ವೀಣಾಂತರಂಗ
- ವೀಣಾ ಎಚ್ ಪಾಟೀಲ್, ಮುಂಡರಗಿ-ಗದಗ
ಬೇಲೂರಿನ ದೇವಾಲಯದ ಒಳಾವರಣ ಮತ್ತು ಹಳೆಬೀಡಿನ ದೇವಾಲಯದ ಹೊರಾವರಣ ನೋಡಿದರೆ ಜಗತ್ತಿನ ಯಾವುದೇ ಶಿಲ್ಪ ಕಲೆಯ ಸ್ಮಾರಕವು ಇದರ ಮುಂದೆ ಸರಿದೂಗುವುದಿಲ್ಲ. ಇಡೀ ಜಗತ್ತು ಅಂಧಕಾರದಲ್ಲಿರುವಾಗ ಗುಲಾಮಗಿರಿಯ ದಾಸ್ಯದ ನೆಲೆಬೀಡಾಗಿದ್ದಾಗ ಭಾರತವು 64 ವಿದ್ಯೆಗಳಿಂದ ಪ್ರಕಾಶಿಸುತ್ತಿತ್ತು. ಕಲೆ, ಸಂಸ್ಕೃತಿ, ಸಾಹಿತ್ಯ, ಅಧ್ಯಯನ, ವೇದ, ಆಗಮ, ಪುರಾಣಗಳು ನಮ್ಮ ಜ್ಞಾನ ಸಿರಿಯನ್ನು ಹೆಚ್ಚಿಸಿದ್ದವು. ಮಾನವೀಯ ಮೌಲ್ಯಗಳು ಭಾರತಕ್ಕೆ ಕಳಶಪ್ರಾಯ ಎನಿಸಿದ್ದವು.. ಇಡೀ ಜಗತ್ತಿನ ಜನರು ಭಾರತಕ್ಕೆ ಜ್ಞಾನ, ವಿಜ್ಞಾನ, ಲಲಿತಕಲೆ ಮತ್ತು ಇತರ ವಿದ್ಯಗಳ ಜೊತೆ ಜೊತೆಗೆ ಶಾಂತಿಯನ್ನರಸಿ ಬರುತ್ತಿದ್ದರು. ವಸುದೈವ ಕುಟುಂಬಕಂ ಎಂಬ ಉಕ್ತಿಯಂತೆ ಭಾರತವು ವಿಶ್ವ ಭ್ರಾತೃತ್ವವನ್ನು ಸಾರುವ ಏಕೈಕ ದೇಶವಾಗಿತ್ತು. ಅದರಲ್ಲೂ ಹೊಯ್ಸಳ, ರಾಷ್ಟ್ರಕೂಟ, ಚಾಲುಕ್ಯ, ಪಲ್ಲವ ಮುಂತಾದ ರಾಜವಂಶಗಳು ಯುದ್ಧದಲ್ಲಿನ ತಮ್ಮ ಗೆಲುವಿನ ಸಂಭ್ರಮದ ವಿಜಯ ಸಂಕೇತಗಳಾಗಿ ದೇವಾಲಯಗಳನ್ನು ನಿರ್ಮಿಸಿ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನಿಂತರು. ಈ ಎಲ್ಲ ಶಿಲ್ಪ ಕಲೆಯ ಬೀಡುಗಳಲ್ಲಿ ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳು ಮೇರು ಶಿಖರವಾಗಿ ನಿಲ್ಲುತ್ತವೆ. ಈ ಎರಡು ದೇವಾಲಯಗಳನ್ನು ನಿರ್ಮಿಸಿದ ಶಿಲ್ಪಿ ಜಕಣಾಚಾರಿಯು ಅಮರಶಿಲ್ಪಿ ಎಂದು ಜಗವೇ ಕೊಂಡಾಡುವಂತಹ ಶಿಲ್ಪ ಕಲೆಯನ್ನು ನಮಗೆ ಕಾಣಿಕೆಯಾಗಿ ನೀಡಿದ್ದಾನೆ.
