ಹಿರಿಯ ಬಿಜೆಪಿ ನಾಯಕ ರಾಮ್ ಮಾಧವ್ ಅಮೆರಿಕದಲ್ಲಿ ನೀಡಿದ ಹೇಳಿಕೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಕೈಗೊಂಬೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಅವರು ಟೀಕಿಸಿದ್ದು, ಹಿರಿಯ ಬಿಜೆಪಿ ನಾಯಕ ರಾಮ್ ಮಾಧವ್ ಅವರು ಅಮೆರಿಕದಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ಮೋದಿ ಸರ್ಕಾರದ “ಅಪಾಯಕಾರಿ” ಆದ್ಯತೆಗಳನ್ನು “ಬಹಿರಂಗಪಡಿಸಿದೆ” ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಆರ್‌ಎಸ್‌ಎಸ್ ನಾಯಕ ರಾಮ್ ಮಾಧವ್ ಅವರ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ. ಅದರಲ್ಲಿ ಇರಾನ್ ಮತ್ತು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಭಾರತ ಒಪ್ಪಿಕೊಂಡಿದೆ ಮತ್ತು ಅಮೆರಿಕ ವಿಧಿಸಿದ ಹೆಚ್ಚಿನ ಸುಂಕಗಳಿಗೆ ಒಪ್ಪಿಗಿ ಸೂಚಿಸಿದೆ ಎಂದು ಮಾಧವ್ ಹೇಳಿದ್ದಾರೆ.
ಅಮೆರಿಕದಲ್ಲಿ ಮಾಧವ್ ನೀಡಿದ ಹೇಳಿಕೆಗಳು “ಮೋದಿ ಸರ್ಕಾರದ ಅಪಾಯಕಾರಿ ಆದ್ಯತೆಗಳನ್ನು” ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ.
ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರೊಂದಿಗೆ ಮಾಧವ್ ಅಮೆರಿಕಕ್ಕೆ ಭೇಟಿ ನೀಡಿದ್ದು, ವಾಷಿಂಗ್ಟನ್‌ನ ಹಡ್ಸನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಇವು ರಾಜತಾಂತ್ರಿಕ ನಿರ್ಧಾರಗಳಲ್ಲ – ಅವು “ಸ್ವಯಂ ಶರಣಾಗತಿಯ ಲಜ್ಜೆಗೆಟ್ಟ ಕೃತ್ಯಗಳು” ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

