾ ಕಾರ್ಯಗಳಲ್ಲಿ ಭಾಗವಹಿಸುವುದು, ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುವುದು ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಅವರು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಆದರೆ, ಇಷ್ಟೊಂದು ಮಹತ್ವದ ಸೇವೆ ಸಲ್ಲಿಸುತ್ತಿದ್ದರೂ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವಾ ಭದ್ರತೆಯ ಕೊರತೆ, ಕಡಿಮೆ ವೇತನ, ನೇಮಕಾತಿಯಲ್ಲಿನ ಅನಿಶ್ಚಿತತೆ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳ ಅಭಾವದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮರುನೇಮಕಾತಿಗಾಗಿ ಕಾಯುವ ಪರಿಸ್ಥಿತಿ ಅವರಲ್ಲಿ ಆತಂಕವನ್ನು ಉಂಟುಮಾಡುತ್ತದೆ. ಇದರಿಂದ ಅವರ ಕುಟುಂಬದ ಆರ್ಥಿಕ ಸ್ಥಿರತೆ ಹಾಗೂ ವೃತ್ತಿ ಭವಿಷ್ಯದ ಮೇಲೂ ಪರಿಣಾಮ ಬೀಳುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸಾವಿರಾರು ಅತಿಥಿ ಉಪನ್ಯಾಸಕರು ಉನ್ನತ ವಿದ್ಯಾರ್ಹತೆ ಹೊಂದಿದ್ದು, ಯುಜಿಸಿ ನಿಯಮಾನುಸಾರ ಅರ್ಹತೆಗಳನ್ನು ಪಡೆದಿದ್ದಾರೆ. ಹಲವರು ನೆಟ್, ಸೆಟ್ ಹಾಗೂ ಪಿಎಚ್.ಡಿ. ಪದವಿಗಳನ್ನು ಹೊಂದಿದ್ದರೂ, ಅವರಿಗೆ ಇನ್ನೂ ಶಾಶ್ವತ ಉದ್ಯೋಗದ ಭರವಸೆ ದೊರೆತಿಲ್ಲ. ಹಲವಾರು ವರ್ಷಗಳಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಪ್ರತಿ ವರ್ಷ ಹೊಸದಾಗಿ ಅರ್ಜಿ ಸಲ್ಲಿಸಿ ನೇಮಕಾತಿಗಾಗಿ ಕಾಯಬೇಕಾಗಿರುವುದು ವಿಷಾದನೀಯ ಸಂಗತಿಯಾಗಿದೆ.
ಇತ್ತೀಚೆಗೆ ಅಧಿಕಾರ ಸ್ವೀಕರಿಸಿರುವ ನೂತನ ಉನ್ನತ ಶಿಕ್ಷಣ ಸಚಿವರ ಮೇಲೆ ಅತಿಥಿ ಉಪನ್ಯಾಸಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಉನ್ನತ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಜೊತೆಗೆ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೂ ಆದ್ಯತೆ ನೀಡಬೇಕು ಎಂಬುದು ಅವರ ಒತ್ತಾಯವಾಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅತಿಥಿ ಉಪನ್ಯಾಸಕರ ಮನೋಸ್ಥೈರ್ಯ ಅತ್ಯಗತ್ಯ. ಆದ್ದರಿಂದ ಸೇವಾ ಭದ್ರತೆ ಒದಗಿಸುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ.
ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆಗಳಲ್ಲಿ ಸೇವಾ ಭದ್ರತೆ,ಗೌರವಯುತ ಸಂಭಾವನೆ, ಹಾಗೂ ವಾರ್ಷಿಕ ವೇತನ ಪರಿಷ್ಕರಣೆ, ಅನುಭವಕ್ಕೆ ಮಾನ್ಯತೆ, ವೈದ್ಯಕೀಯ ಸೌಲಭ್ಯಗಳು ಹಾಗೂ ಇತರೆ ಸಾಮಾಜಿಕ ಭದ್ರತಾ ಯೋಜನೆಗಳ ವಿಸ್ತರಣೆ ಸೇರಿವೆ. ಸೇವಾ ಅವಧಿಗೆ ಅನುಗುಣವಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ.
ಉನ್ನತ ಶಿಕ್ಷಣದ ಗುಣಮಟ್ಟವು ಕೇವಲ ಕಟ್ಟಡಗಳು ಅಥವಾ ಮೂಲಸೌಕರ್ಯಗಳಿಂದ ಮಾತ್ರ ಹೆಚ್ಚಾಗುವುದಿಲ್ಲ. ಉತ್ತಮ, ಅನುಭವಿ ಹಾಗೂ ನಿಷ್ಠಾವಂತ ಅತಿಥಿ ಉಪನ್ಯಾಸಕರಿಂದಲೇ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ. ಅತಿಥಿ ಉಪನ್ಯಾಸಕರು ತಮ್ಮ ಜ್ಞಾನ, ಅನುಭವ ಮತ್ತು ಸಮರ್ಪಣಾ ಮನೋಭಾವದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ. ಅವರ ಸೇವೆಯನ್ನು ಗೌರವಿಸುವುದು ಎಂದರೆ ಶಿಕ್ಷಣ ವ್ಯವಸ್ಥೆಯನ್ನು ಗೌರವಿಸಿದಂತೆಯೇ ಆಗುತ್ತದೆ.
ನೂತನ ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಪ್ರತಿನಿಧಿಗಳೊಂದಿಗೆ ನೇರವಾಗಿ ಚರ್ಚಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಶಾಶ್ವತ ಪರಿಹಾರದ ದಿಕ್ಕಿನಲ್ಲಿ ಸ್ಪಷ್ಟ ನೀತಿಯನ್ನು ರೂಪಿಸಬೇಕು. ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಂಡರೆ ಸಾವಿರಾರು ಉಪನ್ಯಾಸಕರ ಕುಟುಂಬಗಳಿಗೆ ನೆಮ್ಮದಿ ದೊರೆಯುವುದರ ಜೊತೆಗೆ ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರವೂ ಮತ್ತಷ್ಟು ಬಲಿಷ್ಠವಾಗಲಿದೆ.
ಉನ್ನತ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಕನಸು ನನಸಾಗಬೇಕಾದರೆ ಮೊದಲು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ಅತಿಥಿ ಉಪನ್ಯಾಸಕರ ಸೇವೆಗೆ ಗೌರವ, ಭದ್ರತೆ ಮತ್ತು ನ್ಯಾಯ ಒದಗಿಸುವ ಮೂಲಕ ನೂತನ ಉನ್ನತ ಶಿಕ್ಷಣ ಸಚಿವರು ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿ ಎಂಬುದು ಶಿಕ್ಷಣ ವಲಯದ ಹಾಗೂ ಅತಿಥಿ ಉಪನ್ಯಾಸಕರ ಏಕೈಕ ಆಶಯವಾಗಿದೆ.


