ಜೂ.೨೪ ಹಾಗು ೨೫ರಂದು ಸ್ಥಳ ಪರಿಶೀಲಿಸಲಿರುವ ವಿಶೇಷ ತಂಡ | ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಐತಿಹಾಸಿಕ ಕರೇಜ್ ವ್ಯವಸ್ಥೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಂಡಿಯನ್ ಹೆರಿಟೇಜ್ ಸಿಟಿ ನೆಟ್ ವರ್ಕ್ ಫೌಂಡೇಶನ್ ಸಂಸ್ಥೆ (ಡಿಪಿಆರ್) ಕ್ರಿಯಾ ಯೋಜನೆ ಸಿದ್ಧಪಡಿಸಲು ಜೂ.೨೪ ಹಾಗು ೨೫ರಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಟಗಿ ಪೆಟ್ರೋಲ್ ಪಂಪ್ ಬಳಿ ಇರುವ ವೆಂಟ್ ಸ್ವಚ್ಛಗೊಳಿಸುವಂತೆ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿರುವ ಐತಿಹಾಸಿಕ ಕರೇಜ್ ವ್ಯವಸ್ಥೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕೆಂಬ ಹಿನ್ನೆಲೆಯಲ್ಲಿ ಕರೇಜ್ ಮಾರ್ಗದಲ್ಲಿ ಕೈಗೊಳ್ಳಬೇಕಾಗಿರುವ ಸುರಕ್ಷತಾ ಕ್ರಮಗಳ ಕುರಿತು ಇಟಗಿ ಪೆಟ್ರೋಲ್ ಬಂಕ್ ಹತ್ತಿರ ಕರೇಜ್ ವೆಂಟ್ಸ್ ಹಾಗೂ ಮಾರ್ಗ ಪರಿಶೀಲಿಸಿ ಅವರು ಮಾತನಾಡಿದರು.
ಚರಂಡಿ ನೀರು ವೆಂಟ್‌ನಲ್ಲಿ ಹರಿಯುವುದನ್ನು ತಡೆಗಟ್ಟಲು ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
೨೦೨೪-೨೫ನೇ ಸಾಲಿನ ಆಯವ್ಯಯದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರ ಪ್ರದೇಶದಲ್ಲಿರುವ ಐತಿಹಾಸಿಕ ಕರೇಜ್ -ನೀರು ಸರಬರಾಜು ಸುರಂಗ ಮಾರ್ಗ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಪುರಾತತ್ವ, ವಸ್ತು ಸಂಗ್ರಾಹಾಲಯ ಮತ್ತು ಪರಂಪರೆ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಕರೇಜ್ ಪುನಶ್ವೇತನ ಮತ್ತು ಅಭಿವೃದ್ಧಿಗೊಳಿಸಲು ಡಿಪಿಆರ್ ತಯಾರಿಸುವ ಕಾರ್ಯದಲ್ಲಿ ನೈಪುಣ್ಯತೆ ಹೊಂದಿರುವ ಐಎಚ್ ಸಿಎನ್ ಎಫ್ ಸಂಸ್ಥೆಯವರಿಂದ ವಿಸ್ತೃತ ಡಿಪಿಆರ್ ಯೋಜನಾ ವರದಿ ಸಿದ್ಧಪಡಿಸಲು ನೇಮಕ ಮಾಡಿದೆ ಎಂದರು.
ಆ ನುರಿತ ತಂಡ ಜೂ.೨೪ ಮತ್ತು ೨೫ ರಂದು ಸ್ಥಳ ಪರಿಶೀಲನೆ ಮಾಡಿ ವರದಿ ಮಾಡುವುದಕ್ಕೆ ನಗರಕ್ಕೆ ಆಗಮಿಸುತ್ತಿದ್ದು, ಈ ಕರೇಜ್ ವ್ಯವಸ್ಥೆಯನ್ನು ಪರಿಶೀಲನೆ ಮಾಡಲು ಸೂಕ್ತವಾದ ಸ್ಥಳ ಗುರುತಿಸಿ ಸುರಂಗ ಮಾರ್ಗದಲ್ಲಿ ತಂಡದ ವೀಕ್ಷಣೆಗೆ ವ್ಯವಸ್ಥೆ ಕೈಗೊಳ್ಳಬೇಕಿದೆ. ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವಕ್ಷಣಾ ಇಲಾಖೆ, ಮಹಾನಗರ ಪಾಲಿಕೆ, ಅಗ್ನಿಶಾಮಕ ಇಲಾಖೆ, ನಗರ ಕುಡಿಯುವ ನೀರು ಸರಬರಾಜು ಮತ್ತು ಚರಂಡಿ ಇಲಾಖೆ ನೇತೃತ್ವದಲ್ಲಿ ತಂಡ ನೇಮಕ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿಷೇಕ ಸೆಹರಾ, ಮಹಾನಗರ ಪಾಲಿಕೆ, ಸಹಾಯಕ ಸಂರಕ್ಷಣಾಧಿಕಾರಿಗಳು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪಾಲಿಕೆಯ ಎಸ್ ಇ ತಿಮ್ಮಪ್ಪ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ ನಲಿಗಾರ್, ಪರಿಸರ ಅಭಿಯಂತರ ಹಳ್ಳಿ ಅಭಿಷೇಕ್, ಪ್ರವಾಸಿ ಅಧಿಕಾರಿ ಬಿ.ಹೆಚ್. ಕುಡಪಲಿ, ಅನೀಲಕುಮಾರ, ಪೀಟರ್ ಅಲೆಕ್ಷಾಂಡರ್, ಡಾ. ಅಮೀನ ಹುಲ್ಲೂರ, ಧರ್ಮೇಂದ್ರ ಜಾಧವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