ವಿಷ್ಣುವರ್ಧನ ಮಹಾರಾಜನು ತನ್ನ ಉನ್ನತಿಯ ಕಾಲದಲ್ಲಿ ಬೇಲೂರು ಮತ್ತು ಹಳೇಬೀಡುಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದನು. ಹಾಗೆ ದೇವಾಲಯಗಳನ್ನು ನಿರ್ಮಿಸಲು ಆತ ಶಿಲ್ಪಿಗಳಿಗೆ ಹಾಕಿದ್ದ ಶರತ್ತು ಎಂದರೆ …ಹಿಂದೆ ಯಾರೂ ಇಂತಹ ದೇವಾಲಯಗಳನ್ನು ಕಟ್ಟಿರಬಾರದು, ಮುಂದೆ ಯಾರೂ ಕಟ್ಟಲೂಬಾರದು ಎಂದು. ಆಗ ಇನ್ನೂ ಬೆಳಕಿಗೆ ಬಾರದ ಜಕಣಾಚಾರಿಯು ಈ ಮಹಾ ಮಣಿಹಕ್ಕೆ ತನ್ನನ್ನು ತಾನು ಸಮರ್ಪಿಸಿಕೊಳ್ಳಲು ನಿರ್ಧರಿಸಿದ ಜಕಣಾಚಾರಿಯು ಉಳಿದೆಲ್ಲ ಮಹಾನ್ ಶಿಲ್ಪಿಗಳಿಗೆ ಜೊತೆಯಾದನು. ಆರಂಭದಲ್ಲಿ ಜಕಣಾಚಾರಿಗೆ ಕೇವಲ ಹೊರಾವರಣದ ಚಿಕ್ಕ ಪುಟ್ಟ ಕೆಲಸಗಳನ್ನು ನೀಡುತ್ತಿದ್ದ ಮಹಾಶಿಲ್ಪಿಗಳು ಮುಂದೆ ಆತನ ಕೈಚಳಕಕ್ಕೆ ಮೆಚ್ಚಿ ಇಡೀ ದೇವಸ್ಥಾನದ ಹೊರಾವರಣವನ್ನು ಜಕಣಾಚಾರಿಯ ಸುಪರ್ದಿಗೆ ಬಿಟ್ಟು ಕೊಟ್ಟರು. ಸುಮಾರು 18 ವರ್ಷಗಳ ಕಾಲ ನಡೆದ ಹಳೇಬೀಡಿನ ದೇವಾಲಯದ ಕಾರ್ಯ ಮುಗಿದ ನಂತರ ದೇವಸ್ಥಾನದ ಹೊರಾವರಣದ ಶಿಲ್ಪ ಕಲೆಯನ್ನು ಕಂಡು ಅತ್ಯಂತ ಸಂಭ್ರಮ, ಸಂತಸ ಪಟ್ಟ ಮಹಾರಾಜ ವಿಷ್ಣುವರ್ಧನನು ನಂತರ ಬೇಲೂರಿನ ದೇವಾಲಯದ ಸಂಪೂರ್ಣ ಜವಾಬ್ದಾರಿಯನ್ನು ಜಕಣಾಚಾರಿಗೆ ವಹಿಸಿಕೊಟ್ಟನು. ದೇವಾಲಯದ ಸುಕನಾಸಿ, ಜಾಲಂದ್ರಗಳು, ಗರ್ಭಗುಡಿಯ ಒಳಾವರಣದ ಕೆತ್ತನೆಯ ಕಂಬಗಳು, ತರುಲತೆಗಳು, ಶಿಲಾಬಾಲಿಕೆಯರು ಹೀಗೆ ಹತ್ತು ಹಲವು ಸುಂದರ ಚಿತ್ರಣಗಳನ್ನು ಜಕಣಾಚಾರಿಯು ಕೆತ್ತಿದನು. ಆತನ ಕೈಯಲ್ಲಿ ಶಿಲೆಯು ಬಳಪದ ಕಲ್ಲಿನಂತಹ ಕೋಮಲತೆಯಿಂದ ಬಯಸಿದ ಆಕಾರವನ್ನು ಪಡೆಯುತ್ತಿತ್ತು.
