ಲೇಖನ
– ಜಯಶ್ರೀ.ಜೆ.ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಪ್ರಿಯ ಹೃದಯದರಸಿ ರೂಪಾ
ನೀನು ನನ್ನ ಮನದರಸಿ. ಸಪ್ತಸಾಗರ ದಾಟಿ ಬಂದರೂ ಸಿಗದ ಅಪರೂಪದ ರೂಪವತಿ. ಶುಭ್ರ ಹಗಲು ನಾಚುವಂತಹ ಅಂದಗಾತಿ. ಚೆಂದದ ಚೆಲುವೆಯರೆಲ್ಲ ನಿನ್ನ ಮುಂದೆ ತೀರ ತೀರ ಸಪ್ಪೆ ಎನಿಸುವಂತಹ ಸೊಗಸುಗಾತಿ. ಮಾತುಗಳೇ ಇಲ್ಲದ ಮೌನದಲ್ಲೂ ಎಲ್ಲವನ್ನೂ ಹೇಳಬಲ್ಲ ಮಾಯಗಾತಿ. ಹೃದಯ ಕದ್ದ ಚೋರಿ ಅಷ್ಟೇ ಅಲ್ಲ ಹೃದಯ ಸಾಮ್ರಾಜ್ಯದ ಅರಸಿ. ಒಲವನು ಉಣಬಡಿಸುತ್ತ ಜೀವನ ಸಂಭ್ರಮಿಸುವ ಕಲೆ ಕಲಿಸಿದ ರಾಜಕುಮಾರಿ. ಆ ದೇವರು ಪುರುಸೊತ್ತು ಮಾಡಿಕೊಂಡು ತಿದ್ದಿ ತೀಡಿ ಮಾಡಿದ ಶ್ವೇತ ಭಾವದ ಶ್ವೇತಾಂಬರಿ. ಸರಳ ಜೀವನ ಉನ್ನತ ಚಿಂತನೆಯ ಕರುಣಾಮಯಿ. ಮೃದು ಸ್ವಭಾವದ ಕ್ಷಮಯಾಧರಿತ್ರಿ.. ನಿನ್ನ ಅಂದ ಚೆಂದಕೆ ಮರುಳಾಗದವರು ಯಾರೂ ಇಲ್ಲ. ಹೀಗಾಗಿಯೇ ನನ್ನ ಹೃದಯಂಗಳದಲ್ಲಿ ಒಲವಿನ ಬಳ್ಳಿ ನನ್ನ ಅರಿವಿಗೆ ಬರದಂತೆ ಆಕಾಶದತ್ತ ಮುಖ ಮಾಡಿದೆ. ಕಂಗಳ ಹೊಳಪಿಗೆ ಮುದ್ದಾದ ದುಂಡು ಮುಖಕ್ಕೆ ಮುಗ್ದ ನಗುವಿಗೆ ಸುಮಧುರ ಕಂಠಕೆ ಸ್ನೇಹ ಸಿಂಚನಕೆ ಮರುಳಾದೆ.