ಕಳೆದ 20 ವರ್ಷಗಳ ಹಿಂದೆಯೇ ತನ್ನ ಮನೆ ಬಿಟ್ಟು ಶಿಲ್ಪ ಕಲೆಯ ಈ ಮಹಾಮಣಿಹಕ್ಕೆ ಸನ್ನದ್ಧನಾಗಿ ಬಂದ ಜಕಣಾಚಾರಿಯ ಪತ್ನಿ ಛಾಯಾದೇವಿಯನ್ನು ಆಕೆಯ ಪುತ್ರ ಡಂಕಣ ತಂದೆಯ ಇರವನ್ನು ಕುರಿತು ಪ್ರಶ್ನಿಸಿದನು. ಅದಕ್ಕುತ್ತರವಾಗಿ ಜಕಣಾಚಾರಿಯ ಪತ್ನಿ ಛಾಯಾದೇವಿಯು ಡಂಕಣನು ಹುಟ್ಟಿದ ಕೆಲವೇ ದಿನಗಳಲ್ಲಿ ಬೇಲೂರು ಹಳೇಬೀಡುಗಳಲ್ಲಿ ಕಟ್ಟಿಸುತ್ತಿರುವ ದೇವಾಲಯಗಳಲ್ಲಿ ಸೇವೆ ಸಲ್ಲಿಸಲು ಜಕಣಾಚಾರಿಯು ಮನೆ ಬಿಟ್ಟು ಹೋಗಿರುವ ವಿಷಯವನ್ನು ಹೇಳಿದಳು. ತಂದೆಯನ್ನು ಅರಸಿ ಡಂಕಣನು ಹಳೇಬೀಡಿನೆಡೆಗೆ ಬಂದನು. ಶಿಲೆಯಲ್ಲವಿದು ಕಲೆಯ ಬಲೆ ಎಂಬಂತಿದ್ದ ದೇವಾಲಯದ ಅದ್ಭುತ ಶಿಲ್ಪಗಾರಿಕೆಯನ್ನು ಬೆಕ್ಕಿಸಬೆರಗಾಗಿ ನೋಡಿದ ಡಂಕಣನು ಅಲ್ಲಿ ತನ್ನ ತಂದೆಯನ್ನು ಕಾಣದೆ ಬೇಲೂರಿನೆಡೆಗೆ ಪಯಣ ಬೆಳೆಸಿದನು.
ಬೇಲೂರಿನಲ್ಲಿ ಅದ್ಭುತ ಶಿಲ್ಪ ಕಲೆಯನ್ನು ಮೂಕವಿಸ್ಮಿತನಾಗಿ ವೀಕ್ಷಿಸಿದ ಡಂಕಣನು ದೇವರ ವಿಗ್ರಹವನ್ನು ಕೆತ್ತುತ್ತಿರುವ ಸ್ಥಳಕ್ಕೆ ಹೊರಟು ನಿಂತಾಗ ಅಲ್ಲಿರುವ ಕಾವಲು ಪಡೆಯವರಿಂದ ಪ್ರತಿರೋಧ ಎದುರಿಸಿದನು. ಆದರೆ ಅಷ್ಟಕ್ಕೆ ಬಿಡದೆ ಮೇಲ್ವಿಚಾರಣೆ ನಡೆಸುತ್ತಿರುವವರಲ್ಲಿ ಹೋಗಿ ದೇವರ ವಿಗ್ರಹವನ್ನು ನೋಡಲು ಅನುಮತಿ ಪಡೆದುಕೊಂಡ ಆತ.
ಮುಂದೆ ನಡೆದದ್ದು ಇತಿಹಾಸ. ಇನ್ನೇನು ಕೆಲವೇ ತಿಂಗಳುಗಳಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು ಎಂಬ ಸಮಯದಲ್ಲಿ ಮಹಾರಾಜ ವಿಷ್ಣುವರ್ಧನನು ವಿಗ್ರಹವನ್ನು ನೋಡಲು ಬೇಲೂರಿಗೆ ಭೇಟಿ ನೀಡಿದ ಸಮಯವದು. ಆಗ ಡಂಕಣನು ಮಹಾರಾಜನಿಗೆ ಈ ವಿಗ್ರಹ ಪ್ರತಿಷ್ಠಾಪಿಸಲು ಯೋಗ್ಯವಲ್ಲ ಎಂದು ಹೇಳಿದನು. ಈ ಮಾತಿನಿಂದ ಖತಿಗೊಂಡ ಜಕಣಾಚಾರಿಯು ಅಕಸ್ಮಾತ್ ಈ ವಿಗ್ರಹವು ಪ್ರತಿಷ್ಟಾಪನೆಗೆ ಯೋಗ್ಯವಲ್ಲ ಎಂದು ಪರೀಕ್ಷೆಯ ನಂತರ ತಿಳಿದು ಬಂದರೆ ತನ್ನ ಬಲಗೈಯನ್ನು ಕಡಿದು ಅರ್ಪಿಸುವುದಾಗಿ ಪ್ರತಿಜ್ಞೆ ಮಾಡಿದ. ತನ್ನ ಮಂತ್ರಿಮಂಡಲದೊಂದಿಗೆ ಸಾರಾಸಾರ ವಿವೇಚನೆ ಮಾಡಿದ ಮಹಾರಾಜ ವಿಷ್ಣುವರ್ಧನನು ಡಂಕಣನು ತನ್ನ ಮಾತನ್ನು ಸಮರ್ಥಿಸಿಕೊಳ್ಳಲು ಒಂದು ಅವಕಾಶ ನೀಡಿದ. ಕೂಡಲೇ ಕಾರ್ಯ ಪ್ರವೃತ್ತನಾದ ಡಂಕಣನು ಪ್ರತಿಷ್ಠಾಪನೆಗೊಳ್ಳಲಿರುವ ವಿಗ್ರಹಕ್ಕೆ ಸಾಕಾಗುವಷ್ಟು ಪ್ರಮಾಣದ ಶ್ರೀಗಂಧದ ತಿಳಿಯನ್ನು ತೇಯಿಸಿ ಲೇಪಿಸಿದನು. ಮೂರು ದಿನಗಳ ನಂತರ ದೇವರ ವಿಗ್ರಹವನ್ನು ಪರೀಕ್ಷಿಸಲಾಗಿ ವಿಗ್ರಹದ ಉಳಿದೆಲ್ಲ ಭಾಗದಲ್ಲಿ ಗಂಧದ ತಿಳಿಯು ಒಣಗಿದ್ದು ಕೇವಲ ನಾಭಿ ಭಾಗದಲ್ಲಿ ಮಾತ್ರ ಗಂಧದ ತೇವ ಹಾಗೆಯೇ ಇತ್ತು. ಎಲ್ಲರೂ ಗಾಬರಿಗೊಂಡರೆ ಮಹಾರಾಜನ ಅಪ್ಪಣೆ ಪಡೆದ ಡಂಕಣನು ವಿಗ್ರಹದ ನಾಭಿಯ ಭಾಗದಲ್ಲಿ ಉಳಿಯಿಂದ ಪೆಟ್ಟು ಕೊಟ್ಟನು. ಕೆಲವೇ ಉಳಿ ಪೆಟ್ಟುಗಳ ನಂತರ ವಿಗ್ರಹದ ನಾಭಿಯ ಭಾಗದಲ್ಲಿ ಕೊಂಚ ನೀರು, ಸ್ವಲ್ಪ ಉಸುಕು, ಮತ್ತು ಒಂದು ಜೀವಂತ ಕಪ್ಪೆಯ ಇರವು ಗೋಚರಿಸಿತು. ಇದರಿಂದ ವಿಗ್ರಹ ಭಿನ್ನವಾಗಿ ಹೋಗಿದ್ದು ಪ್ರತಿಷ್ಠಾಪನೆಗೆ ಯೋಗ್ಯವಾಗಿರಲಿಲ್ಲ. ಕೂಡಲೇ ಜಕಣಾಚಾರಿಯು ತನ್ನ ಬಲಗೈಯನ್ನು ಕತ್ತರಿಸಿಕೊಂಡನು. ವಿಗ್ರಹ ಕೆತ್ತಲು ಬಳಸುವ ಕಲ್ಲುಗಳನ್ನು ಪುರುಷ ಮತ್ತು ಸ್ತ್ರೀ ವಿಗ್ರಹ ಕಲ್ಲುಗಳೆಂದು ವಿಂಗಡಿಸಲಾಗಿರುತ್ತದೆ. ಪುರುಷ ಕಲ್ಲಿನಿಂದ ಪುರುಷ ವಿಗ್ರಹವನ್ನು ಮತ್ತು ಸ್ತ್ರೀ ಕಲ್ಲಿನಿಂದ ಸ್ತ್ರೀ ವಿಗ್ರಹವನ್ನು ಮಾತ್ರ ಕೆತ್ತಬೇಕು ಎಂಬುದು ಶಿಲ್ಪಿಗಳ ಅಭಿಮತ. ಆದರೆ ಚೆನ್ನಕೇಶವನ ವಿಗ್ರಹ ಕೆತ್ತಲು ಬಳಸಿದ ಶಿಲಾ ಬಂಡೆಯು ಸ್ತ್ರೀ ಬಂಡೆಯಾಗಿದ್ದು ಅದರಲ್ಲಿ ಪುರುಷ ವಿಗ್ರಹವನ್ನು ಕೆತ್ತಿದ್ದು ಅದರಿಂದಲೇ ವಿಗ್ರಹ ದೋಷಪೂರಿತವಾಗಿತ್ತು ಎಂಬುದು ನಂತರ ತಿಳಿದುಬಂದಿತು.
ಮುಂದೆ ಜಕಣಾಚಾರಿಗೆ ಡಂಕಣನು ತನ್ನ ಮಗನೆಂದು ಅರಿವಾಗಿ ಶೀಘ್ರವೇ ಮಗನ ಸಹಾಯದಿಂದ ಮತ್ತೊಂದು ಚನ್ನಕೇಶವ ದೇವರ ವಿಗ್ರಹವನ್ನು ಕೆತ್ತಿದನು. ಹೀಗೆ ಚೆಲುವ ಚೆನ್ನಿಗರಾಯ ಚೆನ್ನಕೇಶವನು ವಿಗ್ರಹ ರೂಪದಲ್ಲಿ ಬೇಲೂರಿನ ಗುಡಿಯಲ್ಲಿ ಸ್ಥಾಪಿತನಾದನು. ಗುಡಿಯ ಪ್ರಾರಂಭೋತ್ಸವದ ದಿನ ಜಕಣಾಚಾರಿ ಮತ್ತು ಆತನ ಮಗ ಡಂಕಣನನ್ನು ಸನ್ಮಾನಿಸಿದ ಮಹಾರಾಜನು ಆತನಿಗೆ *ಅಮರಶಿಲ್ಪಿ* ಎಂಬ ಬಿರುದನ್ನು ನೀಡಿ ಗೌರವಿಸಿದನು.
ಚೆನ್ನಕೇಶವ ದೇವನು ಜಕಣಾಚಾರಿಯ ಸ್ವಪ್ನದಲ್ಲಿ ಬಂದು ಆತನ ಸ್ವಂತ ಊರಾದ ಕ್ರೀಡಿಕಾಪುರದಲ್ಲಿ ತನ್ನದೊಂದು ದೇಗುಲವನ್ನು ಕಟ್ಟಬೇಕೆಂದೂ, ಹಾಗೆ ಕಟ್ಟಿದ್ದೇ ಆದಲ್ಲಿ ಆತ ಕಡಿದುಕೊಂಡ ಕೈ ಮತ್ತೆ ಆತನಿಗೆ ದೊರೆಯುವುದು ಎಂದು ವರವನ್ನು ನೀಡಿ ಅಂತರ್ಧಾನನಾದನು. ಕನಸಿನಿಂದ ತಿಳಿದೆದ್ದ ಜಕಣಾಚಾರಿಯು ತನ್ನ ಸ್ವಪ್ನದ ವಿಷಯವನ್ನು ಮಹಾರಾಜನಿಗೆ ತಿಳಿಸಿ ತಾನು ತನ್ನೂರಿಗೆ ಮರಳುವುದಕ್ಕೆ ಅನುಮತಿ ಕೇಳಿದನು. ಸಕಲ ರಾಜ ಮರ್ಯಾದೆಯೊಂದಿಗೆ ಆತನನ್ನು ಬೀಳ್ಕೊಂಡ ಮಹಾರಾಜನು ಆತನಿಗೆ ಬೃಹತ್ ಶಿಲಾ ಬಂಡೆಯೊಂದನ್ನು ದೇವರ ವಿಗ್ರಹ ಕೆತ್ತಲು ಕಾಣಿಕೆಯಾಗಿ ನೀಡಿದನು. ಆತನ ಊರಲ್ಲಿ ನಿರ್ಮಿಸಲಿರುವ ದೇಗುಲಕ್ಕೆ ಬೇಕಾದ ಜಾಗವನ್ನು ಕೂಡ ನೀಡಿದನು. ಮುಂದೆ ಹಲವಾರು ವರ್ಷಗಳ ಕಾಲ ತನ್ನ ಊರಿನಲ್ಲಿ ಅತ್ಯಂತ ಸುಂದರವಾದ ದೇವಾಲಯವನ್ನು ನಿರ್ಮಿಸಿದ ಜಕಣಾಚಾರಿಯು ರಾಜನು ಉಡುಗೊರೆಯಾಗಿ ನೀಡಿದ ಬೃಹತ್ ಶಿಲಾ ಬಂಡೆಯಲ್ಲಿ ದೇವರ ವಿಗ್ರಹ ಕೆತ್ತಿದನು. ನಾಭಿಯಿಂದ ಕೆಳಭಾಗದಲ್ಲಿ ಪುರುಷ ವಿಗ್ರಹವನ್ನು ಬಳಸಿದ ಆತ ವಿಷ್ಣುವಿನ ಕೆಳ ಭಾಗವನ್ನು ಕೆತ್ತಿದನು. ನಾಭಿಯ ಮೇಲ್ಭಾಗದಲ್ಲಿಂದ ಶಿರದವರೆಗೆ ಸ್ತ್ರೀ ಬಂಡೆಯನ್ನು ಬಳಸಿದ ಜಕಣಾಚಾರಿಯು ಅಲ್ಲಿ ರಮೆ ಮತ್ತು ರುಕ್ಮಿಣಿಯರ ಜೊತೆಗೆ ವಿಷ್ಣುವಿನ ದಶಾವತಾರಗಳನ್ನು ಹೊಂದಿದ ಅತ್ಯಂತ ಸುಂದರವಾದ ಮೂರ್ತಿಯನ್ನು ಕೆತ್ತಿದನು. ಎಲ್ಲವೂ ತಯಾರಾಗಿ ನಿಗದಿತ ಸಮಯದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆಗೊಂಡಿತು ಮತ್ತು ಜಕಣಾಚಾರಿಯು ತನ್ನ ಕೈಯನ್ನು ಮರಳಿ ಪಡೆದನು. ಅಂದಿನಿಂದ ಕ್ರೀಡಿಕ ನಗರವು ಅಮರಶಿಲ್ಪಿ ಜಕಣಾಚಾರಿಯು ಕೈಯನ್ನು ಪಡೆದುಕೊಂಡ ದ್ಯೋತಕವಾಗಿ *ಕೈದಾಳ* ಎಂಬ ಹೆಸರನ್ನು ಪಡೆಯಿತು. ಜಕಣಾಚಾರಿಯು ತನ್ನ ಅಂತಿಮ ದಿನಗಳನ್ನು ಪತ್ನಿ ಪುತ್ರರೊಂದಿಗೆ ಕೈದಾಳದಲ್ಲಿಯೇ ಕಳೆದನು. ಇಂದಿಗೂ ಜಗತ್ತಿನ ಅತಿ ಸುಂದರ ದೇವಾಲಯಗಳಲ್ಲಿ ಬೇಲೂರು ಹಳೇಬೀಡುಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಅಂತಹ ಜಗದ್ವಿಖ್ಯಾತ ದೇವಾಲಯಗಳನ್ನು ಕನ್ನಡ ನಾಡಿಗೆ ಕೊಡಮಾಡಿದ ಅಮರಶಿಲ್ಪಿ ಜಕಣಾಚಾರಿ ಗೆ ನಮೋನ್ನಮಃ..