ಕನಸುಗಳೇ ಜೀವನದ ಜೀವ. ಕನಸಿಲ್ಲದೇ ಜೀವನವನ್ನು ಮುಂದೂಡುವುದು ಬಲು ಕಷ್ಟ. ಕನಸುಗಳು ಅಷ್ಟು ಸಲೀಸಾಗಿ ಈಡೇರುವುದಿಲ್ಲ. ಕೆಲವೊಮ್ಮೆ ವಿಧಿ ನಮ್ಮ ಕನಸುಗಳನ್ನು ಮುರಿಯುತ್ತದೆ. ಇನ್ನೂ ಕೆಲವೊಮ್ಮೆಯಂತೂ ನುಚ್ಚುನೂರು ಮಾಡುತ್ತದೆ. ಹೀಗೆಲ್ಲ ಇದ್ದಾಗ್ಯೂ ಕನಸುಗಳನ್ನು ಎಂದೆಂದಿಗೂ ಒಣಗಲು ಬಿಡಬಾರದೆಂದು ಕಲಿಸಿಕೊಟ್ಟವಳು ನೀನು. ಅಪ್ಪ ಸಾಲ ಮಾಡಿ ಬೀಜ ಖರೀದಿಸಿ ಪ್ರತಿದಿನ ಆಕಾಶ ನೋಡಿದ. ಮಳೆರಾಯ ಇಳೆಗೆ ಇಳಿಯಲೇ ಇಲ್ಲ. ಹೊಟ್ಟೆಯ ಹಿಟ್ಟಿಗೂ ಪರದಾಡುವ ಪರಿಸ್ಥಿತಿ ಬಂದಾಗ ಬೆಳೆಯನ್ನು ಕಾಣದೆ ಕಂಗಾಲದ. ಸಾಲ ನೀಡಿದವರು ಮನೆ ಮುಂದೆ ಬಂದು ನಿಂತಾಗ ಆದ ಅವಮಾನ ತಾಳದೇ ನೇಣಿಗೆ ಶರಣಾದ. ಹುಟ್ಟಿನಿಂದ ಕಷ್ಟದಲ್ಲಿಯೇ ಮುಳುಗಿದ್ದ ಅಪ್ಪ ನನಗೆ ಬೇಕಾದ ಶಿಕ್ಷಣ ಕೊಡಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನನ್ನನ್ನು ಮುದ್ದಿನಿಂದ ಸಾಕಿದ ಅಪ್ಪನನ್ನು ಇನ್ಮೇಲೆ ಚೆನ್ನಾಗಿ ನೋಡಿಕೊಳ್ಳಬೇಕೆನ್ನುವ ಮಹದಾಸೆಯಿಂದ ಉದ್ಯೋಗ ಅರಸಲು ಆರಂಭಿಸಿದ್ದೆ. ಮನೆಯ ಯಜಮಾನನೇ ಇಲ್ಲವಾದ ಮೇಲೆ ಪೂರಾ ಪೂರಾ ಕುಗ್ಗಿದ್ದೆ.

ಬದುಕಿನಲ್ಲಿ ಕೈಚೆಲ್ಲಿದ ಕ್ಷಣಗಳವು. ಆಗ ನನ್ನ ಜೀವನದ ಗುಡಿಸಲಿಗೆ ಬಲಗಾಲಿಟ್ಟು ಒಳಬಂದವಳೇ ನೀನು. ಮಾಮರ ಚಿಗುರಿಗೆ ಜೀವ ಪಡೆಯುವ ಕೋಗಿಲೆಯಂತೆ ಆದೆ ನಾನು. ಕನಸಿನ ಬೇರು ಜೀವಂತವಾಗಿದ್ದರೆ ಮತ್ತೆ ಚಿಗುರುತ್ತದೆ. ಜೀವನದ ಮೇಲಿನ ನಂಬಿಕೆ ಜೀವಂತವಾಗಿದ್ದರೆ, ಜೀವನ ಅರಳುತ್ತದೆ. ಚಿಂತಿಸಬೇಡ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಭರವಸೆ ತುಂಬಿದ ನಿನ್ನ ಮಾತುಗಳು ಇಂದಿಗೂ ಅನುರುಣಿಸುತ್ತಿವೆ. ಮಾಡುವ ಕೆಲಸದ ಹಿಂದೆ ಗಿರಕಿ ಹೊಡೆಯುವುದನ್ನು ಕಲಿಸಿದೆ. ಸಹನೆ ಇದ್ದರೆ ಜೀವನ ಒಣಗದು. ಎಂದೆಲ್ಲ ಬುದ್ಧಿ ಮಾತು ಹೇಳಿದೆ. ವಿಜಯ ಪಥದಲ್ಲಿ ನಡೆಯಲು ಕಲಿಸಿದ ಗುರು ನೀನು. ಮಳೆಗಾಲಕ್ಕೆ ಸೋರದ, ಬಿರುಗಾಳಿಗೆ ಬೀಳದ ಗಟ್ಟಿ ಜೀವನ ಕಟ್ಟಲು ಹೇಳಿಕೊಟ್ಟೆ. ಒಲವಿಗೆ ಹೊಸ ವ್ಯಾಖ್ಯಾನ ಬರೆದಿದ್ದೆ. ಇನ್ನೆಂದೂ ಬದುಕನ್ನು ಚೆನ್ನಾಗಿ ಜೋಡಿಸಲು ಸಾಧ್ಯವಿಲ್ಲ ಎಂದು ನೊಂದುಕೊಂಡವನ ಪಾಲಿಗೆ ನಿನ್ನೊಲವು ವರವಾಗಿ ಸಿಕ್ಕಿತ್ತು. ಇದ್ದಕ್ಕಿದ್ದಂತೆ ಎರಡೆರಡು ಸಂತೋಷ ಒಟ್ಟಿಗೆ ಸಿಕ್ಕಂತಾಗಿತ್ತು. ಮಾತಿನಲ್ಲಿ ಹೇಳಲಾಗದಷ್ಟು ಖುಷಿಪಟ್ಟಿದ್ದೆ. ದಿನ ರಾತ್ರಿ ಮನಸ್ಸು ಸ್ಮೃತಿಯ ಬಾಗಿಲು ತೆರೆದು ನಿನ್ನೊಂದಿಗೆ ಕಳೆದ ರಸನಿಮಿಷಗಳ, ನೆನಪುಗಳ ಹೆಕ್ಕುತ್ತ ಹಾಸಿಗೆಯ ಮೇಲೆ ಉರುಳಾಡುತ್ತಿತ್ತು. ನೆನಪುಗಳ ಅಲೆಯಲ್ಲಿ ಮೈ ತನ್ನಷ್ಟಕ್ಕೆ ತಾನೆ ಬೆಚ್ಚಗಾಗುತ್ತಿತ್ತು.
ಅದೊಂದು ಮುಸ್ಸಂಜೆ ಊರಿನ ಹೊರವಲಯದಲ್ಲಿ ಕಲ್ಲು ನೆಲದೊಳಗೆ ಕುಳಿತು ನಿನಗಾಗಿ ಕಾಯುತ್ತಿದ್ದೆ. ಶ್ವೇತ ಬಣ್ಣದವಳ, ಗುಲಾಬಿ ಬಣ್ಣದ ಎಸಳಿನ ತುಟಿಯವಳ ನೆನೆಯುತ್ತಿದ್ದೆ. ಆ ನೆನಪು ಮನಸ್ಸನ್ನು ಸುಂದರ ಕನಸುಗಳೊಂದಿಗೆ ತೋಯಿಸಿತ್ತು. ನೀಳ ತೋಳನ್ನು ಬಯಸಿತ್ತು. ವಾಸ್ತವದ ಪರಿವೆಯಿಲ್ಲದೇ, ನನ್ನದೇ ಲೋಕದಲ್ಲಿ ಸಂತೋಷದಿಂದ ಆಕಾಶದಲ್ಲಿ ತೇಲುತ್ತಿದ್ದಾಗಲೇ ನಿನ್ನ ಆಗಮನವಾಯಿತು. ಮೊದಲ ಸಲ ನಿನ್ನ ಪಕ್ಕ ಭುಜಕ್ಕೆ ಭುಜ ತಾಗಿಸಿ ಕುಳಿತುಕೊಳ್ಳುವ ಬಹುದಿನದ ಕನಸು ನನಸಾದಂತಾಗಿತ್ತು. ನನಗೆ ಇಂತಹ ಒಂದು ಅವಕಾಶ ಸಿಗಬಹುದೆಂಬ ಕಲ್ಪನೆ ಸಹ ನನಗಿರಲಿಲ್ಲ. ಅಂದು ನಿನ್ನ ಹುಟ್ಟುಹಬ್ಬವಾಗಿತ್ತು. ಆದರೆ ನಿನ್ನ ರೂಪದಲ್ಲಿ ನನಗೆ ಅತ್ಯಮೂಲ್ಯ ಕಾಣಿಕೆ ಸಿಕ್ಕಿತ್ತು. ಮನೆಯಲ್ಲಿ ಸಿಕ್ಕಿದ್ದರೆ ದೂರದಿಂದಲೇ ನೋಡಿ ಸಂತೋಷ ಪಡಬೇಕಾಗುತ್ತಿತ್ತು. ಆದರೆ ಈಗ ನನ್ನ ತೀರ ಹತ್ತಿರದಲ್ಲಿ ಕುಳಿತಿದ್ದು ನಿನ್ನ ಇರುವಿಕೆ ನನ್ನ ಆನಂದವನ್ನು ಇಮ್ಮಡಿಗೊಳಿಸಿತ್ತು. ಹೃದಯ ಹೊರ ಬಂದು ಬಿಡುವಷ್ಟು ಜೋರಾಗಿ ನೃತ್ಯ ಮಾಡುತ್ತಿತ್ತು.

ಬೆಳದಿಂಗಳ ಚುಕ್ಕಿಯು ಮೆಲ್ಲನೆ ಭೂಮಿಗೆ ಜಾರುತ್ತಿತ್ತು. ಮೊದಲ ಮಳೆಯ ಮೊದಲ ಹನಿಯೊಂದು ಇಳೆಯ ಚುಂಬಿಸಿತು. ಬರಬರುತ್ತ ರಭಸ ಹೆಚ್ಚಿಸಿಕೊಂಡಿತು. ಮೈ ಒದ್ದೆಯಾಯಿತು. ಮೈಯಲ್ಲಿ ನಡುಕ ಶುರುವಾಯಿತು. ಒದ್ದೆಯಾದ ದಟ್ಟ ಕಪ್ಪು ಕೂದಲನು ಒರೆಸಿಕೊಳ್ಳುವಲ್ಲಿ ನಿರತಳಾದ ನಿನ್ನ ಬೆರಳು ನನ್ನ ಸೋಕಿತು ಮೈಯೆಲ್ಲ ಜುಮ್ಮೆಂದಿತು. ನೀ ಮುಡಿಗೆ ಮುಡಿದ ಪಾರಿಜಾತದ ಘಮಲು ಘಮ್ಮೆಂದಿತು. ನಿನ್ನ ಮುಖ ಕಮಲದಲ್ಲಿದ್ದ ಮಂದಹಾಸ ಮತ್ತಷ್ಟು ಹಿಗ್ಗಿತು. ಮನದಲ್ಲಿ ಮೆಲ್ಲನೇ ಒಲವಿನ ಅಮಲೇರಿತು. ನನಗರಿವಿಲ್ಲದೆ ನಿನ್ನ ಸನಿಹ ಸರಿದೆ. ಅಂತಹ ಸಲುಗೆ ಕಂಡಿರದ ನೀನು ಮುಜುಗರದಿಂದ ಮುದ್ದೆಯಾದೆ. ಸಂಕೋಚ ಬೇಡ ಸಖಿ ನಾನು ನಿನ್ನ ಆಪ್ತ ಸಖ ಎಂದೆ. ಕೆಲ ನಿಮಿಷಗಳಲ್ಲಿ ಇಬ್ಬರ ನಡುವಿನ ಅಂತರ ಕರಗಿ ಹೋಗಿತ್ತು. ಎದೆಗೆ ಅವುಚಿಕೊಂಡೆ. ಬಟ್ಟಲು ಕಂಗಳ, ಸೇಬಿನಂತಿರುವ ಕೆನ್ನೆಗಳ ಇಂಚಿಂಚು ಬಿಡದೆ ನನ್ನ ಅಧರಗಳು ಮುತ್ತಿಕ್ಕತೊಡಗಿದವು. ಈರ್ವರ ತೋಳುಗಳು ಬಾಚಿ ತಬ್ಬಿದ್ದವು. ನನ್ನ ಮುತ್ತುಗಳಿಗೆ ಪ್ರತಿಯಾಗಿ ಎರಡೂ ಕಂಗಳಿಗೆ ಬಿಡದೇ ನೀನಿತ್ತ ಮೃದು ಸಿಹಿಚುಂಬನಕ್ಕೆ ರೋಮಾಂಚಿತನಾದೆ. ಉಬ್ಬಿದೆದೆಗೆ ಕೈ ಹಾಕಲು ಮನಸ್ಸು ಒತ್ತಾಯಿಸುತ್ತಿತ್ತು. ಮನಸ್ಸಿನ ಚೆಲ್ಲಾಟದ ಭಾವನೆಗೆ ತುಂಬಾ ಪ್ರಯಾಸದಿಂದ ಕಡಿವಾಣ ಹಾಕಿದೆ. ನೀ ನೀಡಿದ ದೀರ್ಘ ಆಲಿಂಗನ ಹಿತ ತಂದಿತ್ತು. ಬಿಟ್ಟ ಕಣ್ಣು ಬಿಟ್ಟಂತೆ ನಮ್ಮೆಡೆ ನೋಡುತ್ತಿದ್ದ ಪಕ್ಕದಲ್ಲಿದ್ದ ಚಿಕ್ಕ ಜಲಧಾರೆ ಮೌನವಾಗಿ ಹುಟ್ಟಿ ಜಿನುಗುತ್ತಿತ್ತು. ನಮ್ಮಿಬ್ಬರ ಸರಸ ಸಲ್ಲಾಪ ಕಂಡು ಮುಗಳ್ನಗುತ್ತಿತ್ತು. ಒಲ್ಲದ ಮನಸ್ಸಿನಿಂದ ಕಾಲುಗಳು ಮನೆಯೆಡೆ ಹೆಜ್ಜೆ ಹಾಕಿದ್ದು ಸುಂದರ ನೆನಪು.
ಈ ಹೊತ್ತಿನ ದಿನಗಳಲ್ಲಿ ನಿನ್ನ ಹಾಗೆ ಇರುವವರು ತುಂಬ ವಿರಳ. ಮಾತುಗಳಿಗೆ ಬಣ್ಣ ಬಳಿದು ಕ್ಷಣಕ್ಷಣಕ್ಕೂ ಹೊರಳಸುವ ನಾಲಗೆಗಳೇ ಬಹಳ. ದೋಷಗಳ ಹುಡುಕುವುದರಲ್ಲೇ ಕಳೆದು ಹೋದವರ ನಡುವೆ ಹಂಸದಂತಿರುವ ನೀನು ಬಲು ಆಪರೂಪದವಳು. ನನ್ನ ಜೀವನದಲ್ಲಿ ದೀಪ ಹಚ್ಚಿದ ಕೈಗಳು. ಕೋಟಿ ಕೋಟಿ ಜನ್ಮದ ಪುಣ್ಯವೇನೋ ನಿನ್ನೀ ಒಲವಿನ ಆಸರೆ ದೊರೆಯಿತು ನನಗೆ. ಅವ್ವ ನಿನ್ನನ್ನು ತನ್ನ ಸೊಸೆಯಾಗಿ ಮನೆ ತುಂಬಿಸಿಕೊಳ್ಳಲು ಹಸಿರು ನಿಶಾನೆ ತೋರಿದ್ದಾಳೆ. ನಿನ್ನಪ್ಪ ಅಮ್ಮ ನನ್ನನ್ನು ಅಳಿಯನನ್ನಾಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಹೆತ್ತವರ ಸಮ್ಮುಖದಲ್ಲಿ ಹಸೆಮಣೆಯೇರೋಣ ಸಪ್ತಪದಿ ತುಳಿಯೋಣ. ಹೂ ಎದೆಯ ಚುಂಬಿಸಲು ಇಬ್ಬನಿಯಾಗಿ ಕಾದಿರುವೆ. ಅರ್ಧಕ್ಕೆ ನಿಲ್ಲಿಸಿರುವ ಸರಸದಾಟವನು ದಿನವೂ ಅರ್ಧರಾತ್ರಿಯಲ್ಲಿ ಪೂರ್ತಿಗೊಳಿಸೋಣ. ವರ್ಷ ತುಂಬುವುದರೊಳಗೆ ನನ್ನವ್ವನ ಕೈಗೊಂದು ಕಿಲಕಿಲ ನಗುವ ಮುದ್ದು ಮಗುವನು ನೀಡೋಣ. ಬಂದು ಬಿಡು ಷೋಡಸಿ.
ಇಂತಿ ನಿನ್ನ ಹೃದಯದರಸ
ರೂಪೇಶ


